ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಶಿಕ್ಷಣ ಪದ್ಧತಿಗೆ ನಾವು ಬದ್ಧ: ಶಾಂತಾರಾಮ ಕುಡ್ವ
ಮೂಡುಬಿದಿರೆ — ಪ್ರೇರಣಾ ವಿದ್ಯಾ ಸಂಸ್ಥೆಯ ಆಡಳಿತದಲ್ಲಿ ಕಾಲ ಕಾಲಕ್ಕೆ ಬದಲಾವಣೆಗಳಾದರೂ,ಸರಕಾರದಿಂದ ಬಿಸಿಯೂಟ ಬಿಟ್ಟರೆ ಬೇರೆ ಯಾವ ಅನುದಾನವೂ ಸಿಗದೇ ಇದ್ದರೂ, ಕೇವಲ ವಿದ್ಯಾ ಪೋಷಕರ ಸತತ ಪ್ರೋತ್ಸಾಹ ಬೆಂಬಲದಿಂದ ಸವಾಲುಗಳನ್ನು ಮೆಟ್ಟಿ ನಿಂತು ಜಿಲ್ಲೆಯಲ್ಲಿಯೇ ಪ್ರೇರಣಾ ಶಾಲೆಯನ್ನು ಮಾದರಿ ಶಾಲೆಯಾಗಿಸುವಲ್ಲಿ ಯಶಸ್ವಿಯಾಗಿದ್ದೇವೆ.50ರಷ್ಟಿದ್ದ ಮಕ್ಕಳ ಸಂಖ್ಯೆ ಕೆಲವೇ ವರ್ಷಗಳಲ್ಲಿ ಗಣನೀಯವಾಗಿ ಏರಿಕೆಯಾಗಿ ಶಿಶು ಮಂದಿರ ಸಹಿತ ಹಿರಿಯ ಪ್ರಾಥಮಿಕ ಶಾಲೆ ಸೇರಿ ಇದೀಗ 310ಮಕ್ಕಳನ್ನು ಶಾಲೆ ಹೊಂದಿದ್ದು ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಭಾರತೀಯ ಶಿಕ್ಷಣ ಪದ್ಧತಿಗೆ ನಾವು ಸದಾ ಬದ್ಧರಾಗಿದ್ದೇವೆ ಎಂದು ಶಾಲಾ ಸಂಚಾಲಕ ಎಂ ಶಾಂತಾರಾಮ ಕುಡ್ವ ಅವರು ಹೇಳಿದರು .
ಅವರು ಸೇವಾಂಜಲಿ ಎಜುಕೇಶನಲ್ ಟ್ರಸ್ಟ್ (ರಿ) ಮೂಡುಬಿದಿರೆ ವಿದ್ಯಾ ಭಾರತಿ ಸಂಯೋಜಿತ ಪ್ರೇರಣಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಕಡಲಕೆರೆಯ ಶತಮಾನೋತ್ಸವ ಸಮಾರಂಭದಲ್ಲಿ ಮಾತನಾಡಿದರು.
ಪ್ರಾರಂಭದಲ್ಲಿ ಮೂಡುಬಿದಿರೆಯ ಶ್ರೀ ವೆಂಕಟರಮಣ ಮತ್ತು ಶ್ರೀ ಹನುಮಂತ ದೇವಸ್ಥಾನದ ಮೊಕ್ತೇಸರರಾದ ಎಂ ದಯಾನಂದ ಪೈಯವರು ಧ್ವಜಾರೋಹಣ ಮಾಡಿ ಈ ಹಿಂದೆ ತಾನು ಈ ಶಾಲೆಯ ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿನ ಸೇವಾಚಟುವಟಿಕೆಗಳನ್ನು ಸ್ಮರಿಸಿ ಶುಭ ಹಾರೈಸಿ ಶತಮಾನೋತ್ಸವ ಸಂಭ್ರಮ ಕಾರ್ಯಕ್ರಮಗಳಿಗೆ ವಿದ್ಯುಕ್ತ ಚಾಲನೆ ನೀಡಿದರು .ಮುಖ್ಯ ಅತಿಥಿಗಳಾಗಿ ವೀರ ಮಾರುತಿ ವೆಜಿಟೇಬಲ್ಸ್ ಮಾಲಕ ಡಿ ಶ್ರೀನಿವಾಸ ಕಿಣಿ,ತೆರಿಗೆ ಸಲಹೆಗಾರ ಶೇಖರ್ ಮೂಡುಬಿದಿರೆ,ನಿವೃತ್ತ ಮುಖ್ಯೋಪಾಧ್ಯಾಯ ಜಯರಾಮ ರಾವ್,ಜಯರಾಜ್ ಜೈನ್ ಭಾಗವಹಿಸಿದ್ದರು.ಎಂ ದಯಾನಂದ ಪೈಯವರು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಿದರು.
ಟ್ರಸ್ಟ್ ಅಧ್ಯಕ್ಷರಾದ ರಾಜೇಶ್ ಎಂ ಬಂಗೇರ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.ಮುಖ್ಯೋಪಾಧ್ಯಾಯಿನಿ ವತ್ಸಲಾ ರಾಜೇಶ್ ಅವರು ಕೊನೆಯಲ್ಲಿ ವಂದಿಸಿದರು.ಶಿಕ್ಷಕಿ ಹರ್ಷಿತಾ ಅವರು ಕಾರ್ಯಕ್ರಮ ನಿರ್ವಹಣೆ ಮಾಡಿದರು.ಟ್ರಸ್ಟೀಗಳಾದ ಡಾ.ಕೇಶವ ಹೆಗ್ಡೆ, ಮಂಜುನಾಥ ಶೆಟ್ಟಿ,ಬಾಲಕೃಷ್ಣ ಬೋರ್ಕರ್, ಡಾ .ಆನಂದ ಕಾರ್ಲ,ಸೋಮನಾಥ್ ಕೋಟ್ಯಾನ್,ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಶಾಲಾ ಮಕ್ಕಳಿಂದ ವಂದೇ ಮಾತರಂ ನೃತ್ಯ ನಡೆಯಿತು.
ನಾಳೆಯ ದಿನ ದಿನಾಂಕ 19ರಂದು ಶಾಲೆಯ ಹಳೆಯ ವಿದ್ಯಾರ್ಥಿ ಆಂಧ್ರಪ್ರದೇಶದ ರಾಜ್ಯಪಾಲ ಜಸ್ಟಿಸ್ ಎಸ್ ಅಬ್ದುಲ್ ನಜೀರ್ ಅವರು ಭಾಗವಹಿಸಲಿದ್ದಾರೆ.

