ಉಡುಪಿ : ತುಳುನಾಡಿನಲ್ಲಿ ತುಳು ನಾಟಕಗಳು ಚಳುವಳಿ ರೂಪದಲ್ಲಿಯೇ ಆರಂಭವಾಗಿದ್ದವು. 1910ರಲ್ಲಿ ತುಳುನಾಟಕ ಕೂಟವನ್ನು ಕಟ್ಟಿಕೊಂಡು ಅನೇಕ ಮಂದಿ ಕಲಾವಿದರು ಜನಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದರು ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ತಿಳಿಸಿದರು.
ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ತುಳುಕೂಟ ಉಡುಪಿ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಆಶ್ರಯದಲ್ಲಿ ನಡೆದ 24ನೇ ವರ್ಷದ ಕೆಮ್ತೂರು ದೊಡ್ಡಣ್ಣ ಶೆಟ್ಟಿ ಸ್ಮರಣಾರ್ಥ ಕೆಮ್ತೂರು ತುಳು ನಾಟಕ ಪರ್ಬ ಉದ್ಘಾಟಿಸಿ ಮಾತನಾಡಿದರು.
ತುಳು ಕೂಟದ ಸ್ಥಾಪಕ ಅಧ್ಯಕ್ಷ ಭಾಸ್ಕರಾನಂದ ಕುಮಾರ್ ಅಧ್ಯಕ್ಷತೆ ವಹಿಸಿದ್ದರು , ಕನ್ನಡ ಮತ್ತು ಸಂಸತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಕಾಲೇಜಿನ ಪ್ರಾಂಶುಪಾಲೆ ವನಿತಾ ಮಯ್ಯ, ಅಕಾಡೆಮಿ ಸದಸ್ಯ ನಾಗೇಶ್ ಕುಮಾರ್ ಉದ್ಯಾವರ, ತುಳುಕೂಟದ ಉಪಾಧ್ಯಕ್ಷ ದಿವಾಕರ ಸನಿಲ್, ಶೋಭಾ ಶೆಟ್ಟಿ, ಕೆಮ್ತೂರು ಕುಟುಂಬದ ವಿಜಯ್ ಕುಮಾರ್ ಶೆಟ್ಟಿ, ತುಳುಕೂಟದ ಕೋಶಾಧಿಕಾರಿ ಚೈತನ್ಯ ಎಂ.ಜಿ., ಗೌರವ ಸಲಹೆಗಾರ ವಿಶ್ವನಾಥ ಶೆಣೈ ಉಪಸ್ಥಿತರಿದ್ದರು.
ಕೆಮ್ತೂರು ನಾಟಕ ಸ್ಪರ್ಧೆ ಸಂಚಾಲಕ ಕೆ.ಪ್ರಭಾಕರ ಭಂಡಾರಿ ಪ್ರಾಸ್ತಾವಿಕ ಮಾತನಾಡಿದರು. ಉಪಾಧ್ಯಕ್ಷ ಭುವನ ಪ್ರಸಾದ್ ಹೆಗ್ಡೆ ಸ್ವಾಗತಿಸಿದರು. ಕಾರ್ಯದರ್ಶಿ ಗಂಗಾಧರ ಕಿದಿಯೂರು ವಂದಿಸಿದರು. ವಿ.ಕೆ.ಯಾದವ್ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಕಲಾಮಂದಿರ ಉಡುಪಿ ಇವರಿಂದ ಪ್ರಥಮ ದಿನದ ನಾಟಕ ಪಿಲಿ ಪ್ರದರ್ಶನಗೊಂಡಿತು.

