ಮಂಗಳೂರು ವಿಶ್ವವಿದ್ಯಾನಿಲಯ ವಲಯ ಮಟ್ಟದ ಕಬಡ್ಡಿ ಪಂದ್ಯಾವಳಿ ಸಂಪನ್ನ

0
8

ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ಆಶ್ರಯದಲ್ಲಿ ಮಂಗಳೂರಿನ ಮಿಲಾಗ್ರಿಸ್ ಕಾಲೇಜಿನಲ್ಲಿ ಅಕ್ಟೋಬರ್ 27 ಮತ್ತು 28ರಂದು ಎರಡು ದಿನಗಳ ಅಂತರ್ ಕಾಲೇಜು ವಲಯ ಮಟ್ಟದ ಕಬಡ್ಡಿ ಪಂದ್ಯಾವಳಿ ನಡೆಯಿತು. ವಿಶ್ವವಿದ್ಯಾನಿಲಯಕ್ಕೆ ಸಂಯೋಜಿತವಾಗಿರುವ ವಿವಿಧ ಕಾಲೇಜುಗಳ 35 ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿ ಕ್ರೀಡಾ ಸಾಮರ್ಥ್ಯವನ್ನು ಪ್ರದರ್ಶಿಸಿದವು.

ಪಂದ್ಯಾವಳಿಯನ್ನುದ್ದೇಶಿಸಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಜೆರಾಲ್ಡ್ ಸಂತೋಷ್ ಡಿಸೋಜಾ ಅವರು, ಕ್ರೀಡೆಯು ಶಿಸ್ತು, ಆತ್ಮವಿಶ್ವಾಸ ಹಾಗೂ ತಂಡದ ಮನೋಭಾವವನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಕ್ರೀಡೆ ಅತ್ಯಂತ ಅಗತ್ಯವಾಗಿದ್ದು, ಪಂದ್ಯಾವಳಿಯಲ್ಲಿ ಭಾಗವಹಿಸಿದ ಎಲ್ಲ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.

ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲ ರೆ. ಡಾ. ಆಲ್ವಿನ್ ಸೆರಾವ್ ಮಾತನಾಡಿ, ಕ್ರೀಡಾಪಟುಗಳು ಸ್ಪರ್ಧೆಗಳಲ್ಲಿ ಕ್ರೀಡಾಸ್ಫೂರ್ತಿ ಮತ್ತು ಶಿಸ್ತಿನೊಂದಿಗೆ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಬೇಕು. ಇಂತಹ ಕ್ರೀಡಾಕೂಟಗಳ ನಿರಂತರ ಆಯೋಜನೆಯಿಂದ ವಿದ್ಯಾರ್ಥಿಗಳ ದೈಹಿಕ ಆರೋಗ್ಯ ಹಾಗೂ ಕ್ರೀಡಾ ಸಾಮರ್ಥ್ಯ ವೃದ್ಧಿಯಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಮಟ್ಟದ ಕಬಡ್ಡಿ ಆಟಗಾರರಾದ ಸಾಯಿ ಪ್ರಸಾದ್ ಮತ್ತು ನಾಸಿರ್ ಅಮ್ಮಿ ಕುಪ್ಪೆಟ್ಟಿ ಅವರನ್ನು ಸನ್ಮಾನಿಸಲಾಯಿತು.

ನರಿಂಗಾನ ಗ್ರಾಮ ಪಂಚಾಯತ್ ಅಧ್ಯಕ್ಷ ನವಾಜ್ ನರಿಂಗಾನ, ಪಂದ್ಯಾವಳಿಯ ವೀಕ್ಷಕ ಡಾ. ಪ್ರಸನ್ನ ಕುಮಾರ್ ಬಿ.ಕೆ., ರಾಷ್ಟ್ರೀಯ ಮಟ್ಟದ ಕಬಡ್ಡಿ ಆಟಗಾರ ಹರೀಶ್ ಆಳ್ವ, ಮಿಲಾಗ್ರಿಸ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಮೆಲ್ವಿನ್ ವಾಸ್, ಮಿಲಾಗ್ರಿಸ್ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಹಾಗೂ ಕಾರ್ಯಕ್ರಮ ಸಂಯೋಜಕ ಆಕಾಶ್ ಶೆಟ್ಟಿ ಮತ್ತು ಕ್ರೀಡಾ ಕಾರ್ಯದರ್ಶಿ ಪ್ರತೀತ್ ಸಾಲ್ಯಾನ್ ಉಪಸ್ಥಿತರಿದ್ದರು.

ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಬಡ್ಡಿ ಆಟಗಾರರಿಗೆ ಶುಭ ಹಾರೈಸಿದರು. ಬಳಿಕ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು.

ಪಂದ್ಯಾವಳಿಯಲ್ಲಿ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜು ಪ್ರಥಮ ಸ್ಥಾನ ಗಳಿಸಿದರೆ, ಮಂಗಳೂರಿನ ಮಿಲಾಗ್ರಿಸ್ ಕಾಲೇಜು ದ್ವಿತೀಯ ಸ್ಥಾನ ಪಡೆದುಕೊಂಡಿತು. ಮಂಗಳೂರಿನ ಶ್ರೀ ಗೋಕರ್ಣನಾಥೇಶ್ವರ ಕಾಲೇಜು ಆಫ್ ಎಜುಕೇಶನ್ ತೃತೀಯ ಸ್ಥಾನ ಗಳಿಸಿತು. ಸುಳ್ಯದ ನೆಹರು ಸ್ಮಾರಕ ಕಾಲೇಜು ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟಿತು.

ಕಾರ್ಯಕ್ರಮದ ಆರಂಭದಲ್ಲಿ ಹಿಂದಿ ಉಪನ್ಯಾಸಕಿ ಶ್ರಾವ್ಯ ಎನ್. ಸ್ವಾಗತಿಸಿದರು. ಮಿಲಾಗ್ರಿಸ್ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಹಾಗೂ ಕಾರ್ಯಕ್ರಮ ಸಂಯೋಜಕ ಆಕಾಶ್ ಶೆಟ್ಟಿ ವಂದಿಸಿದರು. ಇಂಗ್ಲಿಷ್ ಉಪನ್ಯಾಸಕಿ ಪ್ರಿಯಾ ಭಟ್ ಕಾರ್ಯಕ್ರಮ ನಿರೂಪಿಸಿದರು.

ವಿದ್ಯಾರ್ಥಿಗಳಲ್ಲಿ ಕ್ರೀಡಾಸ್ಫೂರ್ತಿ, ಶಿಸ್ತು ಮತ್ತು ತಂಡದ ಒಗ್ಗಟ್ಟನ್ನು ಬೆಳೆಸುವ ಉದ್ದೇಶದಿಂದ ಆಯೋಜಿಸಲಾದ ಈ ಪಂದ್ಯಾವಳಿ ಯುವ ಕ್ರೀಡಾಪಟುಗಳಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಉತ್ತಮ ವೇದಿಕೆಯಾಯಿತು.