ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಧರ್ಮನಿಷ್ಠ ನ್ಯಾಯವಾದಿಗಳ ವಿಶೇಷ ಶಿಬಿರ

0
1

ಮಂಗಳೂರು: ಸ್ವಾತಂತ್ರ್ಯವೀರ ಸಾವರ್ಕರ್, ಲೋಕಮಾನ್ಯ ತಿಲಕ್, ಮದನ್ ಮೋಹನ್ ಮಾಳವೀಯ ಮತ್ತು ಲಾಲಾ ಲಜಪತ್ ರಾಯ್ ಅವರಂತಹ ಮಹಾನ್ ನಾಯಕರ ಆದರ್ಶಗಳನ್ನಿಟ್ಟುಕೊಂಡು, ಇಂದು ದೇಶ ಮತ್ತು ಧರ್ಮದ ರಕ್ಷಣೆಗಾಗಿ ನ್ಯಾಯವಾದಿಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕಾದ ಅಗತ್ಯವನ್ನು ಶಿಬಿರದಲ್ಲಿ ಒತ್ತಿಹೇಳಲಾಯಿತು. ಎಲ್ಲ ನ್ಯಾಯವಾದಿಗಳ ಉದ್ದೇಶ ಮತ್ತು ಗುರಿ ಒಂದೇ ಆದಾಗ ಮಾತ್ರ ಅದನ್ನೊಂದು ಬಲಿಷ್ಠ ಸಂಘಟನೆಯನ್ನಾಗಿ ರೂಪಿಸಲು ಸಾಧ್ಯ ಎಂದು ಶ್ರೀ ಗುರುಪ್ರಸಾದ ಗೌಡ ಅವರು ಶಿಬಿರದ ಉದ್ದೇಶವನ್ನು ಸ್ಪಷ್ಟಪಡಿಸಿದರು.

ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಕರ್ನಾಟಕದ ವಿವಿಧ ಜಿಲ್ಲೆಗಳ ರಾಷ್ಟ್ರಭಕ್ತ ಹಾಗೂ ಧರ್ಮನಿಷ್ಠ ನ್ಯಾಯವಾದಿಗಳನ್ನು ಸಂಘಟಿಸಿ, ಅವರಲ್ಲಿ ಧರ್ಮಸಂಸ್ಥಾಪನೆ ಮತ್ತು ‘ಹಿಂದೂ ರಾಷ್ಟ್ರ’ದ ಸಂಕಲ್ಪವನ್ನು ಜಾಗೃತಗೊಳಿಸಲು ಬೋಳೂರಿನ ಪ್ರಭು ನಿವಾಸ ಸಭಾಗೃಹದಲ್ಲಿ ವಿಶೇಷ ಶಿಬಿರವನ್ನು ಆಯೋಜಿಸಲಾಗಿತ್ತು.

ಶ್ರೀ. ಗುರುಪ್ರಸಾದ ಗೌಡ ಮುಂದೊರಿಸುತ್ತಾ ಸನಾತನ ಹಿಂದೂ ಧರ್ಮವು ಜಗತ್ತಿಗೆ “ವಸುಧೈವ ಕುಟುಂಬಕಂ” ಮತ್ತು “ಸರ್ವೇ ಜನಾಃ ಸುಖಿನೋ ಭವಂತು” ಎಂಬ ಜಾಗತಿಕ ಶಾಂತಿಯ ದಿವ್ಯ ಚಿಂತನೆಯನ್ನು ನೀಡಿದೆ. ಆದರೆ ಇದಕ್ಕೆ ಸಂಪೂರ್ಣ ವಿರುದ್ಧವಾಗಿ, ಇಸ್ಲಾಮಿಕ್ ರಾಷ್ಟ್ರವನ್ನು ಸ್ಥಾಪಿಸುವ ಮತಾಂಧ ಆಕಾಂಕ್ಷೆಯೊಂದಿಗೆ “ಸರ್ ತನ್ ಸೆ ಜುದಾ” (ಶಿರಚ್ಛೇದನ) ದಂತಹ ದೇಶವಿಭಜಕ ಘೋಷಣೆಗಳನ್ನು ಕೂಗಲಾಗುತ್ತಿದೆ. ಒಂದು ಕಡೆ ಸಾತ್ವಿಕ, ಆದರ್ಶ ‘ಹಿಂದೂ ರಾಷ್ಟ್ರ’ದ ಭವ್ಯ ಕಲ್ಪನೆಯಿದ್ದರೆ, ಮತ್ತೊಂದು ಕಡೆ ಧರ್ಮಾಂಧತೆ ಮತ್ತು ಹಿಂಸೆಯ ಹಾದಿ ಎದ್ದು ಕಾಣುತ್ತಿದೆ ಎಂದರು.

