ಹುಬ್ಬಳ್ಳಿ: ಶಿಕ್ಷಣ ಸಂಸ್ಥೆಯೊಂದು ತಮ್ಮ ಕಾಲೇಜು ಕಟ್ಟಡಕ್ಕೆ ನೇಹಾ ಹೆಸರಿಡುವ ಅಗತ್ಯವಿಲ್ಲ. ಅಲ್ಲಿನ ಶೌಚಾಲಯಕ್ಕೆ ಹಂತಕ ಫಯಾಜ್‌ನ ಹೆಸರಿಡಲಿ ಎಂದು ಹಿಂದೂ ವಕೀಲರ ವೇದಿಕೆ ಆಗ್ರಹಿಸಿದೆ. ಹತ್ಯೆಯಾದ ನೇಹಾಳ ನಿವಾಸಕ್ಕೆ ಭೇಟಿಕೊಟ್ಟು, ಅವಳ ತಂದೆ-ತಾಯಿಗೆ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ವೇದಿಕೆಯ ಸಂಚಾಲಕ ಅಶೋಕ ಅಣವೇಕರ ಮಾತನಾಡಿ, “ಯಾರು ಕೂಡ ಹಂತಕನ ಪರ ವಕಾಲತ್ತು ವಹಿಸಬಾರದು. ಮೃತ ನೇಹಾಳ ಕುಟುಂಬದವರಿಗೂ ಅನಾಮಿಕರಿಂದ ಜೀವ ಬೆದರಿಕೆ ಇದೆ. ಕಾರಣ ಪೊಲೀಸ್ ಇಲಾಖೆ ನೇಹಾ ಕುಟುಂಬಸ್ಥರಿಗೆ ಸೂಕ್ತ ರಕ್ಷಣೆ ನೀಡಬೇಕು’’ ಎಂದರು.
“ನೇಹಾ ಕೊಲೆ ಪ್ರಕರಣದ ತನಿಖೆಯಲ್ಲಿ ಸರ್ಕಾರ ನಿರ್ಲಕ್ಷ್ಯ ವಹಿಸಿದೆ. ಹತ್ಯೆಯಾದ ಆರು ದಿನಗಳ ನಂತರ ಸ್ಥಳ ಮಹಜರು ಮಾಡಲಾಗಿದೆ. ಸಾಕ್ಷ್ಯ ನಾಶವಾದ ಬಳಿಕ ಮಹಜರು ಮಾಡಿದರೆ ಏನು ಉಪಯೋಗ. ಈಗಲಾದರೂ ಸಮರ್ಪಕ ತನಿಖೆ ನಡೆಸಬೇಕು’’ ಎಂದು ಆಗ್ರಹಿಸಿದರು.