ರುದ್ರಭೂಮಿ ನಿರ್ಮಾಣ ಪುಣ್ಯದ ಕೆಲಸ : ರಘುಪತಿ ಭಟ್
ಹೆಬ್ರಿ : ಸ್ಮಶಾನದಲ್ಲೂ ಮನಸ್ಸಿಗೆ ಶಾಂತಿ ದೊರೆಯಬೇಕು, ಅಷ್ಟು ಅಚ್ಚುಕಟ್ಟಾಗಿ ಕಳ್ತೂರಿನಲ್ಲಿ ಸಾರ್ವಜನಿಕ ರುದ್ರಭೂಮಿಯನ್ನು ನಿರ್ಮಿಸಲಾಗಿದೆ. ದಾನಿಗಳ ನೆರವಿನಿಂದ ಸಕಲ ಸುಸಜ್ಜಿತ ರುದ್ರಭೂಮಿ ನಿರ್ಮಾಣ ಮಾಡಿರುವುದು ಪುಣ್ಯದ ಕೆಲಸ ಎಂದು ಉಡುಪಿಯ ಮಾಜಿ ಶಾಸಕ ಕೆ.ರಘುಪತಿ ಭಟ್ ಹೇಳಿದರು.

ಅವರು ಭಾನುವಾರ 38ನೇ ಕಳ್ತೂರು ಗ್ರಾಮ ಪಂಚಾಯಿತಿ ಮತ್ತು ಸ್ಮಶಾನ ಅಭಿವೃದ್ಧಿ ಸಮಿತಿಯ ವತಿಯಿಂದ ನಿರ್ಮಾಣಗೊಂಡ ಆರ್ಬೆಟ್ಟು ದಿ.ವೆಂಕಟೇಶ ಕಾಮತ್ ಸಾರ್ವಜನಿಕ ಹಿಂದೂ ರುದ್ರಭೂಮಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಭಿವೃದ್ಧಿಗೆ ಸಹಕಾರ ನೀಡುವುದು ಜನಪ್ರತಿನಿಧಿಗಳ ಕರ್ತವ್ಯವಾಗಿದೆ. ಉಡುಪಿ ಕ್ಷೇತ್ರದ 19ಗ್ರಾಮ ಪಂಚಾಯಿತಿಗೆ ದಿನದ 24 ಗಂಟೆಯೂ ನೀರು ಸರಬರಾಜಿಗೆ ವ್ಯವಸ್ಥೆಯನ್ನು ಶಾಸಕನಾಗಿದ್ದಾಗಲೇ ಮಾಡಿದ್ದೇನೆ. ನೀರಿನ ಸಮಸ್ಯೆ ಉದ್ಭವಿಸಲು ಸಾಧ್ಯವಿಲ್ಲ. ಕಳ್ತೂರಿನಲ್ಲಿ ರುದ್ರಭೂಮಿಯನ್ನು ನಿರ್ಮಿಸಿದ ಚಂದ್ರಶೇಖರ ಶೆಟ್ಟಿ ಮತ್ತವರ ತಂಡದ ಕಾರ್ಯವನ್ನು ರಘುಪತಿ ಭಟ್ ಶ್ಲಾಘಿಸಿದರು.

ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ.ಗಫೂರ್ ಮಾತನಾಡಿ ಸ್ಮಶಾನ ನಿರ್ಮಿಸಿದಂತೆ ಎಲ್ಲರೂ ಕೈಜೋಡಿಸಿದರೆ ಊರಿನ ಸಮಗ್ರ ಅಭಿವೃದ್ಧಿ ಸಾಧ್ಯವಿದೆ. ಅದಕ್ಕೆ ಕಳ್ತೂರು ಗ್ರಾಮವೇ ಸಾಕ್ಷಿಯಾಗಿದೆ. ಸ್ಮಶಾನ ಉದ್ಘಾಟನೆ ನನ್ನ ಜೀವನದ ಮೊದಲ ಕಾರ್ಯಕ್ರಮ. ಕೆಟ್ಟ ಮನಸ್ಸುಗಳು ಸುಟ್ಟು ಭವ್ಯ ಭಾರತ ನಿರ್ಮಾಣವಾಗಲಿ ಎಂದು ಆಶಿಸಿದರು.
ತನ್ನ ತಂದೆ ಸ್ಮರಣಾರ್ಥ ರುದ್ರಭೂಮಿ ನಿರ್ಮಿಸಿ ಕೊಟ್ಟ ಉದ್ಯಮಿ ಎ. ಮಾಧವ ಕಾಮತ್ ಮಾತನಾಡಿ ರಾಜಕೀಯ ಬದಿಗೊತ್ತಿ ಎಲ್ಲರೂ ಸೇರಿ ಕೆಲಸ ಮಾಡಿದಾಗ ಊರಿನ ಅಭಿವೃದ್ಧಿ ಸಾದ್ಯವಾಗುತ್ತದೆ. ಸ್ಮಶಾನ ನಿರ್ಮಾಣದ ಮೂಲಕ ನಮ್ಮೂರಿನ ಬಹುಕಾಲದ ಕೊರತೆ ಈಡೇರಿದೆ ಎಂದರು.
