
ಮಂಗಳೂರು : ಡಿಜಿಟಲ್ ಬ್ಯಾಂಕಿಂಗ್ ವಂಚನೆಗಳ ಕುರಿತು ಗ್ರಾಹಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಬ್ಯಾಂಕ್ ಆಫ್ ಬರೋಡಾ ‘ಬಾಬ್ ಸೈಬರ್ ವೀರು’ (bob Cyber Veeru) ಎಂಬ ಸೈಬರ್ ಸುರಕ್ಷತಾ ಅಭಿಯಾನವನ್ನು ಬಲಪಡಿಸಿದೆ.
ಡಿಜಿಟಲ್ ಬ್ಯಾಂಕಿಂಗ್ ಸೇವೆಗಳ ಬಳಕೆ ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ, ಗ್ರಾಹಕರು ಸೈಬರ್ ವಂಚನೆಗಳನ್ನು ಗುರುತಿಸಿ ಅವುಗಳಿಂದ ಸುರಕ್ಷಿತರಾಗಲು ಸರಳ ಹಾಗೂ ಪ್ರಾಯೋಗಿಕ ಮಾರ್ಗದರ್ಶನ ನೀಡುವುದು ಈ ಅಭಿಯಾನದ ಪ್ರಮುಖ ಉದ್ದೇಶವಾಗಿದೆ. ಸ್ನೇಹಪರ ಮಾರ್ಗದರ್ಶಿಯ ರೂಪದಲ್ಲಿ ಪರಿಚಯಿಸಲಾದ ‘ಬಾಬ್ ಸೈಬರ್ ವೀರು’ ಮೂಲಕ ಕಿರು ವೀಡಿಯೊಗಳು, ಮಾಹಿತಿ ಚಿತ್ರಗಳು, ತ್ವರಿತ ಸಲಹೆಗಳು ಮತ್ತು ಸಾಮಾನ್ಯ ಪ್ರಶ್ನೆಗಳಿಗೆ ಉತ್ತರಗಳ ಮೂಲಕ ಗ್ರಾಹಕರಿಗೆ ಅರಿವು ಮೂಡಿಸಲಾಗುತ್ತಿದೆ.
ನಕಲಿ ಕೊಂಡಿಗಳು, ವಂಚನೆಯ ಕೆವೈಸಿ ಮನವಿಗಳು, ನಕಲಿ ಗ್ರಾಹಕ ಸೇವಾ ಕರೆಗಳು, ಕ್ಯೂಆರ್ ಸಂಜ್ಞೆ ಮತ್ತು ಯುಪಿಐ ಮೂಲಕ ನಡೆಯುವ ವಂಚನೆಗಳು ಹಾಗೂ ಮೊಬೈಲ್ ಪರದೆಯನ್ನು ಹಂಚಿಕೊಳ್ಳುವಂತೆ ಮಾಡಿ ವಂಚಿಸುವ ತಂತ್ರಗಳ ಬಗ್ಗೆ ಈ ಅಭಿಯಾನದಲ್ಲಿ ಮಾಹಿತಿ ನೀಡಲಾಗುತ್ತದೆ.
ಯಾವುದೇ ಕೊಂಡಿಯನ್ನು ತೆರೆಯುವ ಮೊದಲು, ಹಣಕಾಸಿನ ವಹಿವಾಟಿಗೆ ಅನುಮೋದನೆ ನೀಡುವ ಮೊದಲು ಅಥವಾ ವೈಯಕ್ತಿಕ ಹಾಗೂ ಬ್ಯಾಂಕಿಂಗ್ ಮಾಹಿತಿಯನ್ನು ಹಂಚಿಕೊಳ್ಳುವ ಮೊದಲು ಅದರ ವಿಶ್ವಾಸಾರ್ಹತೆಯನ್ನು ಪರಿಶೀಲಿಸುವಂತೆ ಗ್ರಾಹಕರಿಗೆ ಸಲಹೆ ನೀಡಲಾಗುತ್ತಿದೆ.
