ಇರಾ ನೇಮು ಪೂಜಾರಿ ಅವರಿಗೆ ಕನ್ನಡ ಭವನದ ಕನ್ನಡ ರಾಜ್ಯೋತ್ಸವ ಗೌರವ ಪ್ರಶಸ್ತಿ

0
17

ಕಾಸರಗೋಡು : ಸಾಹಿತ್ಯ ಸಂಘಟಕ, ಸಮಾಜ ಸೇವಕ ಹಾಗೂ ಚುಟುಕು ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷ, ನಿವೃತ್ತ ಪ್ರಾಧ್ಯಾಪಕ ಇರಾ ನೇಮು ಪೂಜಾರಿ ಅವರು ಕನ್ನಡ ಭವನದ 2026ನೇ ಸಾಲಿನ ‘ಕನ್ನಡ ರಾಜ್ಯೋತ್ಸವ ಗೌರವ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ.

ಗಡಿನಾಡು ಕಾಸರಗೋಡಿನ ಡಾ. ವಾಮನ್ ರಾವ್ ಬೇಕಲ್ ಮತ್ತು ಸಂಧ್ಯಾರಾಣಿ ಅವರ ಸಾರಥ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ (ರಿ.) ಸಂಸ್ಥೆಯು ಪ್ರತಿವರ್ಷ ಆಯೋಜಿಸುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವು ಈ ಬಾರಿ ನವೆಂಬರ್ 1ರಂದು ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ.

ಕರ್ನಾಟಕ ಸರಕಾರದ ವಾಣಿಜ್ಯ ತೆರಿಗೆ ಇಲಾಖೆಯ ಕನ್ನಡ ಸಂಘದ ಸಹಭಾಗಿತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಸಂದರ್ಭದಲ್ಲಿ ಕನ್ನಡ ಭವನದ 10 ಮಂದಿ ಪದಾಧಿಕಾರಿಗಳಿಗೆ ಕನ್ನಡ ಸಂಘ, ವಾಣಿಜ್ಯ ತೆರಿಗೆ ಇಲಾಖೆ, ಬೆಂಗಳೂರು ವತಿಯಿಂದ ಕರ್ನಾಟಕ ರಾಜ್ಯೋತ್ಸವ ಸನ್ಮಾನ ನೀಡಿ ಗೌರವಿಸಲಾಗುತ್ತದೆ. ಇದೇ ಕಾರ್ಯಕ್ರಮದಲ್ಲಿ ಕನ್ನಡ ಭವನ ಹಾಗೂ ಕನ್ನಡ ಸಂಘ, ಬೆಂಗಳೂರು ಇದರ ಸಂಚಾಲಕರೂ ಸೇರಿದಂತೆ 10 ಮಂದಿಗೆ ಕನ್ನಡ ರಾಜ್ಯೋತ್ಸವ ಗೌರವ ಸನ್ಮಾನ ಪ್ರದಾನ ಮಾಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ಕನ್ನಡ ಭಾಷೆ, ಸಾಹಿತ್ಯ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಾಧಕರನ್ನು ಗುರುತಿಸಿ ಕನ್ನಡ ಭವನವು ಪ್ರತಿವರ್ಷ ನೀಡುವ ‘ಕನ್ನಡ ರಾಜ್ಯೋತ್ಸವ ಪ್ರಶಸ್ತಿ’ಗೆ ಈ ಬಾರಿ ಇರಾ ನೇಮು ಪೂಜಾರಿ ಅವರು ಆಯ್ಕೆಯಾಗಿದ್ದಾರೆ.

ನವೆಂಬರ್ 1ರಂದು ಕಾಸರಗೋಡಿನ ಕನ್ನಡ ಭವನದ ‘ಕನ್ನಡ ಭುವನೇಶ್ವರಿ ವೇದಿಕೆ’ಯಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಇರಾ ನೇಮು ಪೂಜಾರಿ ಅವರ ಆಯ್ಕೆಯನ್ನು ಕನ್ನಡ ಭವನದ ಸ್ಥಾಪಕ ಅಧ್ಯಕ್ಷ ಡಾ. ವಾಮನ್ ರಾವ್ ಬೇಕಲ್ ಹಾಗೂ ಕಾರ್ಯದರ್ಶಿ ವಸಂತ್ ಕೆರೆಮನೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.