ಕಾಪು : ತುಳುನಾಡಿನ 66 ಮೂಲ ಗರಡಿಗಳಲ್ಲಿ ಒಂದಾಗಿರುವ, ಸುಮಾರು 350 ವರ್ಷಗಳ ಇತಿಹಾಸವನ್ನು ಹೊಂದಿರುವ ಪಾದೂರು ಮತ್ತು ಕಳತ್ತೂರು ಗ್ರಾಮಸ್ಥರ ಆರಾಧನಾ ಕೇಂದ್ರವಾದ ಕಳತ್ತೂರು ಶ್ರೀ ಬ್ರಹ್ಮಬೈದೇರುಗಳ ಗರಡಿಯನ್ನು ಶ್ರೀ ಬ್ರಹ್ಮ ಬೈದೇರುಗಳ ಅಭಯ ವಾಕ್ಯದಂತೆ ಸಮಗ್ರ ಜೀರ್ಣೋದ್ಧಾರಗೊಳಿಸುವ ನಿಟ್ಟಿನಲ್ಲಿ ಈಗಾಗಲೇ ಚಾಲನೆ ನೀಡಲಾಗಿದೆ.
ಪ್ರಾಕ್ತನ ಇತಿಹಾಸ : ಕಳತ್ತೂರು ಶ್ರೀ ಬ್ರಹ್ಮಬೈದೇರುಗಳ ಗರಡಿಗೆ ಸುಮಾರು 350 ವರ್ಷಗಳ ಇತಿಹಾಸವಿದ್ದು ಪೂರ್ವದಲ್ಲಿ ಮುಳಿಹುಲ್ಲಿನ ಗುಡಿಯಲ್ಲಿ ಆರಾಧನೆ ಪಡೆದು ನಂತರ ಆ ಕಾಲದ ಹಿರಿಯರ ಅಪೇಕ್ಷೆಯಂತೆ ಆಯಕಟ್ಟಿನ ಹಂಚಿನ ಗರಡಿ ನಿರ್ಮಿಸಿ ಆರಾಧನೆ ಮಾಡಿಕೊಂಡು ಬರಲಾಗುತ್ತಿದೆ. 1994 ರಲ್ಲಿ ಗರಡಿಯ ಮುಚ್ಚಳಿಕೆ ಮತ್ತು ನೇಮದ ಚಪ್ಪರ ನವೀಕರಿಸಲಾಯಿತು. 2007 ರಲ್ಲಿ ಬ್ರಹ್ಮರ ಗುಂಡಕ್ಕೆ ಬೆಳ್ಳಿ ಹೊದಿಕೆ ಮಾಡಿದಂದಿನಿಂದ ಕಾಲಾವಧಿ ನೇಮೋತ್ಸವದಂದು ಅನ್ನಸಂತರ್ಪಣೆ ನಡೆಯುತ್ತಿದೆ. ಪ್ರಸ್ತುತ ಈ ಕಾಲಘಟ್ಟದಲ್ಲಿ ಗರಡಿ ಸಂಪೂರ್ಣ ಶಿಥಿಲಗೊಂಡಿದ್ದು ಭವಿಷ್ಯದಲ್ಲಿ ಆರಾಧನೆಗೆ ಕಷ್ಟ ಸಾಧ್ಯವಾಗುವುದನ್ನು ಮನಗಂಡು,ಬ್ರಹ್ಮ ಬೈದೇರುಗಳ ಅಭಯ ವಾಕ್ಯದಂತೆ ಪಾದೂರು ಕಳತ್ತೂರು ಉಭಯ ಗ್ರಾಮಗಳ ಗುತ್ತು-ಬರ್ಕೆ, ನಟ್ಟಿಲ್: ಗರಡಿ ಮನೆ ಹಾಗೂ ಉಭಯ ಗ್ರಾಮಸ್ಥರು ಸೇರಿ ಸಮಗ್ರ ಜೀರ್ಣೋದ್ಧಾರಕ್ಕೆ ಮುಂದಡಿಯಿಡಲಾಗಿದೆ.
