ಜೈಲಿನೊಳಗೆ ಮೊಬೈಲ್ ಬಳಕೆ : ನಟೋರಿಯಸ್ ಆರೋಪಿಗಳಿಂದ 10 ಸ್ಮಾರ್ಟ್‌ಫೋನ್ ವಶ

0
17

ಮಂಗಳೂರು : ಜಿಲ್ಲಾ ಕಾರಾಗೃಹದಲ್ಲಿ ಅಕ್ರಮವಾಗಿ ಮೊಬೈಲ್ ಫೋನ್ ಬಳಕೆ ಮಾಡುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಪೊಲೀಸರು ತಡರಾತ್ರಿ ದಿಢೀರ್ ದಾಳಿ ನಡೆಸಿ 9 ಮಂದಿ ಕೈದಿಗಳಿಂದ 10 ಮೊಬೈಲ್ ಸ್ಮಾರ್ಟ್‌ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಸೆ.7ರ ತಡರಾತ್ರಿ ದೊರೆತ ಖಚಿತ ಮಾಹಿತಿ ಆಧರಿಸಿ ಈ ಕಾರ್ಯಾಚರಣೆ ನಡೆಸಲಾಗಿದೆ.

ಮಂಗಳೂರು ಜಿಲ್ಲಾ ಕಾರಾಗೃಹದ ಎ-ಬ್ಲಾಕ್‌ನಲ್ಲಿ ಪೊಲೀಸರು ದಿಢೀರ್ ತಪಾಸಣೆ ನಡೆಸಿದ ವೇಳೆ ಕೈದಿಗಳು ಅಕ್ರಮವಾಗಿ ಬಚ್ಚಿಟ್ಟುಕೊಂಡಿದ್ದ ಮೊಬೈಲ್ ಫೋನ್‌ಗಳು ಪತ್ತೆಯಾಗಿವೆ. ನ್ಯಾಯಾಂಗ ಬಂಧನದಲ್ಲಿರುವ ಕೈದಿಗಳು ನಿಷೇಧಿತ ಮೊಬೈಲ್‌ಗಳನ್ನು ಬಳಸುತ್ತಿರುವ ಬಗ್ಗೆ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ.

ತೊಕ್ಕೊಟ್ಟಿನಲ್ಲಿ ಇತ್ತೀಚೆಗೆ ನಡೆದ ಆರಿಫ್ ಕೊಲೆ ಪ್ರಕರಣದಲ್ಲಿ ಆರೋಪಿಗಳಾಗಿರುವ ರಿಫಾತ್ ಅಲಿ, ಇಬ್ರಾಹಿಂ ಖಲೀಲ್, ಅಶ್ವಾಕ್ ಅಲಿಯಾಸ್ ಜುಟ್ಟು ಅಸ್ಪಕ್ ಹಾಗೂ ಅರ್ಷದ್ ಅವರ ಬಳಿಯೂ ಮೊಬೈಲ್ ಫೋನ್‌ಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದೇ ವೇಳೆ ಮಾದಕ ವಸ್ತುಗಳ ಮಾರಾಟಕ್ಕೆ ಸಂಬಂಧಿಸಿದ ಎನ್‌ಡಿಪಿಎಸ್ ಕಾಯ್ದೆಯಡಿ ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿರುವ ದಾವೂದ್ ಫರ್ವೇಜ್, ನಝರತ್ ಅಲಿ, ಶಿಫಾನ್ ಹಾಗೂ ಅಬ್ದುಲ್ ಸಾದೀಕ್ ಅವರ ಬಳಿಯೂ ಮೊಬೈಲ್‌ಗಳು ಪತ್ತೆಯಾಗಿವೆ. ಕಂಕನಾಡಿ ನಗರ ಪೊಲೀಸ್ ಠಾಣೆಯ ಕೋಕಾ ಪ್ರಕರಣದಲ್ಲಿ ಆರೋಪಿಯಾಗಿರುವ ಅರ್ಫಾಜ್ ಎಂಬಾತನಿಂದಲೂ ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.

ಒಟ್ಟು 10 ಮೊಬೈಲ್ ಸ್ಮಾರ್ಟ್‌ಫೋನ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಅವುಗಳನ್ನು ಜೈಲಿನೊಳಗೆ ಹೇಗೆ ತರಲಾಯಿತು, ಯಾರಿಂದ ಪೂರೈಕೆಯಾಯಿತು ಹಾಗೂ ಕೈದಿಗಳು ಅವುಗಳನ್ನು ಯಾವ ಉದ್ದೇಶಕ್ಕೆ ಬಳಸುತ್ತಿದ್ದರು ಎಂಬ ಕುರಿತು ತನಿಖೆ ಮುಂದುವರಿದಿದೆ.

ವಶಪಡಿಸಿಕೊಂಡ ಮೊಬೈಲ್‌ಗಳ ಕರೆ ವಿವರಗಳು ಹಾಗೂ ಇತರ ತಾಂತ್ರಿಕ ಮಾಹಿತಿಗಳನ್ನು ಪರಿಶೀಲಿಸುವ ಸಾಧ್ಯತೆಯಿದ್ದು, ಜೈಲಿನೊಳಗಿನ ಅಕ್ರಮ ಮೊಬೈಲ್ ಬಳಕೆಯ ಹಿಂದೆ ಮತ್ತಷ್ಟು ಮಂದಿ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ.

ಈ ಸಂಬಂಧ ಬರ್ಕೆ ಪೊಲೀಸ್ ಠಾಣೆಯಲ್ಲಿ ಅ.ಕ್ರ. 82/2026ರಂತೆ ಪ್ರಕರಣ ದಾಖಲಾಗಿದ್ದು, ಬಿಎನ್‌ಎಸ್ ಕಲಂ 323 ಹಾಗೂ ಕರ್ನಾಟಕ ಕಾರಾಗೃಹ ಕಾಯ್ದೆಯ ಕಲಂ 42ರ ಅಡಿಯಲ್ಲಿ ತನಿಖೆ ಕೈಗೊಳ್ಳಲಾಗಿದೆ.

ಇತ್ತೀಚೆಗೆ ಜೈಲರ್ ಒಬ್ಬರು ಹೊಸದಾಗಿ ವರ್ಗಾವಣೆಯಾಗಿ ಬಂದ ಬಳಿಕ ಕಾರಾಗೃಹದಲ್ಲಿ ಅಕ್ರಮ ಚಟುವಟಿಕೆಗಳು ಹೆಚ್ಚಾಗಿವೆ ಎಂಬ ಆರೋಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ, ಈ ಮೊಬೈಲ್ ಪತ್ತೆ ಪ್ರಕರಣವು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ. ಆದರೆ ಈ ಆರೋಪಗಳ ಸತ್ಯಾಸತ್ಯತೆ ತನಿಖೆಯಿಂದಲೇ ಸ್ಪಷ್ಟವಾಗಬೇಕಿದೆ.