ಜೆಟ್ ಲ್ಯಾಗ್..!

0
19

ವಿಮಾನ ಪ್ರಯಾಣ ಎನ್ನುವುದು ಸಮಯದ ಉಳಿಕೆಯ ದೃಷ್ಟಿಯಿಂದ ಲಾಭವೆನಿಸಿದರೂ ದೇಹದ ಆರೋಗ್ಯದ ಹಿತ ದೃಷ್ಟಿಯಿಂದ ನೋಡಿದ್ದಲ್ಲಿ ವಿಭಿನ್ನ ಸಮಯದ ವಲಯಗಳಲ್ಲಿ ಹಾದು ಹೋಗುವಾಗ ದೇಹಕ್ಕೆ ಸಣ್ಣ ಮಟ್ಟಿನ ಆಯಾಸ ಮತ್ತು ತೊಂದರೆ ನೀಡುತ್ತದೆ. ಇದನ್ನೇ ಜೆಟ್ ಆಯಾಸ ಎಂದು ಕನ್ನಡದಲ್ಲಿ ಅಥವಾ ಜೆಟ್ ಲ್ಯಾಗ್ ಎಂದು ಆಂಗ್ಲಭಾಷೆಯಲ್ಲಿ ಕರೆಯುತ್ತಾರೆ. ನಮ್ಮ ದೇಹದ ಒಳಗೊಂದು ಜೈವಿಕ ಗಡಿಯಾರವಿದ್ದು ಹೊರ ಜಗತ್ತಿನ ಹಗಲು, ರಾತ್ರಿ, ಬೆಳಕು ಕತ್ತಲಿಗೆ ಅನುಗುಣವಾಗಿ ದೇಹವನ್ನು ಸ್ಪಂದಿಸುವಂತೆ ಮಾಡುತ್ತದೆ.

ನಾವು ಯಾವ ಸಮಯದ ವಲಯದಲ್ಲಿ ಇದ್ದೇವೆಯೋ ಅದಕ್ಕೆ ಅನುಗುಣವಾಗಿ ದೇಹವನ್ನು ಒಗ್ಗಿಸಿಕೊಂಡು ರಾತ್ರಿಯಾದಾಗ ನಿದ್ದೆ, ಬೆಳಕಾದಾಗ ಎಚ್ಚರ ಉಂಟಾಗುವಂತೆ ದೇಹವನ್ನು ಒಗ್ಗಿಸಿಕೊಂಡಿರುತ್ತದೆ. ಆದರೆ ಒಂದು ಸಮಯದ ವಲಯದಿಂದ ಇನ್ನೊಂದು ವಲಯಕ್ಕೆ ಒಬ್ಬ ವ್ಯಕ್ತಿ ವಿಮಾನದ ಮುಖಾಂತರ ವೇಗವಾಗಿ ಹಾದು ಹೋದಾಗ ಅದೇ ವೇಗದಲ್ಲಿ ದೇಹದಲ್ಲಿನ ಜೈವಿಕ ಗಡಿಯಾರ ಹೊರ ಜಗತ್ತಿನ ಬದಲಾವಣೆಗೆ ಸ್ಪಂದಿಸದೇ ಇದ್ದಾಗ ಆ ವ್ಯಕ್ತಿ ಒಂದೆರಡು ದಿನಗಳ ಕಾಲ ತಾತ್ಕಾಲಿಕವಾಗಿ ದೇಹದಲ್ಲಿ ಕೆಲವೊಂದು ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ.