ಸ್ಮಶಾನ ಅಭಿವೃದ್ಧಿಯ ರೂವಾರಿ ಸ್ಮಶಾನ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಬಿ.ಚಂದ್ರಶೇಖರ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ ಸ್ಮಶಾನ ನಿರ್ಮಾಣದ ಮೂಲಕ ಬಹುದಿನಗಳ ಕನಸು ಸ್ಮಶಾನ ನಿರ್ಮಾಣಕ್ಕೆ ಸಹಕಾರ ನೀಡಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು.
ಸಾರ್ವಜನಿಕ ಹಿಂದೂ ರುದ್ರಭೂಮಿ ನಿರ್ಮಾಣಕ್ಕೆ ನೆರವು ನೀಡಿದ ದಾನಿಗಳನ್ನು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸವಿತಾ ಎ.ಸಿ, ಕೆಲಸ ಮಾಡಿ ಸಹಕಾರ ನೀಡಿದ ಹಲವರನ್ನು ಗೌರವಿಸಲಾಯಿತು. 38ನೇ ಕಳ್ತೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯವರಿಗೆ ಸ್ಮಶಾನದ ಕೀ ಯನ್ನು ಹಸ್ತಾಂತರಿಸಲಾಯಿತು. ಬ್ರಹ್ಮಾವರ ತಾಲ್ಲೂಕು ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಅಧ್ಯಕ್ಷೆ ಡಾ.ಸುನೀತಾ ಶೆಟ್ಟಿ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಉಡುಪಿಯ ಉದ್ಯಮಿ ಪ್ರಸಾದ್ ರಾಜ್ ಕಾಂಚನ್, ಕೊಕ್ಕರ್ಣೆ ಸಿಂಡಿಕೇಟ್ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಮೈರ್ಮಾಡಿ ಅಶೋಕ ಕುಮಾರ್ ಶೆಟ್ಟಿ, ಶ್ರೀಕ್ಷೇತ್ರ ಧರ್ಮಸ್ಥಳ ಯೋಜನೆಯ ಹೆಬ್ರಿ ತಾಲ್ಲೂಕಿನ ಯೋಜನಾಧಿಕಾರಿ ಲೀಲಾವತಿ, ದಾನಿಗಳಾದ ಉದ್ಯಮಿ ಎ. ಮಾಧವ ಕಾಮತ್, ನಾಗರಾಜ ಕಾಮತ್, ಮಹೇಶ ಶೆಟ್ಟಿ ಬ್ರಹ್ಮಾವರ, ನರಸಿಂಹ ಗಡಿಯಾರ್, ಕಂಬಳಗದ್ದೆ ಮನೆ ಚಂದ್ರಶೇಖರ ಶೆಟ್ಟಿ, ಜಯರಾಮ ನಾಯ್ಕ್, ಶಿವಪುರ ಶ್ರೀನಿವಾಸ ಹೆಬ್ಬಾರ್, ಸುಧಾಕರ ನಾಯ್ಕ್, ಸ್ಮಶಾನ ಅಭಿವೃದ್ಧಿ ಸಮಿತಿಯ ಕಾರ್ಯದರ್ಶಿ ಗಿರೀಶ ಕಾಮತ್, ರವಿ ಪೂಜಾರಿ ಸಂತೆಕಟ್ಟೆ, ಸ್ಮಶಾನ ಅಭಿವೃದ್ಧಿ ಸಮಿತಿಯಯ ಪದಾಧಿಕಾರಿಗಳು, ಗಣ್ಯರು, ದಾನಿಗಳು, ಸಂಘಸಂಸ್ಥೆಗಳ ಪ್ರಮುಖರು, ಊರಿನ ಪ್ರಮುಖರು ಉಪಸ್ಥಿತರಿದ್ದರು.
ದೀಕ್ಷಿತ್ ಶೆಟ್ಟಿ ಮತ್ತು ಗಣೇಶ್ ಅರಸಮ್ಮಕಾನು ನಿರೂಪಿಸಿ ಗಿರೀಶ್ ಕಾಮತ್ ಸ್ವಾಗತಿಸಿ ಚಂದ್ರಶೇಖರ ಶೆಟ್ಟಿ ಪ್ರಸ್ತಾವಿಕವಾಗಿ ಮಾತನಾಡಿದರು.

