ಕುಶಾಲನಗರದಲ್ಲಿ ಅನಧಿಕೃತ ಫ್ಲೆಕ್ಸ್ ಹಾವಳಿ ತೆರವುಗೊಳಿಸಲು ಕರವೇ ಸ್ವಾಭಿಮಾನಿ ಬಣ ಆಗ್ರಹ, ಪುರಸಭೆಗೆ ಮನವಿ

0
7

ಕೊಡಗು : ಜಿಲ್ಲೆಯ ಪ್ರಮುಖ ವಾಣಿಜ್ಯ ನಗರಿ ಕುಶಾಲನಗರದ ಮುಖ್ಯ ರಸ್ತೆಗಳಲ್ಲಿ ಅನಧಿಕೃತ ಫ್ಲೆಕ್ಸ್ ಮತ್ತು ಬ್ಯಾನರ್‌ಗಳ ಹಾವಳಿ ಮಿತಿಮೀರಿದ್ದು, ಇವುಗಳನ್ನು ತಕ್ಷಣವೇ ತೆರವುಗೊಳಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಸ್ಥಳೀಯ ಪುರಸಭೆಗೆ ತೀವ್ರ ಒತ್ತಾಯಿಸಿದ್ದಾರೆ.

ಎಲ್ಲೆಂದರಲ್ಲಿ ಫ್ಲೆಕ್ಸ್ ಪ್ರದರ್ಶನ ಸೌಂದರ್ಯಕ್ಕೆ ಧಕ್ಕೆನಗರದ ಹೃದಯಭಾಗದಲ್ಲಿರುವ ಕುಶಾಲನಗರ ಸಿಟಿ ಸೆಂಟರ್ ಮಾಲ್ ಮುಂಭಾಗ ಹಾಗೂ ಸಾರ್ವಜನಿಕರು ಹೆಚ್ಚಾಗಿ ಸಂಚರಿಸುವ ಕಾರು ನಿಲ್ದಾಣದ (ಕಾರ್ ಪಾರ್ಕಿಂಗ್) ಆವರಣದ ಮುಖ್ಯ ರಸ್ತೆಗಳಲ್ಲಿ ಯಾವುದೇ ಅಧಿಕೃತ ಅನುಮತಿ ಇಲ್ಲದೆ ಬೃಹತ್ ಗಾತ್ರದ ಫ್ಲೆಕ್ಸ್‌ಗಳನ್ನು ಅಳವಡಿಸಲಾಗಿದೆ. ಇದು ನಗರದ ಸೌಂದರ್ಯವನ್ನು ಕೆಡಿಸುತ್ತಿರುವುದಲ್ಲದೆ, ವಾಹನ ಸವಾರರ ಗಮನ ಸೆಳೆದು ಅಪಘಾತಗಳಿಗೂ ಕಾರಣವಾಗುವ ಆತಂಕ ಸೃಷ್ಟಿಸಿದೆ ಎಂದು ಸಂಘಟನೆ ದೂರಿದೆ.

ಅಳವಡಿಸಲಾಗಿರುವ ಬಹುತೇಕ ಫ್ಲೆಕ್ಸ್ ಮತ್ತು ನಾಮಫಲಕಗಳಲ್ಲಿ ಕನ್ನಡ ಭಾಷೆಯನ್ನು ಬಳಸದೆ ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಕರ್ನಾಟಕದ ನೆಲದಲ್ಲಿ ಕನ್ನಡಕ್ಕೇ ಮೊದಲ ಆದ್ಯತೆ ನೀಡಬೇಕು ಎಂಬ ನಿಯಮವಿದ್ದರೂ, ನಿಯಮಗಳನ್ನು ಗಾಳಿಗೆ ತೂರಿ ಅನ್ಯಭಾಷೆಯ ಜಾಹೀರಾತುಗಳನ್ನು ಪ್ರದರ್ಶಿಸುತ್ತಿರುವುದು ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತಂದಿದೆ ಎಂದು ಕರವೇ ಸ್ವಾಭಿಮಾನಿ ಬಣ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಸಂಘಟನೆಯ ಪ್ರಮುಖ ಬೇಡಿಕೆಗಳು

1)ಸಿಟಿ ಸೆಂಟರ್ ಮಾಲ್ ಹಾಗೂ ಕಾರು ನಿಲ್ದಾಣದ ಬಳಿ ಇರುವ ಎಲ್ಲಾ ಅನಧಿಕೃತ ಫ್ಲೆಕ್ಸ್‌ಗಳನ್ನು ಪುರಸಭೆ ಅಧಿಕಾರಿಗಳು ಕೂಡಲೇ ಮುಟ್ಟುಗೋಲು ಹಾಕಿಕೊಳ್ಳಬೇಕು.

2) ನಿಯಮ ಬಾಹಿರವಾಗಿ ಸಾರ್ವಜನಿಕ ಸ್ಥಳಗಳನ್ನು ಮಲಿನಗೊಳಿಸಿ, ಫ್ಲೆಕ್ಸ್ ಅಳವಡಿಸಿರುವ ಮಾಲೀಕರು ಮತ್ತು ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಜರುಗಿಸಿ ಭಾರಿ ಮೊತ್ತದ ದಂಡ ವಿಧಿಸಬೇಕು.

3) ಮುಂಬರುವ ದಿನಗಳಲ್ಲಿ ನಗರದಲ್ಲಿ ಪ್ರದರ್ಶನಗೊಳ್ಳುವ ಯಾವುದೇ ಫಲಕಗಳಲ್ಲಿ ಕನ್ನಡ ಭಾಷೆಯ ಬಳಕೆ ಕಡ್ಡಾಯಗೊಳಿಸಬೇಕು.

ಪುರಸಭೆಯು ಈ ಮನವಿಗೆ ತಕ್ಷಣ ಸ್ಪಂದಿಸಿ ಕ್ರಮ ಕೈಗೊಳ್ಳದಿದ್ದಲ್ಲಿ, ಕರವೇ ಸ್ವಾಭಿಮಾನಿ ಬಣದ ವತಿಯಿಂದ ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಸಂಘಟನೆಯ ಪದಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

LEAVE A REPLY

Please enter your comment!
Please enter your name here