
ಏನಿದ ಘಟನೆ..?
ರಾತ್ರಿ ಗಾಢ ನಿದ್ರೆಯಲ್ಲಿದ್ದ ಅಣ್ಣ-ತಂಗಿಯ ಮೈಮೇಲೆ ಏನೋ ಹರಿದಾಡಿದ ಅನುಭವವಾಗಿದ್ದು, ಇಲಿ ಇರಬಹುದು ಎಂದು ಭಾವಿಸಿ ನಿರ್ಲಕ್ಷಿಸಿ ಮತ್ತೆ ನಿದ್ರೆಗೆ ಜಾರಿದ್ದರು. ಆದರೆ ಬೆಳಗ್ಗೆ ಎದ್ದು ನೋಡಿದಾಗ ತಲೆದಿಂಬಿನ ಕೆಳಗೆ ನಾಗರಹಾವು ಸುರುಳಿ ಸುತ್ತಿಕೊಂಡು ಮಲಗಿರುವುದನ್ನು ಕಂಡು ಇಡೀ ಕುಟುಂಬ ಬೆಚ್ಚಿಬಿದ್ದ ಘಟನೆ ಬೆಂಗಳೂರು ನಗರದ ಬಾಗಲಗುಂಟೆಯ ಭೈರವೇಶ್ವರ ನಗರದಲ್ಲಿ ನಡೆದಿದೆ.
ಮನೆಯ ಕಿಟಕಿಯ ಮೂಲಕ ಒಳನುಗ್ಗಿದ ನಾಗರಹಾವು ಮಲಗಿದ್ದ ಅಣ್ಣ-ತಂಗಿಯ ಹಾಸಿಗೆಯನ್ನು ಸೇರಿತ್ತು. ರಾತ್ರಿ ಪೂರ್ತಿ ಗಾಢ ನಿದ್ರೆಯಲ್ಲಿದ್ದ ಇಬ್ಬರ ಮೈಮೇಲೂ ಈ ವಿಷಪೂರಿತ ಹಾವು ಹರಿದಾಡಿದೆ ಎನ್ನಲಾಗಿದೆ. ಆದರೆ ಅದೃಷ್ಟವಶಾತ್ ಇಬ್ಬರಿಗೂ ಯಾವುದೇ ಅಪಾಯ ಸಂಭವಿಸಿಲ್ಲ.
ಬೆಳಗ್ಗೆ ತಲೆದಿಂಬಿನ ಕೆಳಗೆ ನಾಗರಹಾವು ಇರುವುದನ್ನು ಗಮನಿಸಿದ ಕುಟುಂಬದವರು ತಕ್ಷಣವೇ ಉರಗ ರಕ್ಷಕ ನಾಗೇಂದ್ರ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ನಾಗೇಂದ್ರ ಅವರು, ನಾಗರಹಾವನ್ನು ಯಾವುದೇ ಅಪಾಯವಿಲ್ಲದೆ ಸುರಕ್ಷಿತವಾಗಿ ಸೆರೆಹಿಡಿದಿದ್ದಾರೆ.
ಬಳಿಕ ಹಾವನ್ನು ಹೆಸರಘಟ್ಟದ ಮೀಸಲು ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ. ರಾತ್ರಿ ವೇಳೆ ಮನೆಯೊಳಗೆ ನುಗ್ಗಿದ್ದ ವಿಷಪೂರಿತ ನಾಗರಹಾವು ಅಣ್ಣ-ತಂಗಿಯ ಹಾಸಿಗೆಯಲ್ಲೇ ಇದ್ದ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
