ಶಂಕರನಾರಾಯಣ, ಏಪ್ರಿಲ್ 23: ಶಂಕರನಾರಾಯಣದ ಮದರ್ ಥೆರೆಸಾ ಮೆಮೋರಿಯಲ್ ಶಾಲೆಯ ವಿದ್ಯಾರ್ಥಿ ಪ್ರೀತಮ್ ಜಿ. ಪೂಜಾರಿ 625 ಅಂಕಗಳನ್ನು ಪಡೆದು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯ ಹಾಗೂ ಜಿಲ್ಲೆ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿ ಗಮನಾರ್ಹ ಸಾಧನೆ ಮಾಡಿದ್ದಾರೆ.
ಬಿಟ್ಕಲ್‌ಕಟ್ಟೆ ನಿವಾಸಿಗಳಾದ ಗಣಪತಿ ಪೂಜಾರಿ ಮತ್ತು ನಾಗರತ್ನಾ ದಂಪತಿಯ ಹಿರಿಯ ಪುತ್ರನಾದ ಪ್ರೀತಮ್, ಬಾಲ್ಯದಿಂದಲೇ ಓದಿನಲ್ಲಿ ಆಸಕ್ತಿ ತೋರಿಸಿ ನಿರಂತರ ಪರಿಶ್ರಮದಿಂದ ಈ ಸಾಧನೆಯನ್ನು ಮಾಡಿದ್ದಾರೆ. ತಂದೆ ಗಣಪತಿ ಶ್ರೀ ಲಕ್ಷ್ಮೀ ಎಕ್ಸ್‌ಪ್ರೆಸ್ ಬಸ್‌ನಲ್ಲಿ ಕಂಡಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ತಾಯಿ ನಾಗರತ್ನಾ ಗೃಹಿಣಿಯಾಗಿದ್ದಾರೆ.
ಎಲ್.ಕೆ.ಜಿ.ಯಿಂದಲೇ ಮದರ್ ಥೆರೆಸಾ ಮೆಮೋರಿಯಲ್ ಶಾಲೆಯಲ್ಲೇ ವಿದ್ಯಾಭ್ಯಾಸ ಮಾಡಿದ ಪ್ರೀತಮ್, ಶಿಕ್ಷಕರ ಮಾರ್ಗದರ್ಶನ ಹಾಗೂ ಪೋಷಕರ ಪ್ರೋತ್ಸಾಹದಿಂದ ಈ ಉನ್ನತ ಸಾಧನೆ ಮಾಡಲು ಸಾಧ್ಯವಾಯಿತು ಎಂದು ತಿಳಿದುಬಂದಿದೆ.
ಪ್ರೀತಮ್ ಅವರ ಈ ಸಾಧನೆಗೆ ಶಾಲಾ ಆಡಳಿತ, ಶಿಕ್ಷಕರು ಮತ್ತು ಸ್ಥಳೀಯರು ಅಭಿನಂದನೆಗಳನ್ನು ತಿಳಿಸಿದ್ದಾರೆ. ಅವರ ಸಾಧನೆ ಇತರ ವಿದ್ಯಾರ್ಥಿಗಳಿಗೆ ಮಾದರಿಯಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

