ಕರವೇ ಸ್ವಾಭಿಮಾನಿ ಬಣ ದಿಢೀರ್ ಭೇಟಿ : ಪುರಸಭೆ ಅಧಿಕಾರಿಗಳ ವಿರುದ್ಧ ಆಕ್ರೋಶ

0
14

ಸೋಮವಾರ ಪೇಟೆ : ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಪದಾಧಿಕಾರಿಗಳು ಇಂದು ಇಲ್ಲಿನ ಪುರಸಭೆ ಕಚೇರಿಗೆ ದಿಢೀರ್ ಭೇಟಿ ನೀಡಿ, ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಸ್ಪಂದಿಸದ ಮತ್ತು ಕಚೇರಿ ನಿಯಮಗಳನ್ನು ಉಲ್ಲಂಘಿಸುತ್ತಿರುವ ಅಧಿಕಾರಿ ಹಾಗೂ ಸಿಬ್ಬಂದಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.

ರಾಜ್ಯ ಸರ್ಕಾರದ ಆದೇಶದಂತೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ಕಚೇರಿಗೆ ಹಾಜರಾಗಬೇಕು. ಆದರೆ, ಕರವೇ ಸ್ವಾಭಿಮಾನಿ ಬಣದ ಕಾರ್ಯಕರ್ತರು ಇಂದು ಬೆಳಿಗ್ಗೆ ಕಚೇರಿಯನ್ನು ವೀಕ್ಷಣೆ ಮಾಡಿದಾಗ, ಬಹುತೇಕ ಸಿಬ್ಬಂದಿಗಳು ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಹಾಜರಾಗದೇ ಇರುವುದು ಕಂಡುಬಂದಿದೆ. ಕಚೇರಿಗೆ ಬಂದಿದ್ದ ಕೆಲವೇ ಕೆಲವು ಸಿಬ್ಬಂದಿಗಳೂ ಸಹ ಕಡ್ಡಾಯವಾಗಿ ಧರಿಸಬೇಕಾದ ಗುರುತಿನ ಚೀಟಿ (ID Card) ಧರಿಸಿರಲಿಲ್ಲ.

ಕಚೇರಿಯಲ್ಲಿ ಸಾರ್ವಜನಿಕರ ಕೆಲಸಗಳು ವಿಳಂಬವಾಗುತ್ತಿರುವ ಬಗ್ಗೆ ಹಾಗೂ ಸಿಬ್ಬಂದಿಗಳ ಬೇಜವಾಬ್ದಾರಿತನದ ಬಗ್ಗೆ ಕರವೇ ಪದಾಧಿಕಾರಿಗಳು ಪುರಸಭೆಯ ಮುಖ್ಯ ಅಧಿಕಾರಿಯವರನ್ನು ಭೇಟಿ ಮಾಡಿ ಮಾಹಿತಿ ನೀಡಿದರು. ಈ ವೇಳೆ ಸ್ವತಃ ಮುಖ್ಯ ಅಧಿಕಾರಿಯವರೇ ಗುರುತಿನ ಚೀಟಿ ಧರಿಸದೇ ಇರುವುದನ್ನು ಕಂಡು ಕರವೇ ಕಾರ್ಯಕರ್ತರು ಅವರನ್ನು ತರಾಟೆಗೆ ತೆಗೆದುಕೊಂಡರು. “ಮುಖ್ಯ ಅಧಿಕಾರಿಯಾದ ನೀವೇ ಐಡಿ ಕಾರ್ಡ್ ಹಾಕದಿದ್ದರೆ, ನಿಮ್ಮ ಕೈಕೆಳಗಿನ ಸಿಬ್ಬಂದಿಗಳು ಹೇಗೆ ಹಾಕುತ್ತಾರೆ?” ಎಂದು ನೇರವಾಗಿ ಪ್ರಶ್ನಿಸಿದರು. ಕರವೇ ಕಾರ್ಯಕರ್ತರ ಪ್ರಶ್ನೆಗೆ ಉತ್ತರಿಸಲಾಗದ ಮುಖ್ಯ ಅಧಿಕಾರಿಯವರು ತಕ್ಷಣವೇ ಸ್ಥಳದಲ್ಲಿಯೇ ತಮ್ಮ ಐಡಿ ಕಾರ್ಡ್ ಧರಿಸಿದ್ದಲ್ಲದೆ, ಉಳಿದ ಸಿಬ್ಬಂದಿಗಳಿಗೂ ಕಡ್ಡಾಯವಾಗಿ ಧರಿಸುವಂತೆ ಸೂಚನೆ ನೀಡಿದರು

ಇದೇ ಸಂದರ್ಭದಲ್ಲಿ ಪುರಸಭೆಯ ಹಲವು ಲೋಪದೋಷಗಳನ್ನು ಕರವೇ ಸ್ವಾಭಿಮಾನಿ ಬಣದ ಪದಾಧಿಕಾರಿಗಳು ಅಧಿಕಾರಿಗಳ ಗಮನಕ್ಕೆ ತಂದು ತಕ್ಷಣ ಸರಿಪಡಿಸುವಂತೆ ಒತ್ತಾಯಿಸಿದರು

