ಮಂಗಳೂರು: ಕಳೆದ 44 ವರ್ಷಗಳಿಂದ ಕೊಂಕಣಿ ಭಾಷೆ ಮತ್ತು ಸಂಸ್ಕೃತಿಯ ಸೇವೆಯಲ್ಲಿ ತೊಡಗಿರುವ ಮಂಗಳೂರಿನ ಕೊಂಕಣಿ ಸಾಂಸ್ಕೃತಿಕ ಸಂಘದ ವತಿಯಿಂದ ಕೊಂಕಣಿ ಯಕ್ಷಗಾನ “ದಮಯಂತಿ ಪುನಃ ಸ್ವಯಂವರ” ಪ್ರಸಂಗದ ಪ್ರದರ್ಶನ ಇದೆ ಆದಿತ್ಯವಾರ ಜೂನ್ 1, 2025ರಂದು ಮಂಗಳೂರಿನ ಕುಡ್ಮುಲ್ ರಂಗ ರಾವ್ ಪುರಭವನದಲ್ಲಿ ಜರಗಲಿದೆ ಎಂದು ಸಂಘದ ಅಧ್ಯಕ್ಷೆ ಪ್ರಭಾ ಭಟ್ ಅವರು ತಿಳಿಸಿದ್ದಾರೆ.
ಸುಮಾರು 700 ಸದಸ್ಯರನ್ನು ಹೊಂದಿರುವ ಕೊಂಕಣಿ ಸಾಂಸ್ಕೃತಿಕ ಸಂಘದ ಸದಸ್ಯರು ಹಾಗೂ ಕೆಲವು ಹವ್ಯಾಸಿ ಕಲಾವಿದರು ಇದರಲ್ಲಿ ಪಾತ್ರ ವಹಿಸಲಿದ್ದಾರೆ. ಮೂಡಬಿದಿರೆಯ ಖ್ಯಾತ ಯಕ್ಷಗಾನ ಕಲಾವಿದ ಹಾಗೂ ಪ್ರಸಂಗಕರ್ತ ಶಾಂತರಾಮ ಕುಡ್ವ ಅವರು ಪ್ರಸಂಗವನ್ನು ರಚಿಸಿ, ನಿರ್ದೇಶಿಸಿ ಪಾತ್ರ ವಹಿಸಲಿದ್ದಾರೆ. ಇದೇ ಕಾರ್ಯಕ್ರಮದಲ್ಲಿ ಅವರಿಗೆ ಸಂಘದ ವತಿಯಿಂದ “ಸಾಂಸ್ಕೃತಿಕ ಯಕ್ಷ ರತ್ನ” ಪ್ರಶಸ್ತಿ ನೀಡಿ ಸನ್ಮಾನ ನೆರವೇರಲಿದೆ.
ವಿಶ್ವ ಕೊಂಕಣಿ ಕೇಂದ್ರ ಮಂಗಳೂರು ಇದರ ಅಧ್ಯಕ್ಷ ನಂದಗೋಪಾಲ ಶೆಣೈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಶ್ರದ್ದಾ ಸುಬ್ರಾಯ ಪೈ, ಸಿ. ಡಿ. ಕಾಮತ್ ಹಾಗೂ ಸಂಘದ ಮಾಜಿ ಅಧ್ಯಕ್ಷ ರಮೇಶಕೃಷ್ಣ ಶೇಟ್ ಗೌರವಾನ್ವಿತ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಯಕ್ಷಗಾನ ಪ್ರಿಯರಿಗೆ ಈ ಕಾರ್ಯಕ್ರಮಕ್ಕೆ ಮುಕ್ತ ಪ್ರವೇಶವನ್ನು ಕಲ್ಪಿಸಲಾಗಿದೆ ಎಂದು ಪ್ರಭಾ ಭಟ್ ತಿಳಿಸಿದ್ದಾರೆ.
1981ರಲ್ಲಿ ದಿವಂಗತ ಜಿ. ಜಿ. ವಾಸುದೇವ ಪ್ರಭು ಅವರು ಸ್ಥಾಪಿಸಿದ ಕೊಂಕಣಿ ಸಾಂಸ್ಕೃತಿಕ ಸಂಘವು ಕೊಂಕಣಿ ಭಾಷೆ ಹಾಗೂ ಸಂಸ್ಕೃತಿಯ ಅಭಿವೃದ್ಧಿಗೆ ಹಲವು ದಶಕಗಳಿಂದ ಕೊಂಕಣಿ ನಾಟಕಗಳು, ಕೊಂಕಣಿ ಸಂಗೀತ, ಕಾರ್ಯಾಗಾರಗಳು, ಭಜನಾ ಕಾರ್ಯಕ್ರಮಗಳು ಮುಂತಾದವುಗಳನ್ನು ಆಯೊಜಿಸಿಕೊಂಡು ಬಂದಿದೆ.
ಪತ್ರಿಕಾ ಗೋಷ್ಠಿಯಲ್ಲಿ ಶಾಂತರಾಮ ಕುಡ್ವ, ಸಂಘದ ಕಾರ್ಯದರ್ಶಿ ಸುವರ್ಣಿ ಪಡಿಯಾರ್, ಖಜಾಂಚಿ ರಾಧಿಕಾ ಪೈ, ಕಾರ್ಯಕ್ರಮದ ಸಂಚಾಲಕ ಕೃಷ್ಣ ಕಾಮತ್, ಅರುಣ್ ಜಿ. ಶೇಟ್ ಮುಂತಾದವರು ಉಪಸ್ಥಿತರಿದ್ದರು.
ಜೂನ್ 1, “ದಮಯಂತಿ ಪುನಃ ಸ್ವಯಂವರ” ಕೊಂಕಣಿ ಯಕ್ಷಗಾನ ಪ್ರದರ್ಶನ
RELATED ARTICLES