ಕಾರ್ಕಳ : ಜೀವನದಲ್ಲಿ ದೊರೆಯುವ ಅವಕಾಶಗಳನ್ನು ಶ್ರದ್ಧೆ, ಪ್ರಾಮಾಣಿಕತೆ ಹಾಗೂ ಬದ್ಧತೆಯಿಂದ ಬಳಸಿಕೊಂಡರೆ ಯಶಸ್ಸು ಸಾಧಿಸಲು ಸಾಧ್ಯ ಎಂದು ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಹೇಳಿದರು.
ಕಾರ್ಕಳದ ವಿಕಾಸ ಕಚೇರಿಯಲ್ಲಿ ವಿಕಾಸ ಸೇವಾ ಸಂಸ್ಥೆ ವತಿಯಿಂದ ಸೋಮವಾರ ಆಯೋಜಿಸಿದ್ದ ‘ವಿಕಾಸ ಉದ್ಯೋಗ ಸೇತು’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
2015ರಲ್ಲಿ ಇದೇ ಸಂಸ್ಥೆ ಆಯೋಜಿಸಿದ್ದ ಉದ್ಯೋಗ ಮೇಳದ ಮೂಲಕ 500ಕ್ಕೂ ಹೆಚ್ಚು ಯುವಕರು ಉದ್ಯೋಗ ಪಡೆದಿದ್ದರು. ಅದೇ ಮಾದರಿಯಲ್ಲಿ ಈ ಬಾರಿಯೂ ಹೆಚ್ಚಿನ ಯುವಜನರಿಗೆ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಈ ಬಾರಿ ಉದ್ಯೋಗ ಮೇಳಕ್ಕೆ 1,500ಕ್ಕೂ ಹೆಚ್ಚು ಅಭ್ಯರ್ಥಿಗಳು ನೋಂದಾಯಿಸಿದ್ದು, ಉದ್ಯೋಗ ಪಡೆಯಲು ಯಾವುದೇ ಶಿಫಾರಸು ಅಗತ್ಯವಿಲ್ಲ. ಅಭ್ಯರ್ಥಿಗಳ ವಿದ್ಯಾರ್ಹತೆ, ಕೌಶಲ ಹಾಗೂ ಕಾರ್ಯಕ್ಷಮತೆಯ ಆಧಾರದ ಮೇಲೆ ಉದ್ಯೋಗ ನೀಡಲಾಗುತ್ತದೆ ಎಂದು ಹೇಳಿದರು.
ಬೆಂಗಳೂರಿನ ವಿವಿಧ ಕಂಪನಿಗಳಿಗೆ ಆಯ್ಕೆಯಾಗುವ ವಿದ್ಯಾರ್ಥಿನಿಯರಿಗೆ ಕಂಪನಿಗಳ ವತಿಯಿಂದ ವಸತಿ ವ್ಯವಸ್ಥೆಯನ್ನೂ ಕಲ್ಪಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಆಳ್ವಾಸ್ ಎಜುಕೇಶನ್ ಫೌಂಡೇಶನ್ ಟ್ರಸ್ಟಿ ವಿವೇಕ್ ಆಳ್ವಾ ಮಾತನಾಡಿ, ಇಂತಹ ಬೃಹತ್ ಉದ್ಯೋಗ ಮೇಳ ಆಯೋಜಿಸಿರುವುದು ಶ್ಲಾಘನೀಯ ಕಾರ್ಯವಾಗಿದ್ದು, ವಿದ್ಯಾರ್ಥಿಗಳು ಸದಾ ಸಕಾರಾತ್ಮಕ ಮನೋಭಾವ ಮತ್ತು ಸ್ಪರ್ಧಾತ್ಮಕ ದೃಷ್ಟಿಕೋನ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕ್ರಿಯೇಟಿವ್ ಕಾಲೇಜಿನ ಸಹ-ಸಂಸ್ಥಾಪಕ ಅಶ್ವಥ್ ಎಸ್.ಎಲ್. ಮಾತನಾಡಿ, ಸಹನೆ, ಕಠಿಣ ಪರಿಶ್ರಮ ಮತ್ತು ಆತ್ಮವಿಶ್ವಾಸವೇ ಯಶಸ್ಸಿನ ಮೂಲಮಂತ್ರಗಳಾಗಿವೆ ಎಂದರು.
ಫಾಕ್ಸ್‌ಕಾನ್ ಕಂಪನಿಯ ವ್ಯವಸ್ಥಾಪಕ ದಯಾನಂದ್ ಮಾತನಾಡಿ, ಉದ್ಯೋಗ ಪಡೆಯಲು ಪೂರ್ವಸಿದ್ಧತೆ, ನಿರಂತರ ಕಲಿಕೆ ಹಾಗೂ ಸವಾಲುಗಳನ್ನು ಎದುರಿಸುವ ಮನೋಭಾವ ಅತ್ಯಗತ್ಯ. ಉದ್ಯೋಗ ಪಡೆಯುವುದಷ್ಟೇ ಗುರಿಯಾಗಬಾರದು, ಅದನ್ನು ಉತ್ತಮ ಭವಿಷ್ಯ ನಿರ್ಮಾಣಕ್ಕೆ ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕರುಣಾಕರ ಕೋಟ್ಯಾನ್ ನಿರೂಪಣೆ ನಡೆಸಿದರು. ಸುಮಾ ಪ್ರಾರ್ಥಿಸಿ, ರಾಜೇಶ್ ಆಚಾರ್ಯ ಸ್ವಾಗತಿಸಿದರು. ವಿವಿಧ ಕ್ಷೇತ್ರಗಳ ಗಣ್ಯರು, ಉದ್ಯೋಗದಾತರು ಹಾಗೂ ನೂರಾರು ಉದ್ಯೋಗಾಕಾಂಕ್ಷಿ ಯುವಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

