ಬೆಳ್ತಂಗಡಿಯ ಎರಡು ಪಂಚಾಯತ್‌ಗಳಿಗೆ ಲೋಕಾಯುಕ್ತ ಎಂಟ್ರಿ ; ಕಡತಗಳ ಪರಿಶೀಲನೆ

0
12

ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು ಏಳು ಗ್ರಾಮ ಪಂಚಾಯತ್‌ಗಳಿಗೆ ಲೋಕಾಯುಕ್ತ ಅಧಿಕಾರಿಗಳ ತಂಡಗಳು ಏಕಕಾಲದಲ್ಲಿ ದಿಢೀರ್ ಭೇಟಿ ನೀಡಿ ಕಡತಗಳ ಪರಿಶೀಲನೆ ನಡೆಸಿದ ಘಟನೆ ಸೆ. 8ರಂದು ನಡೆದಿದೆ. ಸಾರ್ವಜನಿಕರಿಂದ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ದೂರುಗಳು ಬಂದ ಹಿನ್ನೆಲೆಯಲ್ಲಿ ಈ ಪರಿಶೀಲನೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.

ಬೆಳ್ತಂಗಡಿ ತಾಲೂಕಿನ ಕುವೆಟ್ಟು ಹಾಗೂ ಮಡಂತ್ಯಾರು ಗ್ರಾಮ ಪಂಚಾಯತ್‌ಗಳಿಗೆ ಲೋಕಾಯುಕ್ತ ಅಧಿಕಾರಿಗಳು ಬೆಳಗ್ಗೆ ಸುಮಾರು 10 ಗಂಟೆಗೆ ಭೇಟಿ ನೀಡಿದರು. ಪಂಚಾಯತ್ ಕಚೇರಿಯಲ್ಲಿದ್ದ ವಿವಿಧ ಕಡತಗಳು ಹಾಗೂ ದಾಖಲೆಗಳನ್ನು ಪರಿಶೀಲಿಸಿದ ಅಧಿಕಾರಿಗಳು, ಪಂಚಾಯತ್ ಅಧಿಕಾರಿಗಳು ಮತ್ತು ಸಿಬ್ಬಂದಿಯಿಂದ ಅಗತ್ಯ ಮಾಹಿತಿಯನ್ನು ಪಡೆದುಕೊಂಡರು.

ಲೋಕಾಯುಕ್ತ ಕೇಂದ್ರ ಕಚೇರಿಗೆ ಸಾರ್ವಜನಿಕರಿಂದ ಬಂದಿರುವ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ದೂರುಗಳ ತನಿಖೆಯ ಮುಂದುವರಿದ ಭಾಗವಾಗಿ ಈ ದಿಢೀರ್ ಪರಿಶೀಲನೆ ನಡೆಸಲಾಗಿದೆ ಎನ್ನಲಾಗಿದೆ. ಪಂಚಾಯತ್ ವ್ಯಾಪ್ತಿಯಲ್ಲಿ ಕೈಗೊಂಡಿರುವ ವಿವಿಧ ಕಾಮಗಾರಿಗಳು, ಆಡಳಿತಾತ್ಮಕ ದಾಖಲೆಗಳು, ಕಡತಗಳ ನಿರ್ವಹಣೆ ಸೇರಿದಂತೆ ಹಲವು ವಿಚಾರಗಳ ಕುರಿತು ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಉಡುಪಿ ಜಿಲ್ಲೆಯ ಲೋಕಾಯುಕ್ತ ಇನ್ಸ್‌ಪೆಕ್ಟರ್ ಮಂಜುನಾಥ್ ಶಂಕರಹಳ್ಳಿ ನೇತೃತ್ವದಲ್ಲಿ ರಾಘವೇಂದ್ರ ಸಾಲಿಗ್ರಾಮ, ಆದರ್ಶ್, ಅರುಣ್ ಕುಮಾರ್, ಸೂರಜ್ ಕಾವು ಸೇರಿದಂತೆ ಒಟ್ಟು ಎಂಟು ಮಂದಿ ಅಧಿಕಾರಿಗಳ ತಂಡ ಕುವೆಟ್ಟು ಮತ್ತು ಮಡಂತ್ಯಾರು ಗ್ರಾ.ಪಂ.ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ. ಪರಿಶೀಲನಾ ಕಾರ್ಯ ಸಂಜೆವರೆಗೂ ಮುಂದುವರಿಯುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ದಕ್ಷಿಣ ಕನ್ನಡದ ಏಳು ಪಂಚಾಯತ್‌ಗಳಲ್ಲಿ ಪರಿಶೀಲನೆ

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಪೆರ್ಮುದೆ ಗ್ರಾಮ ಪಂಚಾಯತ್, ಬಂಟ್ವಾಳ ತಾಲೂಕಿನ ವುದು, ಮಾಣಿ, ಗೊಳ್ತಮಜಲು ಹಾಗೂ ಪಾಣೆಮಂಗಳೂರು ಗ್ರಾಮ ಪಂಚಾಯತ್‌ಗಳು ಮತ್ತು ಬೆಳ್ತಂಗಡಿ ತಾಲೂಕಿನ ಕುವೆಟ್ಟು ಹಾಗೂ ಮಡಂತ್ಯಾರು ಗ್ರಾಮ ಪಂಚಾಯತ್‌ಗಳು ಸೇರಿದಂತೆ ಒಟ್ಟು ಏಳು ಗ್ರಾಮ ಪಂಚಾಯತ್‌ಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಕಾರವಾರ, ಉಡುಪಿ ಹಾಗೂ ಮಂಗಳೂರು ವಿಭಾಗಗಳ ಲೋಕಾಯುಕ್ತ ಅಧಿಕಾರಿಗಳ ತಂಡಗಳು ಏಕಕಾಲದಲ್ಲಿ ವಿವಿಧ ಪಂಚಾಯತ್‌ಗಳಿಗೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸುತ್ತಿರುವುದು ಸ್ಥಳೀಯ ಆಡಳಿತ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

ಪರಿಶೀಲನೆ ಪೂರ್ಣಗೊಂಡ ಬಳಿಕ ಅಧಿಕಾರಿಗಳ ವರದಿ ಹಾಗೂ ತನಿಖೆಯ ಆಧಾರದ ಮೇಲೆ ಮುಂದಿನ ಕ್ರಮಗಳ ಬಗ್ಗೆ ಸ್ಪಷ್ಟತೆ ದೊರೆಯುವ ನಿರೀಕ್ಷೆಯಿದೆ.