ಬುಡ್ಗಾಮ್: ಜಮ್ಮು-ಕಾಶ್ಮೀರದ ಬುಡ್ಗಾಮ್ ಜಿಲ್ಲೆಯಲ್ಲಿ ನಡೆದ ನಾಕಾ-ತಪಾಸಣಾ ಕಾರ್ಯಾಚರಣೆಯ ಸಂದರ್ಭದಲ್ಲಿ ಭದ್ರತಾ ಪಡೆಗಳು ಇಬ್ಬರು ಭಯೋತ್ಪಾದಕ ಸಹಚರರನ್ನು ಬಂಧಿಸಿದ್ದು, ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಹಾಗೂ ಗ್ರೆನೇಡ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಬುಡ್ಗಾಮ್ನ ಮಾಗಮ್‌ನ ಬುಚಿಪೋರಾ ಕವೂಸಾ ಅರೇಸ್‌ನಲ್ಲಿ ನಾಕಾ ತಪಾಸಣೆ ಕಾರ್ಯಾಚರಣೆಯ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ.
ಒಂದು ಪಿಸ್ತೂಲ್, ಒಂದು ಗ್ರೆನೇಡ್ ಮತ್ತು 15 ಸಜೀವ ಗುಂಡುಗಳು ಸೇರಿದಂತೆ ಹೆಚ್ಚಿನ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಪೊಲೀಸರು ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.
ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ ನಂತರ, ಕೇಂದ್ರಾಡಳಿತ ಪ್ರದೇಶದ ಭದ್ರತಾ ಪಡೆಗಳು ಭದ್ರತೆಯನ್ನು ಹೆಚ್ಚಿಸಿವೆ ಮತ್ತು ಪ್ರದೇಶದಾದ್ಯಂತ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯನ್ನು ತೀವ್ರಗೊಳಿಸಿವೆ.
ಮೇ 7ರಂದು ದೇಶಾದ್ಯಂತ ಮಾಕ್ ಡ್ರಿಲ್ ನಡೆಸುವಂತೆ ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೂ ಸೂಚನೆ ನೀಡಿದೆ. ಕೇಂದ್ರ ಗೃಹ ಸಚಿವಾಲಯ ಇಂದು ಆದೇಶ ನೀಡಿದ್ದು, ನಾಗರಿಕರ ರಕ್ಷಣೆಯ ಸಂಬಂಧ ಮೇ 7ರಂದು ದೇಶಾದ್ಯಂತ ಅಣಕು ಪ್ರದರ್ಶನ ಮಾಡಿಸಿ. ಎಲ್ಲಾ ರಾಜ್ಯಗಳಲ್ಲಿ ವಾಯುದಾಳಿಯ ಸೈರನ್ ವ್ಯವಸ್ಥೆ ಇರುವಂತೆ ನೋಡಿಕೊಳ್ಳಿ ಎಂದು ಸೂಚನೆ ನೀಡಲಾಗಿದೆ.
ಪ್ರತಿಕೂಲ ದಾಳಿಯ ಸಂದರ್ಭದಲ್ಲಿ ಸಿದ್ಧತೆಯನ್ನು ಪರೀಕ್ಷಿಸಲು ಮತ್ತು ಸಾರ್ವಜನಿಕ ಜಾಗೃತಿಯನ್ನು ಹೆಚ್ಚಿಸಲು ಮೇ 7ರ ಬುಧವಾರ ಸಮಗ್ರ ನಾಗರಿಕ ರಕ್ಷಣಾ ಅಣಕು ಕಸರತ್ತುಗಳನ್ನು ನಡೆಸುವಂತೆ ಗೃಹ ಸಚಿವಾಲಯ (MHA) ರಾಜ್ಯಗಳಿಗೆ ನಿರ್ದೇಶನ ನೀಡಿದೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತೀಯ ಸಶಸ್ತ್ರ ಪಡೆಗಳು ಪ್ರತೀಕಾರದ ದಾಳಿ ನಡೆಸುವ ಭೀತಿ ಹೆಚ್ಚುತ್ತಿರುವ ನಡುವೆ, ಪಾಕಿಸ್ತಾನವು 120 ಕಿಲೋಮೀಟರ್ ದೂರದವರೆಗಿನ ಗುರಿಗಳನ್ನು ಹೊಡೆಯುವ ಸಾಮರ್ಥ್ಯವಿರುವ ಮೇಲ್ಮೈಯಿಂದ ಮೇಲ್ಮೈಗೆ ಚಿಮ್ಮುವ ಕ್ಷಿಪಣಿಯನ್ನು ಪರೀಕ್ಷಿಸಿದೆ ಎಂದು ಪಾಕಿಸ್ತಾನಿ ಮಾಧ್ಯಮ ವರದಿಗಳು ತಿಳಿಸಿವೆ.
ಮೇಲ್ಮೈಯಿಂದ ಮೇಲ್ಮೈಗೆ ಚಿಮ್ಮುವ ಈ ಕ್ಷಿಪಣಿಗೆ ‘ಫತಾಹ್’ ಎಂದು ಹೆಸರಿಸಲಾಗಿದೆ. ಈ ಮೂಲಕ ಪಾಕಿಸ್ತಾನ ಯುದ್ಧಕ್ಕೆ ಭರಪೂರ ಸಿದ್ಧತೆ ನಡೆಸಿದೆ. ರಷ್ಯಾದ ಮಾಸ್ಕೋದಲ್ಲಿರುವ ಪಾಕಿಸ್ತಾನ ರಾಯಭಾರಿ ಮೊಹಮ್ಮದ್ ಖಾಲಿದ್ ಜಮಾಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಪರಿಸ್ಥಿತಿಯನ್ನು ಶಮನಗೊಳಿಸಲು ರಷ್ಯಾದ ಸಹಾಯವನ್ನು ಕೋರಿದ್ದರು.
1966ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಸಶಸ್ತ್ರ ಸಂಘರ್ಷವನ್ನು ಕೊನೆಗೊಳಿಸಲು ಸಹಾಯ ಮಾಡಿದ ತಾಷ್ಕೆಂಟ್ ಮಾತುಕತೆಗಳ ಸಮಯದಲ್ಲಿ ರಷ್ಯಾ ಮಾಡಿದಂತೆ ಈ ದ್ವಿಮುಖ ಸಂಬಂಧವನ್ನು ಬಳಸಿಕೊಂಡು ಮಧ್ಯಸ್ಥಿಕೆ ವಹಿಸಬಹುದು ಎಂದು ಅವರ ಮನವಿ ಮಾಡಿದ್ದಾರೆ.