‘ಹಣ ಡಬಲ್’ ಮಾಡುವ ಆಮಿಷ : ಕಾರ್ಕಳದಲ್ಲಿ ₹32.68 ಲಕ್ಷ ವಂಚನೆ

0
15

ಕಾರ್ಕಳ : ಫೇಸ್‌ಬುಕ್‌ನಲ್ಲಿ ಬಂದ ಷೇರು ಹೂಡಿಕೆ ಕುರಿತ ವೀಡಿಯೋವನ್ನು ನಂಬಿ, ಅಪರಿಚಿತರ ಸೂಚನೆಯಂತೆ ಹಂತ ಹಂತವಾಗಿ ಒಟ್ಟು ₹32.68 ಲಕ್ಷ ಹೂಡಿಕೆ ಮಾಡಿ ವಂಚನೆಗೊಳಗಾದ ಘಟನೆ ಕಾರ್ಕಳದಲ್ಲಿ ನಡೆದಿದೆ.

ಕಾರ್ಕಳದ ಲಕ್ಷ್ಮಣ್ ಅವರಿಗೆ ಫೇಸ್‌ಬುಕ್‌ನಲ್ಲಿ JB (Julius Baer VIP Group) ಹಾಗೂ 5paisa ಆ್ಯಪ್‌ನಲ್ಲಿ ಹಣ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾಭಾಂಶ ನೀಡುವುದಾಗಿ ತಿಳಿಸುವ ವೀಡಿಯೋವೊಂದು ಬಂದಿತ್ತು. ವೀಡಿಯೋದಲ್ಲಿದ್ದ ಲಿಂಕ್‌ನ್ನು ಕ್ಲಿಕ್ ಮಾಡಿದ ಬಳಿಕ ಅವರು JB ಹಾಗೂ 5paisa ಹೆಸರಿನ ವಾಟ್ಸ್‌ಆಪ್ ಗ್ರೂಪ್‌ಗೆ ಸೇರ್ಪಡೆಯಾಗಿದ್ದರು.

ಗ್ರೂಪ್‌ನಲ್ಲಿದ್ದ ಅಪರಿಚಿತರು ಹೆಚ್ಚಿನ ಲಾಭಾಂಶ ನೀಡುವುದಾಗಿ ಹೇಳಿ ವಿವಿಧ ಷೇರುಗಳು ಹಾಗೂ IPOಗಳಲ್ಲಿ ಹಣ ಹೂಡಿಕೆ ಮಾಡುವಂತೆ ಲಕ್ಷ್ಮಣ್ ಅವರಿಗೆ ಸೂಚಿಸಿದ್ದರು. ಇದನ್ನು ನಂಬಿದ ಅವರು 2026ರ ಜುಲೈ 17ರಿಂದ ಆಗಸ್ಟ್ 4ರವರೆಗೆ ಹಂತ ಹಂತವಾಗಿ ಒಟ್ಟು ₹32,68,000 ಹಣವನ್ನು ವರ್ಗಾಯಿಸಿದ್ದಾರೆ.

ಆದರೆ ಹಣ ಹೂಡಿಕೆ ಮಾಡಿದ ಬಳಿಕ ಅಪರಿಚಿತರು ಯಾವುದೇ ಲಾಭಾಂಶ ನೀಡದೆ, ಹೂಡಿಕೆ ಮಾಡಿದ್ದ ಹಣವನ್ನೂ ಹಿಂದಿರುಗಿಸದೆ ವಂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಕುರಿತು ಲಕ್ಷ್ಮಣ್ ಅವರು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.