ಮಂಗಳೂರು: ಗುಂಪಿನಿಂದ ಅಪರಿಚಿತ ವ್ಯಕ್ತಿಯ ಥಳಿಸಿ ಹತ್ಯೆ- 15ಮಂದಿ ಆರೋಪಿಗಳು ವಶಕ್ಕೆ

0
503

ಮಂಗಳೂರು: 25-30ಮಂದಿಯಿದ್ದ ಗುಂಪೊಂದು ಅಪರಿಚಿತ ವ್ಯಕ್ತಿಯನ್ನು ಥಳಿಸಿ ಹತ್ಯೆ ಮಾಡಿರುವ ಆತಂಕಕಾರಿ ಘಟನೆಯೊಂದು ಮಂಗಳೂರಿನ ಕುಡುಪು ಭಟ್ರಕಲ್ಲುರ್ಟಿ ದೈವಸ್ಥಾನದ ಬಳಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 15ಮಂದಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಸಚಿನ್ ಟಿ., ದೇವದಾಸ್, ಮಂಜುನಾಥ್, ಸಾಯಿದೀಪ್, ನಿತೇಶ್ ಕುಮಾರ್, ದೀಕ್ಷಿತ್ ಕುಮಾ‌ರ್, ಸಂದೀಪ್, ವಿವಿಯನ್ ಆಳ್ವಾರೀಸ್, ಶ್ರೀದತ್ತ, ರಾಹುಲ್, ಪ್ರದೀಪ್ ಕುಮಾರ್, ಮನೀಷ್ ಶೆಟ್ಟಿ, ಧನುಷ್, ದೀಕ್ಷಿತ್, ಕಿಶೋರ್ ಕುಮಾರ್ ಪೊಲೀಸರು ವಶಪಡಿಸಿಕೊಂಡ ಆರೋಪಿಗಳು. ಎ.27ರಂದು ಸಂಜೆ 5:30ಸುಮಾರಿಗೆ ಮಂಗಳೂರಿನ ಕುಡುಪು ಭಟ್ರಕಲ್ಲುರ್ಟಿ ದೈವಸ್ಥಾನದ ಸಮೀಪ ಅಪರಿಚಿತ ವ್ಯಕ್ತಿಯ ಮೃತದೇಹವೊಂದು ಪತ್ತೆಯಾಗಿತ್ತು. ಪೊಲೀಸರು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿದ್ದರು. ಆದರೆ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದಾಗ ಮೃತನ ಬೆನ್ನಿಗೆ ಬಲವಾದ ಹೊಡೆತ ಬಿದ್ದಿದೆ. ಇದರಿಂದ ಗಂಭೀರವಾಗಿ ಗಾಯಗೊಂಡು ಉಂಟಾದ ರಕ್ತಸ್ರಾವ, ಶಾಕ್ ಮತ್ತು ಸೂಕ್ತ ಸಮಯದಲ್ಲಿ ಸರಿಯಾದ ಚಿಕಿತ್ಸೆ ಸಿಗದೆ ಈ ಮರಣ ಸಂಭವಿಸಿದ್ದು ಕಂಡುಬಂದಿದೆ.

ಈ ಬಗ್ಗೆ ತನಿಖೆ ನಡೆಸಿದಾಗ ಎ.27ರಂದು ಮಧ್ಯಾಹ್ನ 3ಗಂಟೆ ಸುಮಾರಿಗೆ ಭಟ್ರಕಲ್ಲುರ್ಟಿ ದೈವಸ್ಥಾನದ ಬಳಿ ಮೈದಾನದಲ್ಲಿ ಕ್ರಿಕೆಟ್ ಪಂದ್ಯಾಟ ನಡೆಯುತ್ತಿತ್ತು. ಈ ಸಂದರ್ಭ ವಿಚಾರವೊಂದಕ್ಕೆ ಮೃತವ್ಯಕ್ತಿಗೆ ಅಲ್ಲಿದ್ದ ಸಚಿನ್ ಎಂಬಾತನೊಂದಿಗೆ ವಾಗ್ವಾದ ನಡೆದಿತ್ತು. ಈ ಸಂದರ್ಭ ಸಚಿನ್ ಆತನಿಗೆ ಥಳಿಸಿದ್ದು, ಬಳಿಕ ಅಲ್ಲಿದ್ದ 25-30ಮಂದಿಯ ಗುಂಪು ಅಪರಿಚಿತ ವ್ಯಕ್ತಿಗೆ ಕೈಯಿಂದ ಮತ್ತು ಕಟ್ಟಿಗೆಯಿಂದ ಹೊಡೆದು, ಕಾಲಿನಿಂದ ಯದ್ವಾತದ್ವ ತುಳಿದು ಹಲ್ಲೆ ನಡೆಸಿದ್ದಾರೆ. ಈ ಸಂದರ್ಭ ಕೆಲವರು ತಡೆಯಲು ಯತ್ನಿಸಿದರೂ, ಆತನ ಮೇಲೆ ನಿರಂತರ ಹಲ್ಲೆ ನಡೆಸಿದ ಕಾರಣ ಗಂಭೀರವಾಗಿ ಗಾಯಗೊಂಡ ಅಪರಿಚಿತ ವ್ಯಕ್ತಿಯು ಮೃತಪಟ್ಟಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದೀಪಕ್ ಕುಮಾರ್ ಎಂಬವರು 19ಮಂದಿ ಮತ್ತು ಇತರರ ವಿರುದ್ಧ ನೀಡಿದ ದೂರಿನ ಆಧಾರದಲ್ಲಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 37/2025, ಕಲಂ: 103(2), 115(2), 189(2), 190, 191(1), 191(3), 240 ಕಾಯ್ದೆಯಡಿ ಕೈಗೊಳ್ಳಲಾಗಿರುತ್ತದೆ. ಗುಂಪು ಹತ್ಯೆಯ ಹಿನ್ನೆಲೆಯಲ್ಲಿ ಮಂಗಳೂರು ನಗರದಲ್ಲಿ ಇದೇ ಮೊದಲ ಬಾರಿಗೆ 2023 (BNS, 2023) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಈ ಕೃತ್ಯದಲ್ಲಿ ಸುಮಾರು 25ಕ್ಕೂ ಅಧಿಕ ಮಂದಿ ಭಾಗವಹಿಸಿರುವ ಸಂಶಯವಿದೆ. ಈಗಾಗಲೇ 15 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳನ್ನು ಶೀಘ್ರದಲ್ಲಿ ಪತ್ತೆಮಾಡಿ ಬಂಧಿಸಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಈ ಪ್ರಕರಣದಲ್ಲಿ ಮಾಜಿ ಕಾರ್ಪೊರೇಟರ್ ಪತಿಯ ಹೆಸರು ಥಳಕು ಹಾಕಿಕೊಂಡಿದೆ. ಈ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here