ನಂದಳಿಕೆ ಬಾಲಚಂದ್ರ ರಾವ್ ವಿಶೇಷ ಅಂಚೆಲಕೋಟೆ ಬಿಡುಗಡೆ

0
33


ವರದಿ ರಾಯಿ ರಾಜ ಕುಮಾರ

ಭಾರತೀಯ ಅಂಚೆ ಇಲಾಖೆಯ ಪುತ್ತೂರು ವಿಭಾಗದಡಿಯಲ್ಲಿ ನಂದಳಿಕೆ ಬಾಲಚಂದ್ರ ರಾವ್ ಅವರ ಮೊದಲ ವರ್ಷದ ಪುಣ್ಯಸ್ಮರಣೆಯ ಅಂಗವಾಗಿ ವಿಶೇಷ ಅಂಚೆ ಲಕೋಟೆ ಬಿಡುಗಡೆಯ ಕಾರ್ಯಕ್ರಮವನ್ನು ಮಂಗಳೂರು ಆರ್.ಎಂ.ಎಸ್. ವಿಭಾಗೀಯ ಕಛೇರಿಯಲ್ಲಿ ಆಯೋಜಿಸಲಾಯಿತು. ಸಮಾಜ ಸುಧಾರಕರಾಗಿದ್ದುಕೊಂಡು, ಕನ್ನಡ ಸಾಹಿತ್ಯ ಲೋಕದಲ್ಲಿ ಅವಿರತ ಸೇವೆಯನ್ನು ಮಾಡಿ, ತನ್ನದೇ ಛಾಪು ಮೂಡಿಸಿದ ದಿವಂಗತ ನಂದಳಿಕೆ ಬಾಲಚಂದ್ರ ರಾವ್ ಅವರ ಪ್ರಥಮ ಆಬ್ಧಿಕದ ಸಂದರ್ಭದಲ್ಲಿ ಈ ವಿಶಿಷ್ಟ ಸಂಸ್ಮರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ದಿವಂಗತರು ಸಾಧಿಸಿದ ವಿವಿಧ ಸಾಮಾಜಿಕ ಅಭಿವೃದ್ಧಿ ಹಾಗೂ ಕನ್ನಡ ಸಾಹಿತ್ಯ ಕಣ್ಮಣಿ ಕವಿ ಮುದ್ದಣ್ಣನ ನೆನಪಲ್ಲಿ ಮಾಡಿದ ಸಾರಸ್ವತ ಸೇವೆಯ ನೆನಪಿನಲ್ಲಿ ವಿಶೇಷ ಅಂಚೆ ಲಕೋಟೆಯನ್ನು ಅವರ ಶ್ರೀಮತಿ ವಿಜಯಲಕ್ಷ್ಮಿಯವರ ಪ್ರಾಯೋಜಕತ್ವದಲ್ಲಿ ಪುತ್ತೂರು ಅಂಚೆ ವಿಭಾಗದ ಸಹಯೋಗದೊಂದಿಗೆ ಬಿಡುಗಡೆಗೊಳಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾ. ಬಿ .ಎ. ವಿವೇಕ್ ರೈ, ಕನ್ನಡ ಸಾಹಿತ್ಯ ತಜ್ನ ಹಾಗೂ ಸಂಶೋಧಕರು, ಮಾಜಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಹರಿಕೃಷ್ಣ ಪುನರೂರು ಹಾಗೂ ಪ್ರೊ.ಪ್ರಭಾಕರ ಜೋಶಿ, ಭಾಗವಹಿಸಿದ್ದರು. ಮುಖ್ಯ ಅತಿಥಿಗಳು ದಿವಂಗತರೊಂದಿಗೆ ಇದ್ದಂತಹ ಅವರವರ ವೈಯ್ಯಕ್ತಿಕ ನಂಟಿನ ವಿವರಣೆಯನ್ನು ತಿಳಿಸಿ, ಸ್ಮರಣಾಂಜಲಿಯನ್ನು ಸಮರ್ಪಿಸಿದರು.
ಕಾರ್ಯಕ್ರಮದಲ್ಲಿ ಆತಿಥಿಯಾಗಿ ಮಂಗಳೂರು ಆರ್.ಎಂ.ಎಸ್ (ಕ್ಯೂ) ವಿಭಾಗದ ಸಹಾಯಕ ಅಧೀಕ್ಷಕರಾದ ಮೆಲ್ವಿನ್ ಅರುಣ್ ಲೋಬೋ, ಅಧ್ಯಕ್ಷರಾಗಿ ಪುತ್ತೂರು ವಿಭಾಗೀಯ ಸಹಾಯಕ ಅಂಚೆ ಅಧೀಕ್ಷಕರಾದ ಚಂದ್ರ ನಾಯ್ಕ ಎಂ. ಭಾಗವಹಿಸಿ, ಫಿಲಾಟೆಲಿಯ ಮಹತ್ವವನ್ನು ಸಭಾಸದರಿಗೆ ವಿವರಿಸಿದರು.
ದಿವಂಗತರ ಪುತ್ರಿ ಸೌಜನ್ಯ ರಾವ್ ಇವರ ಪ್ರಾರ್ಥನೆಯೊಂದಿಗೆ ಉದ್ಘಾಟನೆಗೊಂಡ ಕಾರ್ಯಕ್ರಮವು, ಉದಯೇಶ್ ಕೆದಿಲಾಯ, ಕಾರ್ಯಾಲಯ ಸಹಾಯಕರು ಪುತ್ತೂರು ಅಂಚೆ ವಿಭಾಗ ಇವರ ನಿರೂಪಣೆಯೊಂದಿಗೆ ಮುಂದುವರೆದು ವಿಜಯಲಕ್ಷ್ಮಿಯವರ ಧನ್ಯವಾದ ಸಮರ್ಪಣೆಯೊಂದಿಗೆ ಕೊನೆಗೊಂಡಿತು. ಈ ಕಾರ್ಯಕ್ರಮದಲ್ಲಿ ಮಂಗಳೂರು ಪ್ರಧಾನ ಅಂಚೆ ಕಛೇರಿಯ ಸಹಾಯಕ ಅಂಚೆ ಪಾಲಕರು, ಪುತ್ತೂರು ವಿಭಾಗದ ನೌಕರರು, ಆರ್ ಎಂ ಎಸ್ ನೌಕರರು, ದಿವಂಗತರ ಬಂಧುಗಳು ಭಾಗವಹಿಸಿ ಕಾರ್ಯಕ್ರಮವನ್ನು ಚಂದಗಾಣಿಸಿದರು.
.

LEAVE A REPLY

Please enter your comment!
Please enter your name here