ನವೀಕರಣದ ಯೋಜನೆಗಳು: ಶ್ರೀ ಬ್ರಹ್ಮಬೈದೇರುಗಳ ಗರಡಿಯ ಸಮಗ್ರ ನಿರ್ಮಾಣ ಯೋಜನೆಯಲ್ಲಿ ಪಂಚಾಂಗ, ನೆಲ., ಅಂತಸ್ತು, ಶಿಲಾ ಮೆಟ್ಟಿಲುಗಳು, ಶಿಲಾಸ್ತಂಭಗಳ ವಿನ್ಯಾಸ, ಕೆಂಪುಕಲ್ಲು ವಿನ್ಯಾಸ, ಮರದ ಮುಚ್ಚಳಿಕೆ, ಮರದ ಬಾಗಿಲು, ಕಿಟಕಿದ್ವಾರ, ಗೋಡೆಗೆ ಗ್ರಾನೈಟ್, ವಾಸ್ತುವಿನ್ಯಾಸ ಮತ್ತು ಮರದ ಕೆತ್ತನೆ, ನೇಮ ಚಪ್ಪರ, ಮುಖಮಂಟಪ, ಮಾಯಂದಾಲ್ ಗುಡಿ, ಪಿಲಿಚಂಡಿ ಗುಡಿ, ಸುತ್ತು ಕಂಪೌಂಡ್, ಹಾಸುಕಲ್ಲು, ಪ್ರಧಾನ ತೀರ್ಥಬಾವಿ, ಬ್ರಹ್ಮಪೀಠ, ಬ್ರಹ್ಮಮಂಟಪ, ಬ್ರಹ್ಮಬಾವಿ, ದೈವಗಳ ಮಣೆಮಂಚವು, ನಾಗದೇವರ ಕಟ್ಟೆ ವಿದ್ಯುತೀಕರಣ, ಬ್ರಹ್ಮಕಲಶೋತ್ಸವ ಖರ್ಚು ಸೇರಿದಂತೆ ಸುಮಾರು 2.50 ಕೋಟಿ ರೂ. ವೆಚ್ಚದ ಯೋಜನೆಯನ್ನು ಹಾಕಿಕೊಳ್ಳಲಾಗಿದೆ.
ಜೀರ್ಣೋದ್ದಾರದ ಹಂತಗಳು: ಜೀರ್ಣೋದ್ಧಾರಕ್ಕೆ ಸಂಬಂಧಿಸಿ ಪ್ರಶ್ನಾಚಿಂತನೆ ನಡೆಸಿ, ವಾಸ್ತು ತಜ್ಞರ ಸಲಹೆಯಂತೆ ಸಾನಿಧ್ಯ ವಿನ್ಯಾಸವನ್ನು ಪಡೆದುಕೊಂಡು ಪಾದೂರು ಕಳತ್ತೂರು ಶ್ರೀ ಬ್ರಹ್ಮ ಬೈದೇರುಗಳ ಗರಡಿ ಜೀರ್ಣೋದ್ಧಾರ ಸಮಿತಿಯನ್ನು ರಚಿಸಿ ವಿಜ್ಞಾಪನಾ ಪತ್ರ ಬಿಡುಗಡೆ, ಸಾನಿಧ್ಯ ಸಂಕೋಚ, ಬ್ರಹ್ಮಬೈದೇರುಗಳ * ಸಂದರ್ಶನದೊಂದಿಗೆ ಬಾಲಾಲಯ ಪ್ರತಿಷ್ಠೆ ಹಾಗೂ ಶಿಲಾನ್ಯಾಸ ನೆರವೇರಿಸಲಾಗಿದೆ.
ಆ. 24ರಂದು ನಿಧಿ ಕುಂಭ ಪ್ರತಿಷ್ಠಾಪನೆ: ಆ. 24ರಂದು ರವಿವಾರ ಬೆಳಿಗ್ಗೆ 10-15ರ ತುಲಾ ಲಗ್ನದಲ್ಲಿ ನಿಧಿ ಕುಂಭ ಪ್ರತಿಷ್ಠಾಪನೆ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ನಿಧಿ ಕುಂಭ ಸ್ಥಾಪನೆ ಸಂದರ್ಭ ಭಕ್ತಾಧಿಗಳಿಗೆ ಕುಂಭಕ್ಕೆ ನಿಧಿ ಸಮರ್ಪಿಸುವ ಅವಕಾಶ ನೀಡಲಾಗಿದ್ದು ಗರಡಿಯ ವಠಾರದಲ್ಲಿ ಪಂಚಲೋಹ ಮಾರಾಟ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದು ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಜಯಕೃಷ್ಣ ಆಳ್ವ ಪಾದೂರುಗುತ್ತು ಪ್ರಧಾನ ಕಾರ್ಯದರ್ಶಿ ರಂಗನಾಥ ಶೆಟ್ಟಿ ಬರೆಬೆಟ್ಟುಗುತ್ತು, ಮತ್ತು ವಿಶ್ವನಾಥ ಪೂಜಾರಿ ಕಳತ್ತೂರು ಗರಡಿಮನೆ ಹಾಗೂ ಸಮಿತಿ ಪದಾಧಿಕಾರಿಗಳು, ಗುತ್ತು ಬರ್ಕೆ, ನಟ್ಟಲ್ ಹಾಗೂ ಪಾದೂರು ಕಳತ್ತೂರು ಗ್ರಾಮಸ್ಥರು ತಿಳಿಸಿದ್ದಾರೆ.