ನಿದ್ರಾಹೀನತೆ, ಸುಸ್ತು ಮುಂತಾದವುಗಳನ್ನು ಒಂದೆರಡು ದಿನ ಅನುಭವಿಸಬೇಕಾಗುತ್ತದೆ. ಇದನ್ನೇ ಜೆಟ್ ಆಯಾಸ ಎನ್ನಲಾಗುತ್ತದೆ. ನಿರಂತರವಾಗಿ ದೇಶ ವಿದೇಶಗಳಿಗೆ ಸುತ್ತುವ ವ್ಯಕ್ತಿಗಳು ಸಾಮಾನ್ಯವಾಗಿ ಈ ತೊಂದರೆಗೆ ತುತ್ತಾಗುತ್ತಾರೆ. ಇದೊಂದು ಬಹಳ ಅಪಾಯಕಾರಿಯಾದ ತೊಂದರೆ ಅಲ್ಲದಿದ್ದರೂ ಒಂದೆರಡು ದಿನಗಳ ಕಾಲ ವ್ಯಕ್ತಿಯನ್ನು ಕಾಡಿ ಆತನ ಕೆಲಸದ ಕಾರ್ಯದಕ್ಷತೆಗೆ ಅಡ್ಡಿ ಪಡಿಸುವುದಂತೂ ನಿಜವಾದ ಮಾತು.

ಏನಿದು ಜೈವಿಕ ಗಡಿಯಾರ:-

ಆಂಗ್ಲಭಾಷೆಯಲ್ಲಿ ಬಯೋಲಾಜಿಕಲ್ ಕ್ಲಾಕ್ ಎನ್ನುತ್ತಾರೆ. ಒಬ್ಬ ವ್ಯಕ್ತಿಯ ಊಟ, ನಿದ್ರೆ, ದೇಹದ ಉಷ್ಣತೆ, ನಡೆದಾಡುವಿಕೆ, ಎಚ್ಚರಿಕೆ ಎಲ್ಲವನ್ನು ನಿಯಂತ್ರಣ ಮಾಡುವ ದೇಹದ ಆಂತರಿಕ ವ್ಯವಸ್ಥೆಯನ್ನು ಜೈವಿಕ ಗಡಿಯಾರ ಎನ್ನುತ್ತಾರೆ. ನಾವು ಯಾವ ಸಮಯದ ವಲಯದಲ್ಲಿ ವಾಸಿಸುತ್ತೇವೆಯೋ ಅದೇ ಸಮಯಕ್ಕೆ ಪೂರಕವಾಗಿ ಈ ನಮ್ಮ ದೇಹವನ್ನು ಈ ಜೈವಿಕ ಗಡಿಯಾರ ಸಿದ್ಧಪಡಿಸುತ್ತದೆ. 22ರಿಂದ 26 ಗಂಟೆಗಳಂತೆ ನಿರಂತರವಾಗಿ ಜೈವಿಕ ಗಡಿಯಾರದ ಚಕ್ರ ತಿರುಗುತ್ತಲೇ ಬದಲಾಗುತ್ತಲೇ ಇರುತ್ತದೆ.

2 ರಿಂದ ನಾಲ್ಕು ಗಂಟೆಗಳ ಕಾಲ ಸಮಯದ ವಲಯದ ವ್ಯತ್ಯಾಸದಿಂದ ದೇಹಕ್ಕೆ ಹೆಚ್ಚಿನ ಬಳಲಿಕೆ ಅಥವಾ ಆಯಾಸ ಉಂಟಾಗುವುದಿಲ್ಲ. ಆದರೆ 4ರಿಂದ 6 ಗಂಟೆಗಳಿಗಿಂತ ಜಾಸ್ತಿ ಸಮಯದ ವಲಯದ ವ್ಯತ್ಯಾಸ ಇದ್ದರೆ ದೇಹ ಅದಕ್ಕೆ ಒಗ್ಗಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಈ ಸಂದರ್ಭದಲ್ಲಿ ಉಂಟಾಗುವ ಮಾನಸಿಕ, ದೈಹಿಕ ತೊಂದರೆಗಳನ್ನು ಜೆಟ್ ಆಯಾಸ ಎನ್ನಲಾಗುತ್ತದೆ. ಮಾನಸಿಕವಾಗಿ ಒಂದು ವಾರದ ಮೊದಲೇ ಆ ವ್ಯಕ್ತಿಯನ್ನು ಸಿದ್ದಪಡಿಸಿದರೂ ಒಂದಷ್ಟು ಬಾಹ್ಯ ಬದಲಾವಣೆಗಳಿಗೆ ದೇಹ ತೆರೆದುಕೊಂಡಾಗ ಈ ರೀತಿ ತೊಂದರೆಗಳಾಗುವುದು ಸಹಜ.