ಶಿಬಿರದಲ್ಲಿ ಮಾತನಾಡಿದ ಸಮಿತಿಯ ವಕ್ತಾರರಾದ ಶ್ರೀ ಮೋಹನ ಗೌಡ ಅವರು, “ಕರ್ನಾಟಕದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಕೇವಲ ಮತಬ್ಯಾಂಕ್ ರಾಜಕಾರಣ ಮತ್ತು ಹಿಂದೂ ವಿರೋಧಿ ತುಷ್ಟೀಕರಣ ನೀತಿಯಿಂದಾಗಿ ಹಿಂದೂ ಸಮಾಜದ ಭಾವನೆಗಳನ್ನು ನಿರಂತರವಾಗಿ ತುಳಿಯುತ್ತಿದೆ. ದೇವಸ್ಥಾನಗಳ ಅವಮಾನ, ಹಿಂದೂ ಕಾರ್ಯಕರ್ತರ ಮೇಲಿನ ದಾಳಿಗಳ ಪ್ರಕರಣಗಳು, ಶಾಲೆಗಳಲ್ಲಿ ಹಿಜಾಬ್ ಪ್ರೋತ್ಸಾಹಿಸುವುದು ಮತ್ತು ಮುಸ್ಲಿಂ ಸಮುದಾಯಕ್ಕೆ ಏಕಪಕ್ಷೀಯವಾಗಿ ಸಾವಿರಾರು ಕೋಟಿ ರೂ. ಅನುದಾನ ನೀಡುತ್ತಿರುವುದು ಸಂವಿಧಾನದ ಸಮಾನತೆಯ ತತ್ವಕ್ಕೇ ದ್ರೋಹ ಬಗೆದಂತಾಗಿದೆ”. ಅಲ್ಲದೆ, “ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಇದ್ದರೂ ಬಕ್ರೀದ್ ಸಂದರ್ಭದಲ್ಲಿ ರಾಜಾರೋಷವಾಗಿ ನಡೆಯುವ ಗೋಮಾತೆಯರ ಹತ್ಯೆಯನ್ನು ತಡೆಯಲು ಸರ್ಕಾರ ಸಂಪೂರ್ಣ ವಿಫಲವಾಗಿದೆ. ಭಟ್ಕಳ ಸೇರಿದಂತೆ ಹಲವೆಡೆ ಹಿಂದೂ ಧಾರ್ಮಿಕ ಶ್ರದ್ಧಾಕೇಂದ್ರಗಳ ಮೇಲೆ ಜಿಹಾದಿ ಶಕ್ತಿಗಳಿಂದ ದಾಳಿ ನಡೆಯುತ್ತಿದ್ದರೂ ಸರ್ಕಾರ ಮೌನ ವಹಿಸಿದೆ” ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಹಿಂದೂ ಸಮಾಜದ ಧಾರ್ಮಿಕ ಹಕ್ಕುಗಳ ಮೇಲಿನ ಈ ಆಘಾತಗಳ ವಿರುದ್ಧ ಉಚ್ಚ ನ್ಯಾಯಾಲಯದ ಮಟ್ಟದಲ್ಲಿ ಸಂವಿಧಾನಾತ್ಮಕ ಹೋರಾಟವನ್ನು ತೀವ್ರಗೊಳಿಸಲು ಶಿಬಿರದಲ್ಲಿ ದೃಢ ನಿರ್ಣಯ ಕೈಗೊಳ್ಳಲಾಯಿತು. ಹಿಂದೂ ಸಂಘಟನೆಗಳು ಮತ್ತು ಕಾರ್ಯಕರ್ತರಿಗೆ ಭದ್ರ ಕಾನೂನು ಕವಚವನ್ನು ನೀಡಲು, ಪ್ರತಿಯೊಂದು ಜಿಲ್ಲೆಯಲ್ಲೂ ರಾಷ್ಟ್ರಭಕ್ತ ವಕೀಲರ ಬಲಿಷ್ಠ ಜಾಲವನ್ನು ನಿರ್ಮಿಸಲು ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ “ನ್ಯಾಯವಾದಿಗಳ ಅಧಿವೇಶನಗಳನ್ನು” ಆಯೋಜಿಸಲಾಗುವುದು ಎಂದರು.

LEAVE A REPLY

Please enter your comment!
Please enter your name here