ನವದೆಹಲಿ : ದೇಶದ ಗೃಹಬಳಕೆ ಎಲ್‌ಪಿಜಿ ಗ್ರಾಹಕರಿಗೆ ಕೇಂದ್ರ ಸರ್ಕಾರ ಮಹತ್ವದ ಸಡಿಲಿಕೆ ಘೋಷಿಸಿದ್ದು, ಇನ್ನು ಮುಂದೆ 25 ದಿನಗಳಿಗೊಮ್ಮೆ ಎಲ್‌ಪಿಜಿ ಸಿಲಿಂಡರ್ ರಿಫಿಲ್ ಬುಕ್ ಮಾಡಲು ಅವಕಾಶ ನೀಡಲಾಗಿದೆ. ಈ ನಿಯಮ ನಗರ ಮತ್ತು ಗ್ರಾಮೀಣ ಪ್ರದೇಶಗಳ ಎಲ್ಲ ಗೃಹಬಳಕೆ ಎಲ್‌ಪಿಜಿ ಗ್ರಾಹಕರಿಗೂ ಅನ್ವಯವಾಗಲಿದೆ ಎಂದು ಪೆಟ್ರೋಲಿಯಂ, ನೈಸರ್ಗಿಕ ಅನಿಲ ಮತ್ತು ಪ್ರವಾಸೋದ್ಯಮ ಖಾತೆಯ ರಾಜ್ಯ ಸಚಿವ ಸುರೇಶ್ ಗೋಪಿ ತಿಳಿಸಿದ್ದಾರೆ.
ಈ ಹಿಂದೆ ಗ್ರಾಮೀಣ ಪ್ರದೇಶಗಳಲ್ಲಿ ಎಲ್‌ಪಿಜಿ ಸಿಲಿಂಡರ್ ರಿಫಿಲ್ ಬುಕ್ಕಿಂಗ್ ನಡುವಿನ ಅವಧಿಯನ್ನು 45 ದಿನಗಳಿಗೆ ನಿಗದಿಪಡಿಸಲಾಗಿತ್ತು. ಇದೀಗ ಅದನ್ನು 25 ದಿನಗಳಿಗೆ ಇಳಿಸಲಾಗಿದ್ದು, ಪರಿಷ್ಕೃತ ನಿಯಮ ತಕ್ಷಣದಿಂದಲೇ ಜಾರಿಗೆ ಬರಲಿದೆ.
ಪೂರೈಕೆ ಸುಧಾರಣೆ ಹಿನ್ನೆಲೆ ನಿರ್ಬಂಧ ಸಡಿಲಿಕೆ
ಮಧ್ಯಪ್ರಾಚ್ಯದಲ್ಲಿ ಉಂಟಾಗಿದ್ದ ಸಂಘರ್ಷದ ಹಿನ್ನೆಲೆಯಲ್ಲಿ ಎಲ್‌ಪಿಜಿ ಪೂರೈಕೆಯ ಮೇಲೆ ಒತ್ತಡ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಸಿಲಿಂಡರ್ ರಿಫಿಲ್ ಬುಕ್ಕಿಂಗ್ ನಡುವಿನ ಅವಧಿಯನ್ನು ಹೆಚ್ಚಿಸಲಾಗಿತ್ತು. ಇದರಿಂದ ಗ್ರಾಹಕರು ಹಿಂದಿನ ಅವಧಿಗಿಂತ ಹೆಚ್ಚಿನ ದಿನ ಕಾಯಬೇಕಾದ ಪರಿಸ್ಥಿತಿ ಎದುರಾಗಿತ್ತು.
ಆದರೆ ಇದೀಗ ದೇಶದಲ್ಲಿ ಎಲ್‌ಪಿಜಿ ಪೂರೈಕೆ ಪರಿಸ್ಥಿತಿ ಸುಧಾರಿಸಿದ್ದು, ರಿಫಿಲ್‌ಗಾಗಿ ಬಾಕಿ ಉಳಿದಿರುವ ಬೇಡಿಕೆಯ ಪ್ರಮಾಣವೂ ಗಣನೀಯವಾಗಿ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಹಿಂದಿನ ನಿರ್ಬಂಧವನ್ನು ಸಡಿಲಿಸಿ, 25 ದಿನಗಳ ಅಂತರದಲ್ಲಿ ಸಿಲಿಂಡರ್ ಬುಕ್ ಮಾಡಲು ಅವಕಾಶ ಕಲ್ಪಿಸಿದೆ.
ನಗರ–ಗ್ರಾಮೀಣ ಭೇದವಿಲ್ಲ
ಹೊಸ ನಿಯಮದ ಪ್ರಕಾರ ನಗರ ಹಾಗೂ ಗ್ರಾಮೀಣ ಪ್ರದೇಶಗಳ ಗ್ರಾಹಕರು 25 ದಿನಗಳ ಅಂತರದಲ್ಲಿ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ರಿಫಿಲ್ ಬುಕ್ ಮಾಡಬಹುದು. ಈ ಬದಲಾವಣೆಯನ್ನು ತಕ್ಷಣದಿಂದಲೇ ಜಾರಿಗೆ ತರಲು ಕೇಂದ್ರ ಪೆಟ್ರೋಲಿಯಂ ಸಚಿವಾಲಯವು ತೈಲ ಮಾರುಕಟ್ಟೆ ಕಂಪನಿಗಳಿಗೆ (OMCs) ಸೂಚನೆ ನೀಡಿದೆ.
ಈ ಕುರಿತು ಸಚಿವ ಸುರೇಶ್ ಗೋಪಿ ಅವರು ಪೆಟ್ರೋಲಿಯಂ ಸಚಿವಾಲಯವು OMCಗಳಿಗೆ ಕಳುಹಿಸಿರುವ ಪತ್ರದ ಪ್ರತಿಯನ್ನೂ ಹಂಚಿಕೊಂಡಿದ್ದಾರೆ.
ಹೊಸ ಕ್ರಮದಿಂದ ಸಿಲಿಂಡರ್ ಪೂರೈಕೆಯಲ್ಲಿ ಎದುರಾಗುತ್ತಿದ್ದ ವಿಳಂಬ ಕಡಿಮೆಯಾಗುವ ಜೊತೆಗೆ, ನಿಯಮಿತವಾಗಿ ಎಲ್‌ಪಿಜಿ ಬಳಸುವ ಕುಟುಂಬಗಳಿಗೆ ಹೆಚ್ಚಿನ ಅನುಕೂಲವಾಗುವ ನಿರೀಕ್ಷೆಯಿದೆ.