ಒಂದು ವಾರದೊಳಗೆ ಈ ಸಮಸ್ಯೆ ತನ್ನಿಂತಾನೇ ಸರಿ ಹೋಗುತ್ತದೆ. ಆದರೆ ತುಂಬಾ ವಯಸ್ಕರಲ್ಲಿ 70-80ರ ಹರೆಯದವರಿಗೆ ಜೈವಿಕ ಗಡಿಯಾರ ಅಷ್ಟು ಬೇಗನೇ ದೇಹ ಒಗ್ಗಿಕೊಳ್ಳಲು ಕಷ್ಟವಾಗಬಹುದು. ಸಣ್ಣ ಮಕ್ಕಳು ಹೆಚ್ಚಿನ ಸಮಯ ನಿದ್ದೆಯಲ್ಲಿಯೇ ಕಳೆಯುವುದರಿಂದ ಅವರಿಗೆ ವಿಶೇಷ ತೊಂದರೆ ಉಂಟಾಗದು. ನಿದ್ರಾಹೀನತೆಯಿಂದ ಬಳಲುತ್ತಿರುವವವರಿಗೆ ಈ ತೊಂದರೆ ಮತ್ತಷ್ಟು ಕಾಡಬಹುದು.

ಜೆಟ್‍ಲ್ಯಾಗ್ ಲಕ್ಷಣಗಳು ಏನು?

ಜೆಟ್‍ಲ್ಯಾಗ್ ಚಿಹ್ನೆಗಳು ವ್ಯಕ್ತಿಯ ದೇಹದ ಗಾತ್ರ, ತೂಕ, ವಯಸ್ಸು ಮತ್ತು ದೈಹಿಕ ಕ್ಷಮತೆಯ ಮೇಲೆ ಅವಲಂಭಿಸಿದೆ.

ಸುಸ್ತು, ಆಯಾಸ ಮತ್ತು ನಿದ್ರಾಹೀನತೆ ಹೆಚ್ಚಿನವರಲ್ಲಿ ಕಂಡು ಬರುತ್ತದೆ.

ಹಸಿವಿಲ್ಲದಿರುವುದು, ಬಹಳ ಬೇಗನೆ ಕೋಪಗೊಳ್ಳುವುದು, ಅಸಹನೆ, ವ್ಯಕ್ತಿಯ ಏಕಾಗ್ರತೆಗೆ ಭಂಗ ಬರುತ್ತದೆ.

ಗೊಂದಲ, ತಲೆನೋವು, ತಲೆ ಸಿಡಿಯುವುದು, ಇತ್ಯಾದಿ.

ಕೆಲವೊಮ್ಮೆ ಮಲಬದ್ಧತೆ, ಮತ್ತು ಬೇಧಿ ಉಂಟಾಗಬಹುದು. ಆಹಾರದ ಸಮಯ ಪ್ರಮಾಣ ಮತ್ತು ಗಾತ್ರ ಹಾಗೂ 1 ಸಾಂದ್ರತೆಯ ವ್ಯತ್ಯಾಸದಿಂದ ಈ ತೊಂದರೆ ಉಂಟಾಗುತ್ತದೆ.

ಪ್ರಯಾಣದ ಆಯಾಸಕ್ಕೂ ಜೆಟ್ ಲ್ಯಾಗ್‍ಗೂ ಅಜಗಜಾಂತರ ವ್ಯತ್ಯಾಸವಿದೆ. ಪ್ರಯಾಣ ಸುಖಕರವಾಗಿಲ್ಲದಿದ್ದಾಗ, ಅಥವಾ ನಿರ್ಜಲೀಕರಣ, ಆಹಾರದ ವ್ಯತ್ಯಾಸ ಮತ್ತು ದೈನಂದಿನ ದೈಹಿಕ ಚಟುವಟಿಕೆಗಳು ಇಲ್ಲದಿದ್ದಾಗ, ಪ್ರಯಾಣದ ಸಮಯದಲ್ಲಿ ಉಂಟಾಗುವ ತೊಂದರೆಗಳನ್ನು ಪ್ರಯಾಣದ ಆಯಾಸ ಎನ್ನುತ್ತಾರೆ. ಇದು ಒಂದೇ ಸಮಯದ ವಲಯದಲ್ಲಿ ಪ್ರಯಾಣ ಮಾಡಿದಾಗಲೂ ಉಂಟಾಗಬಹುದು.

