
ಮೂಡುಬಿದಿರೆ: ಶ್ರೀ ಮಹಾವೀರ ಕಾಲೇಜು, ಮೂಡುಬಿದಿರೆಯ ಐಕ್ಯೂಎಸಿ, ಎನ್‌ಎಸ್‌ಎಸ್, ಎನ್‌ಸಿಸಿ, ರೆಡ್‌ಕ್ರಾಸ್, ರೋವರ್ಸ್–ರೇಂಜರ್ಸ್ ಹಾಗೂ ಇಂಟರಾಕ್ಟ್ ಘಟಕಗಳ ಸಹಯೋಗದಲ್ಲಿ ಸಾಮೂಹಿಕ ಸ್ವಚ್ಛತಾ ಅಭಿಯಾನ ಹಾಗೂ ಜಾಗೃತಿ ಕಾರ್ಯಕ್ರಮವನ್ನು ಲಯನ್ಸ್ ಕ್ಲಬ್ ಮೂಡುಬಿದಿರೆ, ರೋಟರಿ ಕ್ಲಬ್ ಮೂಡುಬಿದಿರೆ ಟೆಂಪಲ್ ಟೌನ್ ಹಾಗೂ ಲಯನ್ಸ್ ಕ್ಲಬ್ ಕಲ್ಲಮುಂಡ್ಕೂರು–ನಿಡ್ಡೋಡಿ ಸಹಭಾಗಿತ್ವದಲ್ಲಿ ಹಮ್ಮಿಕೊಳ್ಳಲಾಯಿತು.
ಮೂಡುಬಿದಿರೆ ಪೊಲೀಸ್ ಠಾಣೆಯ ಬಳಿ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಕೆ. ಅಭಯಚಂದ್ರ ಜೈನ್ ಅವರು ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಸ್ವಚ್ಛತೆಗೆ ಆದ್ಯತೆ ನೀಡುವ ಮನೋಭಾವ ನಾಗರಿಕರು ಹಾಗೂ ವಿದ್ಯಾರ್ಥಿಗಳಲ್ಲಿ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಹಸಿರು ದಳದ ಯೋಜನಾ ವ್ಯವಸ್ಥಾಪಕ ನಾಗರಾಜ್ ಬಜಾಲ್ ಮಾತನಾಡಿ, ಪ್ಲಾಸ್ಟಿಕ್‌ನಿಂದಾಗುವ ದುಷ್ಪರಿಣಾಮಗಳು ಹಾಗೂ ತ್ಯಾಜ್ಯ ವಿಲೇವಾರಿ ಕುರಿತು ಎಲ್ಲರಿಗೂ ಅರಿವಿದ್ದರೂ, ಅದನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ. ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿಯನ್ನು ಅರಿತು ಕಸವನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಿದರೆ ಸ್ವಚ್ಛ ಸಮಾಜ ನಿರ್ಮಿಸಲು ಸಾಧ್ಯ ಎಂದು ಹೇಳಿದರು.
ಮೂಡುಬಿದಿರೆ ಪೊಲೀಸ್ ಠಾಣಾಧಿಕಾರಿ ರಾಜೇಂದ್ರ ಕುಮಾರ್ ಪಿ., ಶ್ರೀ ಮಹಾವೀರ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ರಾಧಾಕೃಷ್ಣ, ಶ್ರೀ ಮಹಾವೀರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಹಾಗೂ ಎನ್‌ಸಿಸಿ ಅಧಿಕಾರಿ ಲೆ. ವಿಜಯಲಕ್ಷ್ಮಿ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ. ಹರೀಶ್, ಲಯನ್ಸ್ ಕ್ಲಬ್ ಮೂಡುಬಿದಿರೆ ಅಧ್ಯಕ್ಷ ರಿಚರ್ಡ್ ಕಾರ್ಡೀಜಾ, ರೋಟರಿ ಟೆಂಪಲ್ ಟೌನ್ ಅಧ್ಯಕ್ಷ ಡೇನಿಸ್ ಪಿರೇರಾ ಹಾಗೂ ಲಯನ್ಸ್ ಕ್ಲಬ್ ಕಲ್ಲಮುಂಡ್ಕೂರು ಅಧ್ಯಕ್ಷ ರಾಜೇಂದ್ರ ಪಿಂಟೋ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಯುವ ರೆಡ್‌ಕ್ರಾಸ್ ಕಾರ್ಯಕ್ರಮಾಧಿಕಾರಿ ಶ್ರೀಗೌರಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಎನ್‌ಎಸ್‌ಎಸ್ ಘಟಕದ ಸಂಯೋಜಕರಾದ ಶಾರದಾ, ಚಿತ್ರಲೇಖಾ, ಡಾ. ಚಂದನಾ ಕೆ.ಎಸ್., ಎನ್‌ಸಿಸಿ ಅಧಿಕಾರಿ ಲೆ. ವಿಜಯಲಕ್ಷ್ಮಿ, ಯುವ ರೆಡ್‌ಕ್ರಾಸ್ ಕಾರ್ಯಕ್ರಮಾಧಿಕಾರಿ ಶ್ರೀಗೌರಿ, ರೋವರ್ಸ್–ರೇಂಜರ್ಸ್ ಘಟಕಗಳ ಸಂಯೋಜಕರಾದ ಆಶ್ರಿತಾ ಹಾಗೂ ದಕ್ಷಿತ್ ಮತ್ತು ಇಂಟರಾಕ್ಟ್ ಸಂಯೋಜಕಿ ರಕ್ಷಿತಾ ಅವರ ಮಾರ್ಗದರ್ಶನದಲ್ಲಿ ಸ್ವಚ್ಛತಾ ಕಾರ್ಯ ನಡೆಯಿತು.
ಅಭಿಯಾನದಲ್ಲಿ ಕಾಲೇಜಿನ ವಿವಿಧ ಘಟಕಗಳ 250ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿ ಜ್ಯೋತಿನಗರದಿಂದ ಕೊಡಂಗಲ್ಲುವರೆಗೆ ಸ್ವಚ್ಛತಾ ಕಾರ್ಯ ನಡೆಸಿದರು. ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡುವ ಕುರಿತು ಜಾಗೃತಿ ಮೂಡಿಸುವುದರ ಜೊತೆಗೆ, ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯದೆ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವಂತೆ ಸಾರ್ವಜನಿಕರಿಗೆ ಸಂದೇಶ ನೀಡಲಾಯಿತು.
