ಮೈಸೂರು ದಸರಾ ಕಂಬಳ: ಅ.9ರಂದು ಕಿರಿಯ ವಿಭಾಗದ ಕೋಣಗಳ ಆಯ್ಕೆ

0
33

ಮಂಗಳೂರು : ಮೈಸೂರಿನಲ್ಲಿ ನಡೆಯಲಿರುವ ದಸರಾ ಕಂಬಳದಲ್ಲಿ ಭಾಗವಹಿಸಲಿರುವ ಕಿರಿಯ ಹಗ್ಗ ಮತ್ತು ಕಿರಿಯ ನೇಗಿಲು ವಿಭಾಗದ ಕೋಣಗಳ ಆಯ್ಕೆ ಪ್ರಕ್ರಿಯೆಯು ಅಕ್ಟೋಬರ್ 9ರಂದು ಶುಕ್ರವಾರ ಮಿಯಾರು ಕಂಬಳ ಕ್ರೀಡಾಂಗಣದಲ್ಲಿ ನಡೆಯಲಿದೆ.

ಮೈಸೂರು ದಸರಾ ಕಂಬಳದಲ್ಲಿ ಭಾಗವಹಿಸಲು ಇಚ್ಛಿಸುವ ಕೋಣಗಳ ಯಜಮಾನರು ಅಂದು ಬೆಳಗ್ಗೆ 10 ಗಂಟೆಗೆ ನಡೆಯುವ ಆಯ್ಕೆ ಪ್ರಕ್ರಿಯೆಯಲ್ಲಿ ಕಡ್ಡಾಯವಾಗಿ ಭಾಗವಹಿಸುವಂತೆ ಮೈಸೂರು ಕಂಬಳ ಸಮಿತಿ ಮನವಿ ಮಾಡಿದೆ. ಕೋಣಗಳ ಯಜಮಾನರು ಆಧಾರ್ ಕಾರ್ಡ್, ಬ್ಯಾಂಕ್ ಖಾತೆಯ ವಿವರ ಹಾಗೂ ಯಜಮಾನರ ಭಾವಚಿತ್ರವನ್ನು ಕಡ್ಡಾಯವಾಗಿ ತರಬೇಕು ಎಂದು ತಿಳಿಸಲಾಗಿದೆ.

ಆಯ್ಕೆ ಪ್ರಕ್ರಿಯೆಯಲ್ಲಿ ಯಾವುದೇ ಶಿಫಾರಸ್ಸುಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಸಮಿತಿ ಸ್ಪಷ್ಟಪಡಿಸಿದೆ.

ವಿಶೇಷ ಸಭೆ

ಇದೇ ಸಂದರ್ಭದಲ್ಲಿ ಮೈಸೂರಿನಲ್ಲಿ ನಡೆಯಲಿರುವ ದಸರಾ ಕಂಬಳದಲ್ಲಿ ಭಾಗವಹಿಸುವ ಎಲ್ಲಾ ಕೋಣಗಳ ಯಜಮಾನರು, ತೀರ್ಪುಗಾರರು, ಓಟಗಾರರು ಹಾಗೂ ಪರಿಕರ ವರ್ಗದವರಿಗಾಗಿ ವಿಶೇಷ ಸಭೆಯನ್ನು ಆಯೋಜಿಸಲಾಗಿದೆ. ಎಲ್ಲರೂ ಸಭೆಯಲ್ಲಿ ಭಾಗವಹಿಸಿ ಕಂಬಳದ ಯಶಸ್ವಿ ಆಯೋಜನೆಗೆ ಸಹಕರಿಸುವಂತೆ ಮನವಿ ಮಾಡಲಾಗಿದೆ.

ಮೈಸೂರು ದಸರಾ ಕಂಬಳಕ್ಕೆ ಸಂಬಂಧಿಸಿದ ನೋಂದಣಿ ಅರ್ಜಿಗಳನ್ನು ಕೂಡ ಇದೇ ದಿನ ಭರ್ತಿ ಮಾಡಲಾಗುವುದು ಎಂದು ಸಮಿತಿ ತಿಳಿಸಿದೆ.

ಮೈಸೂರು ಕಂಬಳ ಸಮಿತಿ ಅಧ್ಯಕ್ಷ ಹಾಗೂ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ, ಕರ್ನಾಟಕ ರಾಜ್ಯ ಕಂಬಳ ಅಸೋಸಿಯೇಷನ್ ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ ಹಾಗೂ ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಸನಿಲ್ ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.