
ಮೂಡುಬಿದಿರೆ: “ಸಮ್ಮೇಳನಗಳು ಕೇವಲ ಕಾರ್ಯಕ್ರಮಗಳಲ್ಲ; ಅವು ಕಲಿಕೆ, ವಿಚಾರ ವಿನಿಮಯ ಹಾಗೂ ಜ್ಞಾನ ಹಂಚಿಕೆಯ ಶೈಕ್ಷಣಿಕ ವೇದಿಕೆಗಳಾಗಿವೆ” ಎಂದು ಶ್ರೀನಿವಾಸ ವಿಶ್ವವಿದ್ಯಾಲಯದ ಸಂಶೋಧನಾ ಪ್ರಾಧ್ಯಾಪಕ ಡಾ. ಶ್ರೀಪತಿ ಕಲ್ಲೂರಾಯ ಪಿ. ಹೇಳಿದರು.
ಶ್ರೀ ಮಹಾವೀರ ಕಾಲೇಜು, ಮೂಡುಬಿದಿರೆಯ ಅರ್ಥಶಾಸ್ತ್ರ ವಿಭಾಗ ಹಾಗೂ ಮಂಗಳೂರು ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಸಂಘದ ವತಿಯಿಂದ “ಹಣಕಾಸಿನ ಒಳಗೊಳ್ಳುವಿಕೆ, ಕೌಶಲ್ಯ ಭಾರತ ಮತ್ತು ಉದ್ಯಮಶೀಲತೆ: ಸಮಾವೇಶಿತ ಬೆಳವಣಿಗೆ ಹಾಗೂ ಸುಸ್ಥಿರ ಅಭಿವೃದ್ಧಿಯ ಮಾರ್ಗಗಳು” ಎಂಬ ವಿಷಯದ ಕುರಿತು ಆಯೋಜಿಸಿದ್ದ ಒಂದು ದಿನದ ಬಹುಶಿಸ್ತೀಯ ರಾಷ್ಟ್ರೀಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಸಮಾರೋಪ ಭಾಷಣ ಮಾಡಿದರು.
ಶಿಕ್ಷಕರು, ಸಂಶೋಧಕರು ಹಾಗೂ ವಿದ್ಯಾರ್ಥಿಗಳು ಒಂದೇ ವೇದಿಕೆಯಲ್ಲಿ ಸೇರಿ ತಮ್ಮ ಜ್ಞಾನ, ಸಂಶೋಧನಾ ವಿಚಾರಗಳು ಮತ್ತು ಆಲೋಚನೆಗಳನ್ನು ಹಂಚಿಕೊಳ್ಳುವುದು ಶೈಕ್ಷಣಿಕವಾಗಿ ಮಹತ್ವದ್ದಾಗಿದೆ. ಸಮ್ಮೇಳನದಲ್ಲಿ ಒಟ್ಟು 66 ಸಂಶೋಧನಾ ಪ್ರಬಂಧಗಳು ಮಂಡನೆಯಾಗಿದ್ದು, ಅವುಗಳಲ್ಲಿ 47 ಪ್ರಬಂಧಗಳನ್ನು ವಿದ್ಯಾರ್ಥಿಗಳು ಮಂಡಿಸಿರುವುದು ವಿಶೇಷ ಹಾಗೂ ಸಂತಸದ ಸಂಗತಿಯಾಗಿದೆ ಎಂದು ಡಾ. ಕಲ್ಲೂರಾಯ ಹೇಳಿದರು.
ಸುಸ್ಥಿರ ಅಭಿವೃದ್ಧಿ, ಹಣಕಾಸಿನ ಒಳಗೊಳ್ಳುವಿಕೆ, ಕೌಶಲ್ಯಾಭಿವೃದ್ಧಿ ಹಾಗೂ ಉದ್ಯಮಶೀಲತೆ ಮುಂತಾದ ವಿಷಯಗಳು ಇಂದಿನ ಕಾಲಘಟ್ಟದಲ್ಲಿ ಅತ್ಯಂತ ಪ್ರಸ್ತುತವಾಗಿವೆ. ಆಧುನಿಕ ಕಾಲದಲ್ಲಿ ಜ್ಞಾನ ಮತ್ತು ಕೌಶಲ್ಯ ಎರಡೂ ಅಗತ್ಯ. ಕೌಶಲ್ಯವು ಉದ್ಯಮಶೀಲತೆ ಹಾಗೂ ವ್ಯವಹಾರಕ್ಕೆ ನೆರವಾದರೆ, ಜ್ಞಾನವು ಉತ್ತಮ ನಾಗರಿಕರಾಗಿ ರೂಪುಗೊಳ್ಳಲು ಸಹಕಾರಿಯಾಗಿದೆ ಎಂದು ಅವರು ತಿಳಿಸಿದರು.
ಸಮ್ಮೇಳನದ ಗೌರವ ಅತಿಥಿಯಾಗಿ ಮಾತನಾಡಿದ ಎಂಜಿಎಂ ಕಾಲೇಜು, ಉಡುಪಿಯ ಮಾಜಿ ಸಹಪ್ರಾಧ್ಯಾಪಕ ಪ್ರೊ. ಎಂ. ಚನ್ನಪೂಜಾರಿ, ಮಂಗಳೂರು ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಸಂಘವು ವಿದ್ಯಾರ್ಥಿಗಳಲ್ಲಿ ಸಂಶೋಧನಾ ಆಸಕ್ತಿಯನ್ನು ಬೆಳೆಸಲು ಹಾಗೂ ಉತ್ತೇಜಿಸಲು ಬದ್ಧವಾಗಿದೆ ಎಂದರು.
