
ಮಂಗಳೂರು : ಪ್ರಸ್ತುತ ಸನ್ನಿವೇಶದಲ್ಲಿ ಜನರಲ್ಲಿ ಪುಸ್ತಕ, ಪತ್ರಿಕೆಗಳನ್ನು ಓದುವ ಅಭ್ಯಾಸ ಕ್ಷೀಣಿಸುತ್ತಿದ್ದು, ಮೊಬೈಲ್ ವೀಕ್ಷಿಸುವ ಹವ್ಯಾಸ ವೃದ್ಧಿಯಾಗುತ್ತಿದೆ ಎಂದು ಮಂಗಳೂರು ಮೀನುಗಾರಿಕಾ ಮಹಾವಿದ್ಯಾಲಯದ ಮಾಜಿ ಡೀನ್ ಹಾಗೂ ಪ್ರಾಧ್ಯಾಪಕ ಡಾ. ಶಿವಕುಮಾರ್ ಮಗದ ಖೇದ ವ್ಯಕ್ತಪಡಿಸಿದ್ದಾರೆ.
ಭಾರತೀಯ ವೈದ್ಯಕೀಯ ಸಂಘದ ಮಂಗಳೂರು ಶಾಖೆ ಮತ್ತು ವೈದ್ಯಕೀಯ ಶಿಕ್ಷಣ ವಿದ್ಯಾರ್ಥಿಗಳ ಸಂಘದ ಜಂಟಿ ಆಶ್ರಯದಲ್ಲಿ ದಿನಾಂಕ 8.10.2026ರಂದು ನಗರದ ಹೋಟೆಲ್ ಓಷ್ಯನ್ ಪರ್ಲ್ ಸಭಾಂಗಣದಲ್ಲಿ ಜರುಗಿದ “ಮೀಟ್ ದ ಆಥರ್” ಎಂಬ ಶೈಕ್ಷಣಿಕ ಕಾರ್ಯಗಾರದಲ್ಲಿ ಗೌರವ ಅತಿಥಿಯಾಗಿ ಭಾಗವಹಿಸಿ, ವೈದ್ಯಕೀಯ ಶಿಕ್ಷಣ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.
ವೈದ್ಯಕೀಯ ಕ್ಷೇತ್ರದಲ್ಲಿ ಜನಸಾಮಾನ್ಯರಿಗೆ ಅವರ ಆರ್ಥಿಕ ಸ್ಥಿತಿಗತಿಗಳನ್ನು ಪರಿಗಣಿಸಿ, ಸೂಕ್ತ ಆರೋಗ್ಯ ಸೇವೆ ಮತ್ತು ಆಸ್ಪತ್ರೆಯ ವೆಚ್ಚವನ್ನು ಕೈಗೆಟುಕುವಂತಹ ದರದಲ್ಲಿ ಒದಗಿಸಬೇಕು ಎಂದು ಅವರು ಸಂಬಂಧಿತ ಆಡಳಿತ ಮಂಡಳಿಗಳಿಗೆ ಸಲಹೆ ನೀಡಿದರು.
ವೈದ್ಯಕೀಯ ಶಿಕ್ಷಣ ವಿದ್ಯಾರ್ಥಿಗಳಿಗಾಗಿ ರಚಿಸಿದ “ಮ್ಯಾನುವಲ್ ಆಫ್ ಸರ್ಜರಿ” ಪಠ್ಯಪುಸ್ತಕದ ಖ್ಯಾತ ಲೇಖಕ, ಕೆಎಂಸಿ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕ ಹಾಗೂ ಶಸ್ತ್ರಚಿಕಿತ್ಸಾ ವಿಭಾಗದ ಮಾಜಿ ಮುಖ್ಯಸ್ಥ ಡಾ. ಶ್ರೀರಾಮ್ ಭಟ್ ಮಾತನಾಡಿ, ವಿದ್ಯೆಗೆ ಅಂತ್ಯವಿಲ್ಲ. ಶಸ್ತ್ರಚಿಕಿತ್ಸೆ ಒಂದು ಕಲೆ. ಪಠ್ಯಪುಸ್ತಕ ಬರೆಯಲು ಅಗಾಧವಾದ ಶ್ರದ್ಧೆ, ಬದ್ಧತೆ, ಕಠಿಣ ಪರಿಶ್ರಮ, ವಿಶಾಲವಾದ ಜ್ಞಾನ ಹಾಗೂ ಕಠಿಣ ಸವಾಲುಗಳನ್ನು ಎದುರಿಸುವ ದೈರ್ಯ ಇರಬೇಕು ಎಂದು ನುಡಿದರು.
ಪ್ರಸ್ತುತ ದೇಶದ ವಿವಿಧ ಆಸ್ಪತ್ರೆಗಳಲ್ಲಿ ಅತ್ಯುನ್ನತ ಮಟ್ಟದ ಶಸ್ತ್ರಚಿಕಿತ್ಸಾ ಸೌಲಭ್ಯ ಗಳು ಲಭ್ಯ ಇವೆ ಎಂದು ಮಾಹಿತಿ ನೀಡಿದ ಅವರು, ಬಳಿಕ ವೈದ್ಯಕೀಯ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಡಾ.ಶ್ರೀರಾಮ್ ಭಟ್ ರಚಿಸಿದ ಈ ಪಠ್ಯಪುಸ್ತಕದ ಪ್ರತಿಗಳು ಇದುವರೆಗೆ 3.50 ಲಕ್ಷಕ್ಕೂ ಅಧಿಕ ಮಾರಾಟದ ದಾಖಲೆ ನಿರ್ಮಿಸಿದೆ. ಭಾರತೀಯ ವೈದ್ಯಕೀಯ ಸಂಘದ ಮಂಗಳೂರು ಶಾಖೆಯ ಅಧ್ಯಕ್ಷ ಡಾ. ಸದಾನಂದ ಪೂಜಾರಿ ಅವರು ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಸಂಸ್ಥೆಯ ಕೋಶಾಧಿಕಾರಿ ಡಾ. ಜ್ಯೂಲಿಯನ್ ಸಲ್ದಾನಾ, ಮಾಜಿ ಕಾರ್ಯದರ್ಶಿ ಡಾ. ಅವಿನ್ ಆಳ್ವ ಮತ್ತು ಸಂಸ್ಥೆಯ ಸಾಮಾಜಿಕ ಜಾಲತಾಣದ ಮುಖ್ಯಸ್ಥ ಶಶಾಂಕ್ ರಾಕೇಶ್ ಉಪಸ್ಥಿತರಿದ್ದರು.
ಕಾರ್ಯಕ್ರಮದ ಸಂಘಟನಾ ಮುಖ್ಯಸ್ಥ ಸೋಹನ್ ಕುಮಾರ್ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಸಿದ್ದಾರ್ಥ್ ಸೆಲ್ವರಾಜ್ ವಂದಿಸಿದರು. ಅಕ್ಷತಾ ಕಾರ್ಯಕ್ರಮ ನಿರೂಪಿಸಿದರು.
