ಕರ್ನಾಟಕ ಜಾನಪದ ಪರಿಷತ್ತು: ದ.ಕ. ಜಿಲ್ಲೆಯ ಎಲ್ಲಾ 9 ತಾಲೂಕು ಘಟಕಗಳು ವಿಸರ್ಜನೆ

0
7

ವರದಿ : ಮಂದಾರ ರಾಜೇಶ್ ಭಟ್

​ಮಂಗಳೂರು : ಕರ್ನಾಟಕ ಜಾನಪದ ಪರಿಷತ್ತು (ಕಜಾಪ) ಬೆಂಗಳೂರು ಕೇಂದ್ರ ಘಟಕದ ಆದೇಶದಂತೆ, ದಕ್ಷಿಣ ಕನ್ನಡ ಜಿಲ್ಲಾ ಘಟಕದ ವ್ಯಾಪ್ತಿಯಲ್ಲಿರುವ ಎಲ್ಲಾ ಒಂಬತ್ತು ತಾಲೂಕು ಘಟಕಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಬರ್ಖಾಸ್ತುಗೊಳಿಸಲಾಗಿದೆ.

​ದಿನಾಂಕ 30/04/2026ರ ರಾತ್ರಿಯಿಂದಲೇ ಈ ಆದೇಶ ಜಾರಿಗೆ ಬಂದಿದ್ದು, ಜಿಲ್ಲಾಧ್ಯಕ್ಷರ ಅನುಮೋದನೆಯೊಂದಿಗೆ ಅಧಿಕೃತ ಸೂಚನೆ ಹೊರಡಿಸಲಾಗಿದೆ. ಈ ಕುರಿತು ಪತ್ರಿಕೆಗೆ ಮಾಹಿತಿ ನೀಡಿರುವ ಜಿಲ್ಲಾ ಘಟಕವು, ಸಂಘಟನೆಯಲ್ಲಿ ಪಾರದರ್ಶಕತೆ ಮತ್ತು ನವ ಚೈತನ್ಯ ತುಂಬುವ ನಿಟ್ಟಿನಲ್ಲಿ ಈ ತುರ್ತು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.

​ಕಾರ್ಯಚಟುವಟಿಕೆಗಳ ಸ್ಥಗಿತ

ಮುಂದಿನ ಆದೇಶದವರೆಗೆ ಬರ್ಖಾಸ್ತುಗೊಂಡ ಘಟಕಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಪರಿಷತ್ತಿನ ಹೆಸರಿನಲ್ಲಿ ಯಾವುದೇ ವ್ಯವಹರಿಸುವಂತಿಲ್ಲ ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

​ಸಕ್ರಿಯತೆಯ ಕೊರತೆ

ಜಿಲ್ಲೆಯ ಒಂಬತ್ತು ಘಟಕಗಳ ಪೈಕಿ ಕೇವಲ ಕೆಲವು ಘಟಕಗಳು ಮಾತ್ರ ಸಕ್ರಿಯವಾಗಿದ್ದು, ಉಳಿದ ಘಟಕಗಳಲ್ಲಿ ಕಾರ್ಯವೈಖರಿ ಕುಂಠಿತಗೊಂಡಿರುವುದು ಈ ನಿರ್ಧಾರಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.

ಹೊಸ ಪದಾಧಿಕಾರಿಗಳ ನೇಮಕ

ಶೀಘ್ರದಲ್ಲೇ ಎಲ್ಲಾ ತಾಲೂಕುಗಳಿಗೆ ಹೊಸ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ನೇಮಕ ಮಾಡುವ ಸಾಧ್ಯತೆ ದಟ್ಟವಾಗಿದೆ.

​ಕಠಿಣ ಮಾನದಂಡಗಳು

ಹೊಸ ನೇಮಕಾತಿಯಲ್ಲಿ ಪಾರದರ್ಶಕತೆಗೆ ಆದ್ಯತೆ ನೀಡಲಾಗುವುದು. ಸಮಾಜದಲ್ಲಿ ಉತ್ತಮ ಚಾರಿತ್ರ್ಯ ಉಳ್ಳವರು ಮತ್ತು ಜಾನಪದ ರಂಗದಲ್ಲಿ ಆಸಕ್ತಿ ಉಳ್ಳವರಿಗೆ ಮಾತ್ರ ಅವಕಾಶ ನೀಡಲಾಗುವುದು.

​ಕ್ರಿಮಿನಲ್ ಹಿನ್ನೆಲೆಗೆ ನೋ ಎಂಟ್ರಿ

ಯಾವುದೇ ರೀತಿಯ ಕ್ರಿಮಿನಲ್ ಹಿನ್ನೆಲೆ ಹೊಂದಿರುವ ವ್ಯಕ್ತಿಗಳಿಗೆ ಪರಿಷತ್ತಿನ ಪದಾಧಿಕಾರಿಗಳಾಗಲು ಅವಕಾಶ ನೀಡುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಜಿಲ್ಲಾ ಘಟಕ ನೀಡಿದೆ.
​”ರಾಜ್ಯಾಧ್ಯಕ್ಷರ ಸೂಚನೆಯಂತೆ ಸಂಘಟನೆಯ ಹಿತದೃಷ್ಟಿಯಿಂದ ಈ ಶಿಸ್ತು ಕ್ರಮ ಕೈಗೊಳ್ಳಲಾಗಿದೆ. ಜನಪದ ಕಲೆ ಮತ್ತು ಸಂಸ್ಕೃತಿಯ ಉಳಿವಿಗೆ ಪ್ರಾಮಾಣಿಕವಾಗಿ ಶ್ರಮಿಸುವ ತಂಡವನ್ನು ಶೀಘ್ರದಲ್ಲೇ ಕಟ್ಟಲಾಗುವುದು.” ಎಂದು ಜಿಲ್ಲಾಧ್ಯಕ್ಷರ ಕಚೇರಿಯಿಂದ ಮಾಹಿತಿ ಲಭಿಸಿದೆ.

LEAVE A REPLY

Please enter your comment!
Please enter your name here