ಚಿಕ್ಕಬಳ್ಳಾಪುರ : ಕೆರೆ ಬಳಿ ಆಟವಾಡುತ್ತಿದ್ದ ಮಕ್ಕಳನ್ನು ರಕ್ಷಿಸಲು ಹೋದ ತಾಯಿ ಪ್ರಾಣ ಕಳೆದುಕೊಂಡ ದಾರುಣ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಮುರಗಮಲ್ಲ ಕೆರೆಯಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ತಬುಸುಮ್ ಖಾನ್ (24) ಎಂದು ಗುರುತಿಸಲಾಗಿದೆ. ಇವರು ಬೆಂಗಳೂರಿನ ಬನಶಂಕರಿ ನಿವಾಸಿಯಾಗಿದ್ದು, ಕುಟುಂಬದೊಂದಿಗೆ ಮುರಗಮಲ್ಲ ದರ್ಗಾಗೆ ಭೇಟಿ ನೀಡಿದ್ದರು.
ಕುಟುಂಬಸ್ಥರು ಕೆರೆ ಬಳಿ ಕಾಲ ಕಳೆಯುತ್ತಿದ್ದ ವೇಳೆ, ತಾಯಿ ಬಟ್ಟೆ ತರಲು ತೆರಳಿದ್ದಾಗ ಮಕ್ಕಳು ಕೆರೆಯ ನೀರಿಗೆ ಇಳಿದಿದ್ದಾರೆ. ಈ ವೇಳೆ ಅವರು ಮುಳುಗಲು ಆರಂಭಿಸಿದ್ದನ್ನು ಗಮನಿಸಿದ ತಾಯಿ ತಕ್ಷಣವೇ ಅವರನ್ನು ರಕ್ಷಿಸಲು ನೀರಿಗೆ ದುಮುಕಿದ್ದಾರೆ.
ಮೂರು ಮಕ್ಕಳು ನೀರಿನಲ್ಲಿ ಮುಳುಗುತ್ತಿದ್ದಾಗ, ಸಂಬಂಧಿಕರು ಹಾಗೂ ತಬಸುಮ್ ಅವರ ಪತಿ ತಕ್ಷಣ ಧಾವಿಸಿ ಮಕ್ಕಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಈಜು ಬಾರದ ತಬಸುಮ್ ಖಾನ್ ಅವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಮಕ್ಕಳನ್ನು ಜೀವಂತವಾಗಿ ಉಳಿಸಿಕೊಂಡರೂ, ಪತ್ನಿಯನ್ನು ಕಳೆದುಕೊಂಡ ದುಃಖದಲ್ಲಿ ಪತಿ ಕಣ್ಣೀರಿಟ್ಟಿದ್ದು, ಕುಟುಂಬಸ್ಥರು ಶೋಕ ಸಾಗರದಲ್ಲಿ ಮುಳುಗಿದ್ದಾರೆ. ದರ್ಗಾ ಭೇಟಿಗೆ ಬಂದ ಕುಟುಂಬಕ್ಕೆ ಈ ದುರ್ಘಟನೆ ಭಾರೀ ಆಘಾತ ತಂದಿದೆ.

