ಮಂಗಳೂರು : ಶ್ರೀ ಮಾತಾ ಅಮೃತಾನಂದಮಯಿ ದೇವಿ ಬ್ರಹ್ಮಸ್ಥಾನ ಮಹೋತ್ಸವಕ್ಕೆ ಚಾಲನೆ..!

0
48

ಮನುಷ್ಯನು ಸಹಮಾನವರೊಂದಿಗೆ ಸಹಕಾರದಿಂದ, ಪ್ರಕೃತಿಯೊಂದಿಗೆ ಸೌಹಾರ್ದತೆಯಿಂದ ಮತ್ತು ಈಶ್ವರನ ಜೊತೆಗೆ ಸಂಪರ್ಕವಿರಿಸಿಕೊಂಡು ಬದುಕುವುದನ್ನು ಕಲಿಯಬೇಕು : ಮಾತಾ ಅಮೃತಾನಂದಮಯಿ ದೇವಿ

ಮಂಗಳೂರು : ಬೋಳೂರಿನಲ್ಲಿರುವ ಮಾತಾ ಅಮೃತಾನಂದಮಯಿ ಮಠದಲ್ಲಿ ನಡೆದ ಬ್ರಹ್ಮಸ್ಥಾನ ಮಹೋತ್ಸವಕ್ಕೆ ಶುಕ್ರವಾರ ಚಾಲನೆ ದೊರಕಿದ್ದು, ಸಾವಿರಾರು ಭಕ್ತರು ಅಮೃತ ಸಂಗಮದಲ್ಲಿ ಭಾಗಿಯಾಗಿ ಆಧ್ಯಾತ್ಮಿಕ ಅನುಭವ ಪಡೆದರು.

ಭಕ್ತರನ್ನುದ್ದೇಶಿಸಿ ಮಾತನಾಡಿದಶ್ರೀ ಮಾತಾ ಅಮೃತಾನಂದಮಯಿ ದೇವಿ, ಮಾನವಕುಲವು ಪ್ರಕೃತಿಯೆಡೆಗೆ ಹೆಚ್ಚಿನ ವಿನಯ, ಕರುಣೆ ಮತ್ತು ಪೂಜ್ಯಭಾವನೆಯಿಂದ ಬದುಕಬೇಕು ಎಂದು ಕರೆ ನೀಡಿದರು. ಮನುಷ್ಯನು ಸಹಮಾನವರೊಂದಿಗೆ ಸಹಕಾರದಿಂದ, ಪ್ರಕೃತಿಯೊಂದಿಗೆ ಸೌಹಾರ್ದತೆಯಿಂದ ಹಾಗೂ ಈಶ್ವರನೊಂದಿಗೆ ಆತ್ಮೀಯ ಸಂಪರ್ಕ ಹೊಂದಿ ಬದುಕುವುದನ್ನು ಕಲಿಯಬೇಕು ಎಂದು ಅವರು ತಿಳಿಸಿದರು.

ಸಾಂಕ್ರಾಮಿಕ ರೋಗಗಳು, ನೈಸರ್ಗಿಕ ವಿಕೋಪಗಳು ಮತ್ತು ಹವಾಮಾನ ವೈಪರೀತ್ಯಗಳು ಪ್ರಕೃತಿಯೊಂದಿಗಿನ ನಮ್ಮ ಸಂಬಂಧವನ್ನು ಮರುಪರಿಶೀಲಿಸಲು ಮಾನವಕುಲಕ್ಕೆ ದೊರಕಿರುವ ಎಚ್ಚರಿಕೆಯ ಸಂದೇಶಗಳಾಗಿವೆ ಎಂದು ಅಮ್ಮ ಅಭಿಪ್ರಾಯಪಟ್ಟರು. “ಪ್ರಕೃತಿಯನ್ನು ಸಮೀಪಿಸಲು ಇರುವ ಏಕೈಕ ಮಾರ್ಗವೆಂದರೆ ಅಹಂಕಾರವನ್ನು ತೊರೆದು ವಿನಯ, ಸ್ನೇಹ ಮತ್ತು ಪೂಜ್ಯಭಾವನೆಯಿಂದ ಆಕೆಯನ್ನು ಆರಾಧಿಸುವುದಾಗಿದೆ” ಎಂದು ಹೇಳಿದರು. ಮಕ್ಕಳಿಗೆ ಪ್ರಕೃತಿ ಹಾಗೂ ಎಲ್ಲಾ ಜೀವಿಗಳನ್ನು ಪ್ರೀತಿಸುವುದನ್ನು ಕಲಿಸಬೇಕು ಎಂದೂ ಅವರು ಸಲಹೆ ನೀಡಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪ್ರಲ್ಹಾದ್ ಜೋಶಿ ಮಾತನಾಡಿ, ಅಮ್ಮನವರ ಕಾರ್ಯಗಳು ಕೇವಲ ಆಧ್ಯಾತ್ಮಿಕ ಕ್ಷೇತ್ರಕ್ಕೆ ಸೀಮಿತವಾಗಿರದೆ ಸಾಮಾಜಿಕ ಬದುಕಿನ ಹಲವು ಕ್ಷೇತ್ರಗಳಿಗೆ ಸ್ಪರ್ಶಿಸಿರುವುದು ಶ್ಲಾಘನೀಯ ಎಂದರು.

ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ ಯು.ಟಿ. ಖಾದರ್ ಮಾತನಾಡಿ, ಆಧ್ಯಾತ್ಮಿಕ ಶಕ್ತಿಗೆ ಶಾಶ್ವತ ಮೌಲ್ಯವಿದ್ದು, ಸಾರ್ವಜನಿಕ ಜೀವನದಲ್ಲಿ ಸಮಾಜದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಇದು ನೆರವಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸ್ವಾಮಿ ಜಿತಕಾಮಾನಂದ, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಉಡುಪಿ ಶಾಸಕ ಶಾಸಕರಾದ ಯಶಪಾಲ್ ಸುವರ್ಣ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್,ಕರ್ನಾಟಕ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಿತೇಶ್ ಕುಮಾರ್, ಕಿಶೋರ್ ಆಳ್ವ, ಪ್ರಕಾಶ್ ಪೈ ಪೆರಾಜೆ,ವೇದಪ್ರಕಾಶ್ ಶ್ರೀಯಾನ್, ಗೌರವಾಧ್ಯಕ್ಷರುಗಳಾದ ಡಾ ಜೀವರಾಜ್ ಸೊರಕೆ, ಸಿ ಎ ವಾಮನ್ ಕಾಮತ್, ಶ್ರುತಿ ಹೆಗ್ಡೆ,ಡಾ ವಸಂತ ಕುಮಾರ್‍ಪ್ ಪೆರ್ಲ, ಸ್ವಾಗತ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಠದ ವತಿಯಿಂದ ವಿವಿಧ ಕಲ್ಯಾಣ ಯೋಜನೆಗಳಿಗೆ ಚಾಲನೆ ನೀಡಲಾಯಿತು. ಹೃದ್ರೋಗ ಶಸ್ತ್ರಚಿಕಿತ್ಸೆಗೆ ಒಳಗಾಗುವ ಮಕ್ಕಳಿಗೆ ನೆರವು, ಸ್ವಸಹಾಯ ಸಂಘಗಳ ಸದಸ್ಯರಿಗೆ ಆರ್ಥಿಕ ನೆರವು, ಕರಾವಳಿ ಭಾಗದ ಜನರ ಜೀವನೋಪಾಯಕ್ಕಾಗಿ ಕಡಲ ಕಳೆ ಕೃಷಿ ಯೋಜನೆ ಹಾಗೂ ಯುವಜನರ ನೇತೃತ್ವದಲ್ಲಿ ಮಾನಸಿಕ ಆರೋಗ್ಯ ಜಾಗೃತಿ ಅಭಿಯಾನಗಳಿಗೆ ಚಾಲನೆ ನೀಡಲಾಯಿತು.

ಉತ್ಸವದ ಅಂಗವಾಗಿ ವಿಶೇಷ ಪೂಜೆ, ದರ್ಶನ, ಉಚಿತ ವೈದ್ಯಕೀಯ ಶಿಬಿರ, ಅನ್ನದಾನ ಹಾಗೂ ಭಕ್ತರಿಗೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಲಾಗಿತ್ತು. ಕರ್ನಾಟಕ ಹಾಗೂ ನೆರೆಯ ರಾಜ್ಯಗಳಿಂದ ಸಾವಿರಾರು ಭಕ್ತರು ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here