ಮಣ್ಣು ಸಾಗಾಟದ ಟಿಪ್ಪರ್ ಲಾರಿಯೊಂದು ಕೆಎಸ್ಸಾರ್ಟಿಸಿ ಬಸ್‌ಗೆ ಢಿಕ್ಕಿ ಹೊಡೆದ ಪರಿಣಾಮ 7 ಮಂದಿ ಕಾಲೇಜು ವಿದ್ಯಾರ್ಥಿಗಳ ಸಹಿತ 18 ಮಂದಿ ಗಾಯಗೊಂಡ ಘಟನೆ ಕುಂದಾಪುರ ತಾಲೂಕಿನ ತಲ್ಲೂರು – ನೇರಳಕಟ್ಟೆ ಮುಖ್ಯ ರಸ್ತೆಯ ಶೆಟ್ರಕಟ್ಟೆಯ ತಿರುವಿನಲ್ಲಿ ಸೋಮವಾರ ಸಂಜೆ ಸಂಭವಿಸಿದೆ.
ಗಾಯಾಳುಗಳ ಪೈಕಿ ಇಬ್ಬರು ವಿದ್ಯಾರ್ಥಿನಿಯರ ಸ್ಥಿತಿ ಗಂಭೀರವಾಗಿದೆ. ಮೂವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಂದಾಪುರದ ಸರಕಾರಿ ಆಸ್ಪತ್ರೆಯಲ್ಲಿ 7 ಮಂದಿ ಚಿಕಿತ್ಸೆ ಪಡೆದಿದ್ದು, ಮೂವರು ಒಳರೋಗಿಗಳಾಗಿ ದಾಖಲಾಗಿದ್ದಾರೆ. ಕುಂದಾಪುರದ ಆದರ್ಶ ಆಸ್ಪತ್ರೆಯಲ್ಲಿ 7 ಮಂದಿ ಇದ್ದು, ಐವರು ಒಳರೋಗಿಗಳಾಗಿ, ಚಿನ್ಮಯಿ ಆಸ್ಪತ್ರೆಯಲ್ಲಿ ಒಬ್ಬರು ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜೂನಿಯರ್ ಕಾಲೇಜಿನ ವಿದ್ಯಾರ್ಥಿನಿಯರಾದ ನೇರಳಕಟ್ಟೆ ನಿವಾಸಿಗಳಾದ 16 ವರ್ಷ ಪ್ರಾಯದ ಚೈತ್ರಾ ಮತ್ತು ಅರ್ಚನಾ ಗಂಭೀರ ಸ್ಥಿತಿಯಲ್ಲಿದ್ದು, ಮಣಿಪಾಲ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಜಿ ಗ್ರಾಮ ಪಂಚಾಯತ್ ಸದಸ್ಯೆ 50 ವರ್ಷ ಪ್ರಾಯದ ಶಾರದಾ ಅವರಿಗೂ ತೀವ ಸ್ವರೂಪದ ಗಾಯಗಳಾಗಿವೆ.
ಟಿಪ್ಪರ್ ಚಾಲಕ ರಾಘವೇಂದ್ರ (40), ವಿದ್ಯಾರ್ಥಿಗಳಾದ ಧನ್ವಿತ್, ಆಶಿಶ್, ಅಭಿಲಾಶ್, ಸತ್ಯವತಿ, ಪ್ರಯಾಣಿಕರಾದ ಮಂಜುನಾಥ್, ಮಮತಾ, ಸನ್ವಿತ್, ಹರೀಶ್, ವಿದ್ಯಾರ್ಥಿನಿಯರಾದ ಸ್ಪಂದನಾ, ಅರ್ಚನಾ, ಶಾರದಾ ಪ್ರಯಾಣಿಕರಾದ ಸಾವಿತ್ರಿ, ಸುಜಾನ್ ಗಾಯಗೊಂಡ ಪ್ರಯಾಣಿಕರು.
ಕುಂದಾಪುರದಿಂದ ಅಜಿಗೆ ಹೊರಟ ಬಸ್ಸು ಶೆಟ್ರಕಟ್ಟೆ ಸಮೀಪ ಪ್ರಯಾಣಿಕರೊಬ್ಬರನ್ನು ಇಳಿಸಿ, ತುಸು ಮುಂದಕ್ಕೆ ಚಲಿಸುತ್ತಿದ್ದಂತೆ ಎದುರಿನಿಂದ ವೇಗವಾಗಿ ಬಂದ ಟಿಪ್ಪರ್ ಬಸ್ಸಿನ ಚಾಲಕನ ಬದಿಗೆ ಡಿಕ್ಕಿ ಹೊಡೆಯಿತು. ಟಿಪ್ಪರ್ ವೇಗವಾಗಿ ಬರುವುದನ್ನು ಗಮನಿಸಿ ಬಸ್ ಚಾಲಕ ಎಡಕ್ಕೆ ತಿರುಗಿಸಿದ್ದರಿಂದ ಮುಖಾಮುಖಿ ಡಿಕ್ಕಿಯಾಗುವುದು ತಪ್ಪಿದೆ. ಶಾಸಕರಾದ ಗುರುರಾಜ್ ಗಂಟಿಹೊಳೆ ಮತ್ತು ಕಿರಣ್ ಕುಮಾರ್ ಕೊಡ್ಲಿ, ಉಡುಪಿ ಎಸ್ಪಿ ಹರಿರಾಮ್ ಶಂಕರ್, ಕುಂದಾಪುರ ತಾಲೂಕು ಆರೋಗ್ಯಾಧಿಕಾರಿ ಡಾ| ಪ್ರೇಮಾನಂದ್, ಕಾಂಗ್ರೆಸ್ ಮುಖಂಡ ದಿನೇಶ್ ಹೆಗ್ಡೆ ಮೊಳಹಳ್ಳಿ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ ಮಕ್ಕಿ, ವಂಡ್ರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಶೆಟ್ಟಿ ಮತ್ತಿತರರು ಆಸತ್ರೆಗೆ ಭೇಟಿ ನೀಡಿ ಗಾಯಾಳುಗಳ ಯೋಗ ಕ್ಷೇಮ ವಿಚಾರಿಸಿದರು.
ಅಪಘಾತದಲ್ಲಿ ಹಲವರು ಸಾವನ್ನಪ್ಪಿದ್ದಾರೆ ಮತ್ತು ಅನೇಕ ಮಂದಿ ಗಾಯಗೊಂಡಿದ್ದಾರೆ ಎಂಬ ಸುಳ್ಳು ಸುದ್ದಿಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ್ದರಿಂದ , ಮಕ್ಕಳ ಪೋಷಕರು ಮತ್ತು ಸಾರ್ವಜನಿಕರು ಆತಂಕಗೊಂಡು ಆಸ್ಪತ್ರೆಗೆ ಧಾವಿಸಿದ್ದರು. ಅಸ್ಪಷ್ಟ ಮಾಹಿತಿ ಹರಡುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ. ಮಣ್ಣು ಸಾಗಾಟದ ಲಾರಿ ಮೇಲೆ ಕ್ರಮಕ್ಕೆ ಆಗ್ರಹಿಸಿದ್ದಾರೆ.

