ಮಂಗಳೂರಿನ ಲಾಲ್‌ಬಾಗ್‌ನಲ್ಲಿ ಹಾಡಹಗಲೇ ಮಚ್ಚಿನ ದಾಳಿ

0
39

ಮಂಗಳೂರು : ನಗರದ ಲಾಲ್‌ಬಾಗ್ ಸಿಗ್ನಲ್ ಸಮೀಪ ಶನಿವಾರ ಮಧ್ಯಾಹ್ನ ವ್ಯಕ್ತಿಯೊಬ್ಬರ ಮೇಲೆ ದುಷ್ಕರ್ಮಿಯೊಬ್ಬ ಮಚ್ಚಿನಿಂದ ದಾಳಿ ನಡೆಸಿದ ಘಟನೆ ನಡೆದಿದೆ.
ಗಾಯಗೊಂಡವರನ್ನು ವಿಕ್ಕಿ ಬಬ್ಬನ್ ಎಂದು ಗುರುತಿಸಲಾಗಿದ್ದು, ಅವರು ಮಧ್ಯಾಹ್ನ ಸುಮಾರು 1:45 ಗಂಟೆ ವೇಳೆಗೆ ಬೈಕ್‌ನಲ್ಲಿ ತೆರಳುತ್ತಿದ್ದಾಗ, ಮತ್ತೊಂದು ಬೈಕ್‌ನಲ್ಲಿ ಹಿಂಬಾಲಿಸಿಕೊಂಡು ಬಂದ ಅಪರಿಚಿತ ವ್ಯಕ್ತಿಯೊಬ್ಬ ಚಲಿಸುತ್ತಿದ್ದ ಬೈಕ್‌ನಲ್ಲೇ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ದಾಳಿಯಲ್ಲಿ ವಿಕ್ಕಿ ಬಬ್ಬನ್ ಅವರ ಕುತ್ತಿಗೆಯ ಭಾಗಕ್ಕೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯರು ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯದ ಕುರಿತು ವೈದ್ಯರು ನಿಗಾ ವಹಿಸಿದ್ದಾರೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಯನ್ನು ಬಂಧಿಸಲು ಜಿಲ್ಲೆಯಾದ್ಯಂತ ಚೆಕ್‌ಪೋಸ್ಟ್‌ಗಳಿಗೆ ಎಚ್ಚರಿಕೆ ನೀಡಲಾಗಿದ್ದು, ಶೋಧ ಕಾರ್ಯವನ್ನು ತೀವ್ರಗೊಳಿಸಲಾಗಿದೆ.

ದಾಳಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.