KCET 2026 ಫಲಿತಾಂಶ ಇಂದು ಪ್ರಕಟ..!

0
52

ಮಂಗಳೂರು : ಕರ್ನಾಟಕದ ಲಕ್ಷಾಂತರ ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿದ್ದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (KCET/UGCET) 2026 ಫಲಿತಾಂಶ ಇಂದು ಪ್ರಕಟವಾಗಲಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಫಲಿತಾಂಶ ಪ್ರಕಟಣೆಗೆ ಅಗತ್ಯ ಸಿದ್ಧತೆಗಳನ್ನು ಪೂರ್ಣಗೊಳಿಸಿದ್ದು, ವಿದ್ಯಾರ್ಥಿಗಳಲ್ಲಿ ತೀವ್ರ ಕುತೂಹಲ ಮನೆ ಮಾಡಿದೆ.

ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವರು ಹಾಗೂ ಕೆಇಎ ಸಹ ಅಧ್ಯಕ್ಷರಾದ ಡಾ. ಶರಣ ಪ್ರಕಾಶ್ ಪಾಟೀಲ್ ಅವರು ಇಂದು ಮಧ್ಯಾಹ್ನ 12 ಗಂಟೆಗೆ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಹಾಗೂ ಟಾಪರ್‌ಗಳ ಪಟ್ಟಿಯನ್ನು ಬಿಡುಗಡೆ ಮಾಡಲಿದ್ದಾರೆ. ಬಳಿಕ ಮಧ್ಯಾಹ್ನ 2 ಗಂಟೆಯ ನಂತರ ಅಭ್ಯರ್ಥಿಗಳು ತಮ್ಮ ಫಲಿತಾಂಶ ಮತ್ತು ರ‍್ಯಾಂಕ್‌ಗಳನ್ನು ಆನ್‌ಲೈನ್‌ನಲ್ಲಿ ವೀಕ್ಷಿಸಬಹುದು ಎಂದು ಕೆಇಎ ತಿಳಿಸಿದೆ.

ಈ ಬಾರಿ ರಾಜ್ಯದಾದ್ಯಂತ ನಡೆದ KCET ಪರೀಕ್ಷೆಗೆ ಸುಮಾರು 3.3 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರಾಗಿದ್ದರು. ಏಪ್ರಿಲ್ 22 ರಿಂದ 24ರವರೆಗೆ ಪರೀಕ್ಷೆಗಳು ನಡೆದಿದ್ದು, ಕೃಷಿ ಮತ್ತು ಪಶುವೈದ್ಯಕೀಯ ಪ್ರಾಯೋಗಿಕ ಪರೀಕ್ಷೆಗಳ ಮರುನಡೆಸುವಿಕೆಯಿಂದ ಫಲಿತಾಂಶ ಪ್ರಕಟಣೆ ಸ್ವಲ್ಪ ವಿಳಂಬವಾಗಿತ್ತು.

ಫಲಿತಾಂಶ ಪರಿಶೀಲಿಸುವುದು ಹೇಗೆ?

  • KEA ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
  • KCET Result 2026 ಲಿಂಕ್ ಕ್ಲಿಕ್ ಮಾಡಿ.
  • ನೋಂದಣಿ ಸಂಖ್ಯೆ (Registration Number) ನಮೂದಿಸಿ.
  • ಫಲಿತಾಂಶ ಮತ್ತು ರ‍್ಯಾಂಕ್ ಕಾರ್ಡ್ ವೀಕ್ಷಿಸಿ.
  • ಭವಿಷ್ಯದ ಬಳಕೆಗಾಗಿ ಡೌನ್‌ಲೋಡ್ ಮಾಡಿ ಪ್ರಿಂಟ್ ತೆಗೆದುಕೊಳ್ಳಿ.

ವಿದ್ಯಾರ್ಥಿಗಳಿಗೆ ಸಲಹೆ

ಫಲಿತಾಂಶ ಪ್ರಕಟವಾದ ತಕ್ಷಣ ಲಕ್ಷಾಂತರ ವಿದ್ಯಾರ್ಥಿಗಳು ಒಂದೇ ವೇಳೆ ವೆಬ್‌ಸೈಟ್‌ಗೆ ಭೇಟಿ ನೀಡುವ ಸಾಧ್ಯತೆ ಇರುವುದರಿಂದ ಸರ್ವರ್ ನಿಧಾನಗತಿಯಲ್ಲಿ ಕಾರ್ಯನಿರ್ವಹಿಸಬಹುದು. ಆದ್ದರಿಂದ ವಿದ್ಯಾರ್ಥಿಗಳು ಆತಂಕಪಡದೇ ಸ್ವಲ್ಪ ಸಮಯದ ಬಳಿಕ ಮತ್ತೆ ಪ್ರಯತ್ನಿಸುವಂತೆ ಕೆಇಎ ಮನವಿ ಮಾಡಿದೆ.

KCET ಫಲಿತಾಂಶದ ಬಳಿಕ ಎಂಜಿನಿಯರಿಂಗ್, ಫಾರ್ಮಸಿ, ಕೃಷಿ, ಪಶುವೈದ್ಯಕೀಯ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶ ಪ್ರಕ್ರಿಯೆ ಹಾಗೂ ಕೌನ್ಸೆಲಿಂಗ್ ಹಂತ ಆರಂಭವಾಗಲಿದೆ.

LEAVE A REPLY

Please enter your comment!
Please enter your name here