ಜೂನ್ 11ರಂದು ಕರಾವಳಿಯಲ್ಲಿ ‘ಕಜ್ಜ’ ಅಬ್ಬರ; ಬಹುನಿರೀಕ್ಷಿತ ತುಳು ಸಿನಿಮಾ ತೆರೆಗೆ!

0
31

ಮಂಗಳೂರು : ಸುಮುಖ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡಿರುವ ಬಹುನಿರೀಕ್ಷಿತ ತುಳು ಚಲನಚಿತ್ರ ‘ಕಜ್ಜ’ ಇದೇ ಜೂನ್ 11ರಂದು ಕರಾವಳಿ ಭಾಗದ ವಿವಿಧ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಜಿಷ್ಣು ಎಸ್. ಮೆನನ್ ಹಾಗೂ ಸಿದ್ಧಾರ್ಥ್ ಶೆಟ್ಟಿ ಜಂಟಿಯಾಗಿ ನಿರ್ದೇಶಿಸಿರುವ ಈ ಚಿತ್ರಕ್ಕೆ ನಿಶಾಂತ್ ಮೆನೆಜಸ್ ನಿರ್ಮಾಪಕರಾಗಿದ್ದು, ಪ್ರವೀಣ್ ಸುವರ್ಣ ಸಹ ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ.

ಚಿತ್ರವು ಮಂಗಳೂರು, ಸುರತ್ಕಲ್, ಪಡುಬಿದ್ರಿ, ಉಡುಪಿ, ಮಣಿಪಾಲ, ಕಾರ್ಕಳ, ಕುಂದಾಪುರ, ಬೆಳ್ತಂಗಡಿ, ಸುಳ್ಯ ಹಾಗೂ ಮುಡಿಪು ಸೇರಿದಂತೆ ಕರಾವಳಿಯ ಪ್ರಮುಖ ಕೇಂದ್ರಗಳ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣಲಿದೆ.

ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಟ ಹಾಗೂ ನಿರ್ದೇಶಕ ಸಿದ್ಧಾರ್ಥ್ ಶೆಟ್ಟಿ, “ತುಳು ಭಾಷೆಯಲ್ಲಿ ‘ಕಜ್ಜ’ ಎಂದರೆ ಕಾರ್ಯ ಎಂಬ ಅರ್ಥವಿದೆ. ಉತ್ತಮ ಉದ್ದೇಶದೊಂದಿಗೆ ಈ ಚಿತ್ರವನ್ನು ಪ್ರೇಕ್ಷಕರ ಮುಂದಿಡುತ್ತಿದ್ದೇವೆ. ನಮ್ಮ ಹಿಂದಿನ ‘ತುಡರ್’ ಚಿತ್ರಕ್ಕೆ ಸಿಕ್ಕಿದ್ದ ಪ್ರೀತಿ ಹಾಗೂ ಬೆಂಬಲದಂತೆ ‘ಕಜ್ಜ’ಗೂ ಪ್ರೇಕ್ಷಕರು ಆಶೀರ್ವದಿಸುತ್ತಾರೆ ಎಂಬ ವಿಶ್ವಾಸವಿದೆ” ಎಂದು ಹೇಳಿದರು.

ಚಿತ್ರ ಬಿಡುಗಡೆಯ ಮುನ್ನವೇ ಪುತ್ತೂರು, ಉಡುಪಿ ಹಾಗೂ ಮಂಗಳೂರಿನಲ್ಲಿ ವಿಶೇಷ ಪ್ರೀಮಿಯರ್ ಶೋಗಳನ್ನು ಆಯೋಜಿಸಲಾಗಿದ್ದು, ಸಿನಿಪ್ರಿಯರಿಂದ ಉತ್ತಮ ಪ್ರತಿಕ್ರಿಯೆ ಮತ್ತು ಮೆಚ್ಚುಗೆ ವ್ಯಕ್ತವಾಗಿದೆ ಎಂದು ಚಿತ್ರತಂಡ ತಿಳಿಸಿದೆ.

‘ಕಜ್ಜ’ ಚಿತ್ರದಲ್ಲಿ ಸಿದ್ಧಾರ್ಥ್ ಶೆಟ್ಟಿ, ಅರವಿಂದ ಬೋಳಾರ್, ವಸಿಷ್ಠ ಸಿಂಹ, ಉಮೇಶ್ ಮಿಜಾರ್, ಸಂತೋಷ್ ಶೆಟ್ಟಿ, ಜಯಶೀಲಾ, ಉದಯ ಪೂಜಾರಿ, ಶ್ವೇತಾ ಕೋಟ್ಯಾನ್, ಸಹನಾ ಸುಧಾಕರ್, ವೆನ್ನಿಟಾ ಡಯಾಸ್, ಮೋಹನ್ ರಾಜ್, ಗೌತಮ್ ಬಂಗೇರ, ಪ್ರಜ್ವಲ್, ಬಂಬ್ರಾಣ, ಸುವರ್ಣ ಪೂಜಾರಿ, ಸವಿತಾ ಅಂಚನ್, ಶಾಹಿನ್ ಶೇಖ್ ಹಾಗೂ ಸನ್ನಿಧಿ ಶೆಟ್ಟಿ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ.

ಚಿತ್ರಕ್ಕೆ ಲಿಕಿತ್ ಪ್ರಸಾದ್ ಶೆಟ್ಟಿ ಸಂಗೀತ ಸಂಯೋಜನೆ ನೀಡಿದ್ದು, ಚಂದು ಮೆಪ್ಪಯೂರ್ ಛಾಯಾಗ್ರಹಣ ಮಾಡಿದ್ದಾರೆ. ಬಿನು ನೆಪೋಲಿಯನ್ ಸಂಕಲನ, ವಿಜೇತ್ ಆರ್. ನಾಯಕ್ ನೃತ್ಯ ನಿರ್ದೇಶನ ಹಾಗೂ ಯೋಗಾನಂದ್ ಸಾಹಸ ನಿರ್ದೇಶನದ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ.

ಈಗಾಗಲೇ ಕರಾವಳಿ ಸಿನಿಪ್ರಿಯರಲ್ಲಿ ಸಾಕಷ್ಟು ಕುತೂಹಲ ಮೂಡಿಸಿರುವ ‘ಕಜ್ಜ’, ಬಿಡುಗಡೆಯ ಬಳಿಕ ಯಾವ ಮಟ್ಟಿನ ಯಶಸ್ಸು ಸಾಧಿಸಲಿದೆ ಎಂಬುದನ್ನು ಕಾದುನೋಡಬೇಕಿದೆ.

LEAVE A REPLY

Please enter your comment!
Please enter your name here