ನ್ಯಾಯಾಲಯದ ಕಲಾಪಗಳಿಗೆ ಅಡ್ಡಿಯಾಗುತ್ತಿರುವ ಜೈಲು ಜಾಮರ್: ಸೆ.18ರಂದು ವಕೀಲರ ಪ್ರತಿಭಟನೆ

0
11

ಮಂಗಳೂರು: ಕೊಡಿಯಾಲ್‌ಬೈಲ್‌ನ ಜಿಲ್ಲಾ ಕಾರಾಗೃಹದಲ್ಲಿ ಅಳವಡಿಸಲಾಗಿರುವ ಮೊಬೈಲ್ ಜಾಮರ್‌ನಿಂದ ನ್ಯಾಯಾಲಯದ ಕಲಾಪಗಳು ಸೇರಿದಂತೆ ಸುತ್ತಮುತ್ತಲಿನ ಸಾರ್ವಜನಿಕರ ದೈನಂದಿನ ಚಟುವಟಿಕೆಗಳಿಗೆ ಮೊಬೈಲ್ ಸಂಪರ್ಕದ ಸಮಸ್ಯೆ ಉಂಟಾಗುತ್ತಿದೆ ಎಂದು ಆರೋಪಿಸಿ ಮಂಗಳೂರು ವಕೀಲರ ಸಂಘ ಪ್ರತಿಭಟನೆಗೆ ಮುಂದಾಗಿದೆ.

ಜಾಮರ್‌ನಿಂದ ಉಂಟಾಗುತ್ತಿರುವ ಸಮಸ್ಯೆಯನ್ನು ಹಲವು ಬಾರಿ ಸರ್ಕಾರದ ಗಮನಕ್ಕೆ ತರಲಾಗಿದ್ದರೂ ಇದುವರೆಗೆ ಶಾಶ್ವತ ಪರಿಹಾರ ದೊರೆತಿಲ್ಲ ಎಂದು ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಜಗದೀಶ್ ಕೆ. ಶೇಣವ ತಿಳಿಸಿದ್ದಾರೆ. ನ್ಯಾಯಾಲಯದ ವಕೀಲರು, ಕಕ್ಷಿದಾರರು, ಸಿಬ್ಬಂದಿ ಹಾಗೂ ಸಾರ್ವಜನಿಕರಿಗೆ ತುರ್ತು ಸಂಪರ್ಕ ಸಾಧಿಸಲು ತೊಂದರೆಯಾಗುತ್ತಿದ್ದು, ನ್ಯಾಯಾಲಯದ ದೈನಂದಿನ ಕಾರ್ಯಚಟುವಟಿಕೆಗಳ ಮೇಲೂ ಪರಿಣಾಮ ಬೀರುತ್ತಿದೆ ಎಂದು ಸಂಘ ಹೇಳಿದೆ.

ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 18ರಂದು ಪಡೀಲ್‌ನಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲು ವಕೀಲರ ಸಂಘ ನಿರ್ಧರಿಸಿದೆ. ಸುಮಾರು 250 ಮಂದಿ ವಕೀಲರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಶೇಣವ ತಿಳಿಸಿದ್ದಾರೆ.

ಜೈಲಿನ ಭದ್ರತೆ ಮುಖ್ಯವಾಗಿದ್ದರೂ, ಜಾಮರ್‌ನ ಪರಿಣಾಮ ಜೈಲು ಆವರಣದ ಹೊರಗೆ ವ್ಯಾಪಿಸಿ ನ್ಯಾಯಾಲಯ, ಶಿಕ್ಷಣ ಸಂಸ್ಥೆಗಳು, ವ್ಯಾಪಾರ-ವಾಣಿಜ್ಯ ಚಟುವಟಿಕೆಗಳು ಹಾಗೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ವೈಜ್ಞಾನಿಕ ಮತ್ತು ತಾಂತ್ರಿಕ ಪರಿಹಾರವನ್ನು ಸರ್ಕಾರ ಕಂಡುಕೊಳ್ಳಬೇಕು ಎಂದು ವಕೀಲರ ಸಂಘ ಒತ್ತಾಯಿಸಿದೆ.

ಸೆಪ್ಟೆಂಬರ್ 18ರಂದು ಮಂಗಳೂರಿನಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿರುವ ಹಿನ್ನೆಲೆಯಲ್ಲಿ ಪ್ರತಿಭಟನೆಗೆ ಹೆಚ್ಚಿನ ಗಮನ ಸೆಳೆಯುವ ಸಾಧ್ಯತೆಯಿದೆ. ಜಾಮರ್ ತೆರವುಗೊಳಿಸುವುದು ಅಥವಾ ಅದರ ಪರಿಣಾಮವನ್ನು ಜೈಲು ಆವರಣಕ್ಕೆ ಮಾತ್ರ ಸೀಮಿತಗೊಳಿಸುವ ತಾಂತ್ರಿಕ ಪರಿಹಾರ ಕೈಗೊಳ್ಳಬೇಕು ಎಂಬುದು ವಕೀಲರ ಪ್ರಮುಖ ಬೇಡಿಕೆಯಾಗಿದೆ.

ಈ ನಡುವೆ ಜಾಮರ್ ವಿಚಾರವನ್ನು ರಾಜಕೀಯಗೊಳಿಸದೆ ವೈಜ್ಞಾನಿಕ ಹಾಗೂ ತಾಂತ್ರಿಕ ಪರಿಶೀಲನೆಯ ಮೂಲಕ ಪರಿಹರಿಸಬೇಕು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.