ಈ ಕುರಿತು ಮಾತನಾಡಿದ ಬ್ಯಾಂಕ್ ಆಫ್ ಬರೋಡಾದ ಕಾರ್ಯನಿರ್ವಾಹಕ ನಿರ್ದೇಶಕಿ ಬೀನಾ ವಾಹೀದ್ ಅವರು, ಡಿಜಿಟಲ್ ಬ್ಯಾಂಕಿಂಗ್ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗುತ್ತಿರುವ ಸಂದರ್ಭದಲ್ಲಿ ಸೈಬರ್ ವಂಚನೆಗಳಿಂದ ರಕ್ಷಿಸಿಕೊಳ್ಳಲು ಜಾಗೃತಿ ಮತ್ತು ಎಚ್ಚರಿಕೆ ಅತ್ಯಗತ್ಯ ಎಂದು ತಿಳಿಸಿದ್ದಾರೆ. ಗ್ರಾಹಕರು ಸಾಮಾನ್ಯ ಸೈಬರ್ ಅಪಾಯಗಳನ್ನು ಗುರುತಿಸಿ, ಸೂಕ್ತ ನಿರ್ಧಾರಗಳನ್ನು ಕೈಗೊಂಡು ವಿಶ್ವಾಸದಿಂದ ಬ್ಯಾಂಕಿಂಗ್ ಸೇವೆಗಳನ್ನು ಬಳಸುವಂತೆ ಸರಳ ಮತ್ತು ಪ್ರಾಯೋಗಿಕ ಸಲಹೆಗಳನ್ನು ಒದಗಿಸುವುದು ಅಭಿಯಾನದ ಉದ್ದೇಶವಾಗಿದೆ ಎಂದು ಅವರು ಹೇಳಿದ್ದಾರೆ.
ಬ್ಯಾಂಕಿನ ಶಾಖೆಗಳು, ಎಟಿಎಂಗಳು, ಜಾಲತಾಣ, ಸಾಮಾಜಿಕ ಮಾಧ್ಯಮಗಳು, ಇ-ಮೇಲ್, ಕಿರು ಸಂದೇಶಗಳು, ಮುದ್ರಣ ಮಾಧ್ಯಮ ಹಾಗೂ ಇತರ ಸಂಪರ್ಕ ಮಾಧ್ಯಮಗಳ ಮೂಲಕ ಈ ಅಭಿಯಾನವನ್ನು ಪ್ರಚಾರ ಮಾಡಲಾಗುತ್ತಿದೆ.
ರಾಷ್ಟ್ರೀಯ ಸೈಬರ್ ಸುರಕ್ಷತಾ ಜಾಗೃತಿ ಮಾಸದ ಅಂಗವಾಗಿ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯಕ್ರಮಗಳು, ಉದ್ಯೋಗಿಗಳಿಗೆ ಜಾಗೃತಿ ಕಾರ್ಯಾಗಾರಗಳು ಹಾಗೂ ಸೈಬರ್ ವಂಚನೆ ತಡೆಗೆ ಮಹತ್ವದ ಕೊಡುಗೆ ನೀಡಿದ ಸಿಬ್ಬಂದಿಯನ್ನು ಗೌರವಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಬ್ಯಾಂಕ್ ಉದ್ದೇಶಿಸಿದೆ.
‘ಎಚ್ಚರಿಕೆಯಿಂದಿರಿ, ಸುರಕ್ಷಿತವಾಗಿರಿ’ ಎಂಬ ಸಂದೇಶದೊಂದಿಗೆ ಗ್ರಾಹಕರಲ್ಲಿ ಸೈಬರ್ ಸುರಕ್ಷತೆಯ ಅರಿವು ಹೆಚ್ಚಿಸಿ, ಸುರಕ್ಷಿತ ಹಾಗೂ ಜವಾಬ್ದಾರಿಯುತ ಡಿಜಿಟಲ್ ಬ್ಯಾಂಕಿಂಗ್ ಅಭ್ಯಾಸಗಳನ್ನು ಬೆಳೆಸಲು ಬ್ಯಾಂಕ್ ಆಫ್ ಬರೋಡಾ ಮುಂದಾಗಿದೆ.
