ಬೆಂಗಳೂರು : ಬಿಡುಗಡೆಗೆ ಸಜ್ಜಾಗಿರುವ ‘ಬಾಸ್’ ಸಿನಿಮಾಗೆ ಹೊಸ ಕಾನೂನು ತೊಡಕು ಎದುರಾಗಿದೆ. ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ ದರ್ಶನ್ ಅವರು ಚಿತ್ರದ ಬಿಡುಗಡೆಗೆ ತಡೆ ಕೋರಿ ಹೈಕೋರ್ಟ್ ಮೆಟ್ಟಿಲೇರಿರುವುದು ಚಿತ್ರತಂಡದಲ್ಲಿ ಆತಂಕ ಮೂಡಿಸಿದೆ.
‘ಬಾಸ್’ ಸಿನಿಮಾದ ಕಥೆ ರೇಣುಕಾಸ್ವಾಮಿ ಕೊಲೆ ಪ್ರಕರಣ ಆಧರಿಸಿದೆ ಎಂಬ ಅನುಮಾನ ವ್ಯಕ್ತಪಡಿಸಿ, ಚಿತ್ರದ ಬಿಡುಗಡೆಗೆ ವಿರೋಧ ವ್ಯಕ್ತಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ವಿಜಯಲಕ್ಷ್ಮೀ ದರ್ಶನ್ ಅವರು ನ್ಯಾಯಾಲಯದ ಮೊರೆ ಹೋಗಿದ್ದಾರೆ ಎನ್ನಲಾಗಿದೆ.
ಈ ಮೊದಲು ಇದೇ ವಿಚಾರವಾಗಿ ಸೆಷನ್ಸ್ ಕೋರ್ಟ್‌ನಲ್ಲಿ ಸಲ್ಲಿಸಲಾಗಿದ್ದ ಅರ್ಜಿ ವಜಾಗೊಂಡಿದ್ದು, ಚಿತ್ರತಂಡಕ್ಕೆ ನಿರಾಳತೆ ತಂದಿತ್ತು. ಆದರೆ ಇದೀಗ ಹೈಕೋರ್ಟ್‌ನಲ್ಲಿ ಹೊಸ ಅರ್ಜಿ ಸಲ್ಲಿಕೆಯಾಗಿರುವುದರಿಂದ ಸಿನಿಮಾ ಬಿಡುಗಡೆ ಬಗ್ಗೆ ಅನಿಶ್ಚಿತತೆ ಎದುರಾಗಿದೆ.
ಈ ಬೆಳವಣಿಗೆಯ ಕುರಿತು ಪ್ರತಿಕ್ರಿಯಿಸಿದ ಚಿತ್ರದ ನಿರ್ದೇಶಕ ಲವ, “ಸಿನಿಮಾ ಕುರಿತು ಹಲವು ತಪ್ಪು ಕಲ್ಪನೆಗಳು ಹರಡುತ್ತಿವೆ. ನಮ್ಮ ಚಿತ್ರವನ್ನು ವಿವಾದಕ್ಕೆ ಎಳೆಯಲಾಗುತ್ತಿದೆ. ಇದರಿಂದ ಬೇಸರವಾಗಿದೆ” ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಚಿತ್ರದ ಕಥೆ ಯಾವುದೇ ವ್ಯಕ್ತಿ ಅಥವಾ ಘಟನೆಯನ್ನು ನೇರವಾಗಿ ಆಧರಿಸಿಲ್ಲ ಎಂದು ಚಿತ್ರತಂಡ ಸ್ಪಷ್ಟನೆ ನೀಡಿದೆಯಾದರೂ, ಕಾನೂನು ಹೋರಾಟ ಮುಂದುವರಿದಿರುವುದರಿಂದ ‘ಬಾಸ್’ ಚಿತ್ರದ ಬಿಡುಗಡೆ ಕುರಿತ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.