1) ಕುಶಾಲನಗರ ಪಟ್ಟಣ ಪಂಚಾಯಿತಿಯಿಂದ ಪುರಸಭೆಯಾಗಿ ಮೇಲ್ದರ್ಜೆಗೆ ಏರಿ ಮೂರು ವರ್ಷಗಳು ಕಳೆದಿದ್ದರೂ, ಕಚೇರಿಯ ಎಲ್ಲಾ ನಾಮಫಲಕಗಳಲ್ಲಿ ಮತ್ತು ಮುಖ್ಯ ಅಧಿಕಾರಿಯವರ ಕೊಠಡಿಯಲ್ಲಿರುವ ಇತಿಹಾಸದ ಫಲಕಗಳಲ್ಲಿ ಇಂದಿಗೂ “ಪಟ್ಟಣ ಪಂಚಾಯಿತಿ” ಎಂದೇ ಇದೆ. ಇದನ್ನು ತಕ್ಷಣ ಬದಲಾಯಿಸಿ “ಪುರಸಭೆ” ಎಂದು ಮರುನಾಮಕರಣ ಮಾಡಬೇಕು ಮತ್ತು ಬೇರೆ ಕಡೆ ಪಟ್ಟಣ ಪಂಚಾಯತಿ ಎಂದು ಇರುವ ಕಡೆ , ಎಲ್ಲಾ ನಾಮಫಲಕಗಳನ್ನು ಪುರಸಭೆ ಎಂದು ಮಾರ್ಪಾಟು ಶೀಘ್ರದಲ್ಲೇ ಮಾಡಬೇಕೆಂದು ಕರವೇ ಸ್ವಾಭಿಮಾನಿ ಬಣದಿಂದ ತಿಳಿಸಲಾಗಿದೆ.

2) ಮಳೆಗಾಲ ಹತ್ತಿರ ಬರುತ್ತಿರುವುದರಿಂದ ಪಟ್ಟಣದ ಎಲ್ಲಾ ಚರಂಡಿಗಳನ್ನು ತಕ್ಷಣವೇ ಸಂಪೂರ್ಣವಾಗಿ ಸ್ವಚ್ಛಗೊಳಿಸಬೇಕು ಹಾಗೂ ಕಸದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು.

3) ಸಾರ್ವಜನಿಕರಿಗೆ ತೀವ್ರ ತೊಂದರೆ ನೀಡುತ್ತಿರುವ ‘ಇ-ಸ್ವತ್ತು’ (E-Swathu) ವಿತರಣೆಯ ಸಮಸ್ಯೆಗೆ ಅಧಿಕಾರಿಗಳು ತಕ್ಷಣ ಸ್ಪಂದಿಸಿ, ಜನರಿಗೆ ನ್ಯಾಯ ಒದಗಿಸಬೇಕು.

ಈ ದಿಢೀರ್ ಭೇಟಿ ಮತ್ತು ಮನವಿ ಸಲ್ಲಿಕೆಯ ಸಂದರ್ಭದಲ್ಲಿ ಕರವೇ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷರಾದ ಪ್ರಾಸಿಸ್ ಡಿಸೋಜ, ಜಿಲ್ಲಾ ಉಪಾಧ್ಯಕ್ಷರಾದ ರಾಜಶೇಖರ್ ಗೌಡ, ಗೌರವಾಧ್ಯಕ್ಷರಾದ ಚಂದ್ರು, ಮಹಿಳಾ ಜಿಲ್ಲಾಧ್ಯಕ್ಷರಾದ ಜಯಶ್ರೀ ಮುರುಗೇಶ್, ಕುಶಾಲನಗರ ತಾಲ್ಲೂಕು ಅಧ್ಯಕ್ಷರಾದ ಶಿವಣ್ಣ, ತಾಲ್ಲೂಕು ಉಪಾಧ್ಯಕ್ಷರಾದ ರಂಗಸ್ವಾಮಿ, ತಾಲೂಕು ಸಂಚಾಲಕರಾದ ಚಂದ್ರಣ್ಣ, ಜಿಲ್ಲಾ ಸಂಚಾಲಕರಾದ ಸತೀಶ್ ಹಾಗೂ ಪ್ರಮುಖ ಮುಖಂಡರಾದ ನಂಜಪ್ಪ, ರಮೇಶ್ ಮತ್ತು ಕಾರ್ತಿಕ್ ಸೇರಿದಂತೆ ಹಲವು ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸಾರ್ವಜನಿಕರ ತೆರಿಗೆ ಹಣದಲ್ಲಿ ಸಂಬಳ ಪಡೆಯುವ ಅಧಿಕಾರಿಗಳು ಕಚೇರಿ ಸಮಯ ಪಾಲನೆ ಮಾಡದೆ ಸಾರ್ವಜನಿಕರನ್ನು ಅಲೆದಾಡಿಸಿದರೆ ಮುಂದಿನ ದಿನಗಳಲ್ಲಿ ಕರವೇ ಸ್ವಾಭಿಮಾನಿ ಬಣದಿಂದ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಕರವೇ ಸ್ವಾಭಿಮಾನಿ ಬಣದಿಂದ ಇದೇ ವೇಳೆ ಕಠಿಣ ಎಚ್ಚರಿಕೆ ನೀಡಿದರು.

LEAVE A REPLY

Please enter your comment!
Please enter your name here