ರಾಂಬುಟಾನ್ ಮಲೇಶಿಯಾ, ಇಂಡೋನೇಷಿಯಾ ಮೂಲದ ಗಿಡ. ಅಲ್ಲಿಯ ವಾತಾವರಣ ನಮ್ಮ ದೇಶದ ವಾತಾವರಣಕ್ಕೆ ಸರಿಸಮನಾಗಿರುವುದರಿಂದಾಗಿ ರಂಬುಟಾನ್ ನಮ್ಮ ದೇಶದಲ್ಲೂ ಉತ್ತಮವಾಗಿ ಬೆಳೆಯುವುದಕ್ಕೆ ಕಾರಣವಾಗಿದೆ. ಇಲ್ಲದಿದ್ದಲ್ಲಿ ಅಲ್ಲಿಯ ವಾತಾವರಣವನ್ನು ಇಲ್ಲಿ ನಿರ್ಮಿಸುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ. ಇಳಿಜಾರು ಪ್ರದೇಶ, ಬಿಸಿಲು ಅಗತ್ಯ, ಸಾಕಷ್ಟು ನೀರು ಅಗತ್ಯ. ಆದರೆ ಕನಿಷ್ಠ 25 ಅಡಿ ಅಂತರ ಇದ್ದರೆ ಗಿಡ ಬಹಳ ಉತ್ತಮ ಫಲವನ್ನು ನೀಡುತ್ತದೆ. ಹೂ ಬಿಡುವ, ಕಾಯಿ ಕಚ್ಚುವ ಸಮಯದಲ್ಲಿ ಸಾಕಷ್ಟು ಉತ್ತಮ ಗೊಬ್ಬರವನ್ನು ನೀಡುವುದರಿಂದ ಹೆಚ್ಚು ಲಾಭವನ್ನು ಪಡೆಯಲು ಸಾಧ್ಯವಿದೆ ಎಂದು ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ ಚೈತನ್ಯ ನುಡಿದರು.

ಅವರು ಜುಲೈ 25 ರಂದು ಮೂಡುಬಿದಿರೆ ಕೃಷಿ ವಿಚಾರ ವಿನಿಮಯ ಕೇಂದ್ರದ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ತೋಟಗಾರಿಕಾ ಬೆಳೆಗಳಿಗೆ ಮಿತವ್ಯಯ ನೀರಾವರಿ ಪದ್ಧತಿಯ ಬಗ್ಗೆ ಮಾಹಿತಿ ನೀಡಿದ ಮಂಗಳೂರು ಸಹಾಯಕ ತೋಟಗಾರಿಕಾ ಅಧಿಕಾರಿ ಮಹೇಶ್ ಏನ್ ಅವರ ಮಾತನಾಡಿ ಕೃಷಿ ಹೊಂಡ ಸಣ್ಣ ರೈತರಿಗೆ ಕಷ್ಟ ಸಾಧ್ಯವಾದ ಕಾರ್ಯವಾಗಿದೆ. ಆದರೂ ಕೃಷಿಕರು ಲಭ್ಯ ಇರುವ ನೀರಾವರಿಯನ್ನು ಮಿತವ್ಯಯವಾಗಿ ಬಳಸುವುದರಿಂದ ಹೆಚ್ಚಿನ ಇಳುವರಿಯನ್ನು ಪಡೆಯಲು ಸಾಧ್ಯವಿದೆ ಎಂದರು. ಆರೋಗ್ಯಕರ ಪೇಯ ಕಲ್ಪರಸದ ಬಗ್ಗೆ ಸುನಿಲ್ ಸೋನ್ಸ್ ಮಾಹಿತಿ ನೀಡಿದರು. ಆಳ್ವಾಸ್ ರೇಡಿಯೋ ಕೇಂದ್ರದ ಬಗ್ಗೆ ಅರ್ಜಿತ್ ಜೈನ್ ಮಾಹಿತಿ ನೀಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಪ್ರಭಾತ್ ಸಿಲ್ಕ್ಸ್ ಮಾಲೀಕ ಪ್ರಭಾಚಂದ್ರ ಜೈನ್ ಕೆಲಸಗಾರರ ಕೊರತೆಯನ್ನು ನೀಗಿಸಿದರೆ ಮಾತ್ರ ಕೃಷಿ ಕಾರ್ಯ ಉತ್ತಮಗೊಳ್ಳುತ್ತದೆ. ಹೈಫೈ ಜೀವನ ಮಟ್ಟಕ್ಕೆ ಕೃಷಿ ಕಾರ್ಯ ಹೊಂದಿಕೊಳ್ಳುವುದಿಲ್ಲ ಎಂದರು.

ಅಧ್ಯಕ್ಷ ಅಭಯ ಕುಮಾರ್, ಕಾರ್ಯದರ್ಶಿ ಹರೀಶ್ ಕೋಟ್ಯಾನ್, ವೇದಿಕೆಯಲ್ಲಿ ಹಾಜರಿದ್ದರು. ರಾಜವರ್ಮ ಬೈಲಂಗಡಿ ಸ್ವಾಗತಿಸಿದರು. ಜಿನೇಂದ್ರ ಜೈನ್ ಕಾರ್ಯಕ್ರಮ ನಿರ್ವಹಿಸಿದರು. ಲಿಡ್ವಿನ್ ಡಿಕೋಸ್ಟ ಕಾರ್ಯಕ್ರಮ ಸಂಘಟಿಸಿದರು.
ವರದಿ ರಾಯಿ ರಾಜ ಕುಮಾರ್
.

