ಬಿಸಿಲಿನ ತಾಪ ಹೆಚ್ಚಳ : ಕಟ್ಟಡ ಕಾರ್ಮಿಕರಿಗೆ ಮಧ್ಯಾಹ್ನ ವಿಶ್ರಾಂತಿ ಕಡ್ಡಾಯ..!

0
5

ಮಂಗಳೂರು : ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ತಾಪಮಾನ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಕಟ್ಟಡ ಕಾಮಗಾರಿ ಸ್ಥಳಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರ ಆರೋಗ್ಯದ ಹಿತದೃಷ್ಟಿಯಿಂದ ಮಧ್ಯಾಹ್ನದ ಬಿಸಿಲಿನ ಸಮಯದಲ್ಲಿ ಅವರಿಗೆ ವಿಶ್ರಾಂತಿ ನೀಡುವುದು ಗುತ್ತಿಗೆದಾರರು ಹಾಗೂ ಮಾಲೀಕರ ಜವಾಬ್ದಾರಿಯಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾರ್ಮಿಕ ಇಲಾಖೆ ಸೂಚಿಸಿದೆ.

ತೀವ್ರ ಬಿಸಿಲಿನ ಪರಿಣಾಮದಿಂದ ಕಾರ್ಮಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಇರುವುದರಿಂದ, ಮಧ್ಯಾಹ್ನ ಸಮಯದಲ್ಲಿ ಕೆಲಸಕ್ಕೆ ವಿರಾಮ ನೀಡಿ ಸೂಕ್ತ ವಿಶ್ರಾಂತಿ ನೀಡುವಂತೆ ಇಲಾಖೆಯು ತಿಳಿಸಿದೆ.

ಇದರ ಜೊತೆಗೆ, ಕೆಲಸದ ಸ್ಥಳಗಳಲ್ಲಿ ಕಾರ್ಮಿಕರಿಗೆ ಅಗತ್ಯವಾದ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ ಸೌಲಭ್ಯ ಒದಗಿಸುವುದು ಹಾಗೂ ನಿಯಮಿತವಾಗಿ ಆರೋಗ್ಯ ತಪಾಸಣೆ ನಡೆಸುವುದು ಗುತ್ತಿಗೆದಾರರು ಮತ್ತು ಮಾಲೀಕರ ಕರ್ತವ್ಯವಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ.

ಈ ಸೂಚನೆಗಳನ್ನು ಪಾಲಿಸದ ಪರಿಣಾಮವಾಗಿ ಯಾವುದೇ ಅಹಿತಕರ ಘಟನೆಗಳು ಸಂಭವಿಸಿದರೆ, ಸಂಬಂಧಿಸಿದ ಗುತ್ತಿಗೆದಾರರು ಅಥವಾ ಮಾಲೀಕರೇ ನೇರವಾಗಿ ಹೊಣೆಗಾರರಾಗಿರುತ್ತಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಸಹಾಯಕ ಕಾರ್ಮಿಕ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾರ್ಮಿಕರ ಸುರಕ್ಷತೆ ಮತ್ತು ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಈ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲು ಇಲಾಖೆ ಕರೆ ನೀಡಿದೆ.

LEAVE A REPLY

Please enter your comment!
Please enter your name here