ಒಂದು ದಿನದ ವಿಶ್ರಾಂತಿ ಮತ್ತು 8 ಗಂಟೆಗಳ ನಿದ್ರೆಯಿಂದ ಇದು ಸರಿ ಹೋಗುತ್ತದೆ. ಆದರೆ ಜೆಟ್ ಲ್ಯಾಗ್ ಉಂಟಾಗಲು ವಿವಿಧ ಸಮಯದ ವಲಯದಲ್ಲಿ ಪ್ರಯಾಣ ಮಾಡಬೇಕು. ಮತ್ತು ಕನಿಷ್ಠ ಒಂದು ವಾರವಾದರೂ ಸಮಸ್ಯೆ ಪರಿಹಾರವಾಗಲು ಬೇಕಾಗುತ್ತದೆ.

ಬಹಳ ಸುಲಭವಾಗಿ ಮತ್ತು ವೇಗವಾಗಿ ಜೆಟ್ ಲ್ಯಾಗ್ ಸಮಸ್ಯೆಯಿಂದ ಹೊರಬರಬೇಕಾದಲ್ಲಿ ಆದಷ್ಟು ಬೇಗ ನಿಮ್ಮ ದೇಹಕ್ಕೆ ಮತ್ತು ಮನಸ್ಸಿಗೆ ಈ ಬೇರೆ ಬೇರೆ ಸಮಯದ ವಲಯದ ಬಗ್ಗೆ ಕೂಲಕುಂಷವಾಗಿ ಮನದಟ್ಟು ಮಾಡಿಕೊಡಬೇಕು. ಎಷ್ಟು ಬೇಗ ನೀವು ಮಾನಸಿಕವಾಗಿ ದೇಹವನ್ನು ಒಗ್ಗಿಸಿಕೊಂಡಲ್ಲಿ ಅಷ್ಟು ಬೇಗ ನಿಮ್ಮ ಜೈವಿಕ ಗಡಿಯಾರ ಸಕಾರಾತ್ಮಕವಾಗಿ ಸ್ಪಂದಿಸುತ್ತದೆ.

    ಸರಿಪಡಿಸುವುದು ಹೇಗೆ?

    ಸಾಮಾನ್ಯವಾಗಿ ಜಿಟ್ ಲ್ಯಾಗ್ ತಾತ್ಕಾಲಿಕವಾಗಿ ಮೂರುನಾಲ್ಕು ದಿನಗಳಲ್ಲಿ ತನ್ನಿಂತಾನೇ ಸರಿ ಹೋಗುತ್ತದೆ. ಇದು ವ್ಯಕ್ತಿಯ ವಯಸ್ಸು, ತೂಕ, ದೈಹಿಕ ಸ್ಥಿತಿ ಮತ್ತು ಪ್ರಯಾಣದ ಅವಧಿಯ ಮೇಲೆ ಅವಲಂಬಿತವಾಗಿರುತ್ತದೆ. ಉದಾಹರಣೆಗೆ ನೀವು ಸ್ಯಾನ್‍ಪ್ರಾನ್ಸಿಂಸ್ಕೋದಿಂದ ರೋಮ್‍ಗೆ 10 ದಿನಗಳ ಪ್ರವಾಸ ಹೋಗಿದ್ದಲ್ಲಿ ಕನಿಷ್ಠ 6 ರಿಂದ 9 ದಿನಗಳ ದೇಹ ಸರಿಹೋಗಲು ಬೇಕಾಗಬಹುದು, ಒಂದು ಸಮಯದ ವಲಯಕ್ಕೆ ಒಂದರಿಂದ 2 ದಿನಗಳ ಬೇಕಾಗಬಹುದು.