“ಇಂದಿನ ವಿದ್ಯಾರ್ಥಿಗಳೇ ನಾಳೆಯ ಸಂಪನ್ಮೂಲ ವ್ಯಕ್ತಿಗಳು. ವಿದ್ಯಾರ್ಥಿಗಳು ಸಂಶೋಧನೆ, ವಿಚಾರ ಮಂಡನೆ ಹಾಗೂ ಶೈಕ್ಷಣಿಕ ಚರ್ಚೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಅವರಲ್ಲಿರುವ ಸಂಶೋಧನಾ ಆಸಕ್ತಿಯನ್ನು ಬೆಳೆಸಲು ಸೂಕ್ತ ವೇದಿಕೆ ಹಾಗೂ ಪ್ರೋತ್ಸಾಹ ನೀಡುವುದು ಅಗತ್ಯ” ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಮಹಾವೀರ ಕಾಲೇಜಿನ ಪ್ರಾಂಶುಪಾಲ ಡಾ. ರಾಧಾಕೃಷ್ಣ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ನಡೆದ ಉತ್ತಮ ಶೈಕ್ಷಣಿಕ ಸಮ್ಮೇಳನಗಳಲ್ಲಿ ಇದೂ ಒಂದಾಗಿದೆ ಎಂದರು. ಸಮ್ಮೇಳನದ ಯಶಸ್ಸಿನ ಹಿಂದೆ ಎಲ್ಲರ ಸಲಹೆ, ಸೂಚನೆ, ಸಹಕಾರ ಹಾಗೂ ಪ್ರಯತ್ನವಿದೆ. ಪ್ರತಿವರ್ಷವೂ ಇಂತಹ ಸಮ್ಮೇಳನಗಳು ನಡೆಯಬೇಕು. ಇವುಗಳ ಮೂಲಕ ಚಿಂತನ-ಮಂಥನ, ವಿಚಾರ ವಿನಿಮಯ ಹಾಗೂ ಜ್ಞಾನ ಹಂಚಿಕೆ ನಿರಂತರವಾಗಿ ನಡೆಯಬೇಕು ಎಂದು ಹೇಳಿದರು.
ವಿದ್ಯಾರ್ಥಿಗಳ ಉತ್ತಮ ಪ್ರಬಂಧಗಳಿಗೆ ಪ್ರಶಸ್ತಿ
ಸಮ್ಮೇಳನದ ಅಂಗವಾಗಿ ನಡೆದ ವಿದ್ಯಾರ್ಥಿಗಳ ಪ್ರಬಂಧ ಮಂಡನಾ ಸ್ಪರ್ಧೆಯಲ್ಲಿ ಒಟ್ಟು 47 ವಿದ್ಯಾರ್ಥಿ ಪ್ರಬಂಧಗಳು ಮಂಡನೆಯಾದವು. ಉತ್ತಮ ಪ್ರಬಂಧಗಳಿಗೆ ಅತ್ಯುತ್ತಮ ಪ್ರಬಂಧ ಪ್ರಶಸ್ತಿ ನೀಡಲಾಯಿತು.
ಪೂರ್ಣಪ್ರಜ್ಞ ಕಾಲೇಜು ಮತ್ತು ಪಿಜಿ ಸೆಂಟರ್, ಉಡುಪಿಯ ವಿಗ್ನೇಶ್ ಕಿರಣ್ ಕಾಮತ್ ಹಾಗೂ ಸೇಂಟ್ ಆಗ್ನೆಸ್ ಕಾಲೇಜು, ಮಂಗಳೂರಿನ ಆಯಿಷಾ ಜುಹಾ ಮತ್ತು ಎಂ. ಮಹಮ್ಮದ್ ಸಾಹೀರ್ ಅವರು ಅತ್ಯುತ್ತಮ ಪ್ರಬಂಧ ಪ್ರಶಸ್ತಿಗೆ ಆಯ್ಕೆಯಾದರು.
ಸಮಾಧಾನಕರ ಬಹುಮಾನವನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮುನಿಯಾಲಿನ ಶುಭಾ ಮತ್ತು ಶಶಿ ಅವರು ಪಡೆದರು. ಪ್ರಶಸ್ತಿ ವಿಜೇತರ ಪಟ್ಟಿಯನ್ನು ಸಮ್ಮೇಳನದ ಸಂಯೋಜಕ ಡಾ. ಮಹೇಶ್ ಕುಮಾರ್ ವಾಚಿಸಿದರು.
ಸಮ್ಮೇಳನದಲ್ಲಿ 200ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿ ವಿಚಾರ ವಿನಿಮಯ ನಡೆಸಿದರು. ಮಂಗಳೂರು ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಸ್ನಾತಕೋತ್ತರ ವಿಭಾಗದ ಅಧ್ಯಕ್ಷ ಡಾ. ಜಗದೀಶ್ ಟಿ. ಹಾಗೂ ಮಂಗಳೂರು ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಸಂಘದ ಅಧ್ಯಕ್ಷೆ ಪ್ರೊ. ಶ್ರೀಲತಾ ಕಮಿಲಾ ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದರು.
ಸಮ್ಮೇಳನದ ಸಂಯೋಜಕ ಅಜಿಲ್ ಮೆಲ್ವಿನ್ ಕ್ಯಾಸ್ಟೆಲಿನೊ ಸ್ವಾಗತಿಸಿದರು. ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ ಗೀತಾ ಕುಮಾರಿ ವಂದಿಸಿದರು. ಸಮ್ಮೇಳನದ ಸಂಘಟನಾ ಸಮಿತಿಯ ಸದಸ್ಯೆ ಶ್ರೀಗೌರಿ ಕೆ. ಕಾರ್ಯಕ್ರಮ ನಿರೂಪಿಸಿದರು.
ಮಂಗಳೂರು ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು, ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