    ನೀವು ಮೂರುನಾಲ್ಕು ಸಮಯದ ವಲಯವನ್ನು ದಾಟಿ ಪ್ರಯಾಣ ಮಾಡುವುದಿದ್ದಲ್ಲಿ ಕನಿಷ್ಟ ಎರಡು ವಾರಗಳಿಂದ ಅದೇ ಸಮಯದ ವಲಯಕ್ಕೆ ಪೂರಕವಾದ ಸಮಯಕ್ಕೆ ದೇಹವನ್ನು ಒಗ್ಗಿಸಿಕೊಂಡು ದೈಹಿಕವಾಗಿ ಮತ್ತು ಮಾನಸಿಕವಾಗಿ ತಯಾರಾಗಬೇಕು. ಹಾಗೇ ಮಾಡಿದಾಗ ದೇಹ ಬಹು ಬೇಗ ಆ ಸಮಯದ ವಲಯಕ್ಕೆ ಹೊಂದಿಕೊಳ್ಳುತ್ತದೆ.

    ಸೂರ್ಯನ ಬೆಳಕಿಗೂ ನಮ್ಮ ಜೈವಿಕ ಗಡಿಯಾರಕ್ಕೂ ನೇರವಾದ ಸಂಬಂಧವಿದೆ, ನಮ್ಮ ದೇಹದ ಜೈವಿಕ ಗಡಿಯಾರ, ಸೂರ್ಯನ ಬೆಳಕು ಮತ್ತು ಕತ್ತಲೆಗೆ ಬಹುಬೇಗ ಸ್ಪಂದಿಸುತ್ತದೆ. ಸೂರ್ಯನ ಬೆಳಕು ನಮ್ಮ ಜೈವಿಕ ಗಡಿಯಾರವನ್ನು ತೀವ್ರವಾಗಿ ಪ್ರಚೋದಿಸುತ್ತದೆ. ಈ ಕಾರಣದಿಂದಾಗಿಯೇ ನೀವು ನಿಮ್ಮ ಪ್ರಯಾಣದ ಗುರಿ ತಲುಪಿದ ಕೂಡಲೇ ಮನೆಯಲ್ಲಿನ ಕಿಟಿಕಿ ಬಾಗಿಲು ತೆರೆದು ದೇಹವನ್ನು ಸೂರ್ಯನ ಬೆಳಕಿಗೆ ತೆರೆದುಕೊಳ್ಳಿ ಆದಷ್ಟು ಹೊರಾಂಗಣದಲ್ಲಿ ಕೆಲಸ ಮಾಡಿ. ಆಗ ನಮ್ಮ ದೇಹದ ಜೈವಿಕ ಗಡಿಯಾರ ಬೇಗನೇ ಆ ಸ್ಥಳದ ಸಮಯಕ್ಕೆ ಹೊಂದಿಕೊಳ್ಳುತ್ತದೆ.

    ಹೆಚ್ಚು ಕೆಫೇನ್‍ಯುಕ್ತ ಪಾನೀಯಗಳಾದ ಕಾಫಿ, ಕೋಕಕೋಲ, ಮುಂತಾದ ಪೇಯಗಳು ಮತ್ತು ಆಲ್ಕೋಹಾಲ್ ಸೇವನೆಯನ್ನು ನಿದ್ರೆಗಿಂತ ಮೂರ ಗಂಟೆಗಳ ಮೊದಲು ಸೇವಿಸಬಾರದು. ಇವೆರಡು ನಮ್ಮ ಕೇಂದ್ರಿಯ ನರಮಂಡಲವನ್ನು ಪ್ರಚೋಧಿಸಿ ನಿದ್ರಾಹೀನತೆಯನ್ನು ಹೆಚ್ಚು ಮಾಡಬಹುದು.

    ನಿಮ್ಮ ಆಹಾರದ ಸೇವನೆ ಸಮಯವನ್ನು ಬದಲಿಸಿಕೊಳ್ಳಿ. ನೀವು ಹಲವು ಸಮಯದ ವಲಯವನ್ನು ದಾಟಿ ಹೊಗುವಾಗ ನಿಮ್ಮ ಪ್ರಯಾಣದ ಅಂತಿಮ ಜಾಗದ ಸಮಯಕ್ಕೆ ಪೂರಕವಾದ ಸಮಯದಂತ ಆಹಾರ ಸೇವಿಸಬೇಕು. ಇದು ನಿಮ್ಮ ದೇಹದ ಸಕ್ಕರೆ ಆಹಾರದ ಅವಶ್ಯಕತೆಗಳಿಗೆನುಗುಣವಾಗಿ ದೇಹದ ಜೈವಿಕ ಗಡಿಯಾರವನ್ನು ದೇಹ ಸಿದ್ಧ ಪಡಿಸುತ್ತದೆ. ಇದರಿಂದ ಜೆಟ್ ಲ್ಯಾಗ್ ಸಮಸ್ಯೆ ಕಡಿಮೆಯಾಗಬಹುದು.

    ಜೆಟ್ ಲ್ಯಾಗ್ ಉಂಟಾಗಲೂ ಇನ್ನೊಂದು ಪ್ರಮುಖ ಕಾರಣವೆಂದರೆ ನಿರ್ಜಲೀಕರಣ. ವಿಮಾನ ಪ್ರಯಾಣದಲ್ಲಿ ಸಾಮಾನ್ಯವಾಗಿ ಸಮುದ್ರ ಮಟ್ಟಕ್ಕಿಂತ 6000ದಿಂದ 8000 ಅಡಿಗಳ ಎತ್ತರದಲ್ಲಿ ಹಾರಾಡುವಾಗ ದೇಹಕ್ಕೆ ದ್ರವ್ಯದ ಕೊರತೆ ಅಗುವುದು. ಸಹಜ. ವಿಮಾನದ ಕ್ಯಾಬಿನ್‍ನಲ್ಲಿ ಕಡಮೆ ಒತ್ತಡ ಮತ್ತು ಒಣ ಹವೆಯಿಂದಾಗಿ ಈ ತೊಂದರೆ ಬಿಗಾಡಾಯಿಸುತ್ತದೆ. ವಿಮಾನ ಪ್ರಯಾಣದ ಸಮಯದಲ್ಲಿ ಸಾಕಷ್ಟು ನೀರು ಕುಡಿಯಬೇಕು ಇದು ನಿಮ್ಮ ದೇಹ್ಕಕೆ ಬಹಳ ಉತ್ತಮ. ಜೆಟ್ ಲ್ಯಾಗ್ ಸಮಸ್ಯೆ ಪರಿಹಾರಕ್ಕೆ ಅತೀ ಉತ್ತಮವಾದ ಪರಿಹಾರ ಎಂದರೆ ಸಾಕಷ್ಟು ನೀರು ಸೇವನೆ.

    ಹಿತಮಿತವಾದ ದೈಹಿಕ ಕಸರತ್ತು, ದೇಹದ ಎಲ್ಲಾ ಭಾಗಕ್ಕೆ ರಕ್ತ ಪರಿಚಲನೆ ಹೆಚ್ಚಿಸಿ ದೇಹವನ್ನು ಕ್ರಿಯಾತ್ಮಕವಾಗಿಸುತ್ತದೆ. ಇದು ನಮ್ಮ ಜೈವಿಕ ಗಡಿಯಾರವನ್ನು ಹಳಿಗೆ ತರಲು ಸಹಾಯ ಮಾಡತ್ತದೆ. ದೀರ್ಘ ಉಸಿರಾಟ, ಧ್ಯಾನ, ಯೋಗ, ಮತ್ತು ಸಣ್ಣ ಪುಟ್ಟ ದೈಹಿಕ ವ್ಯಾಯಾಮ ಮಾಡುವುದರಿಂದ ಮಾನಸಿಕವಾಗಿ ಉಲ್ಲಸಿತರಾಗಿ ದೇಹಕ್ಕೆ ಹಿತವಾದ ಅನುಭವ ಉಂಟಾಗುತ್ತದೆ

      LEAVE A REPLY

      Please enter your comment!
      Please enter your name here