ಮೂಡುಬಿದಿರೆ ಬಸ್ ನಿಲ್ದಾಣದಲ್ಲಿ ಕತ್ತಿ ಹಿಡಿದು ಯುವಕನ ರೌಡಿಸಂ; ಪೊಲೀಸರ ವಶಕ್ಕೆ

0
16

ಮೂಡುಬಿದಿರೆ: ಇಲ್ಲಿನ ಖಾಸಗಿ ಬಸ್ ನಿಲ್ದಾಣದಲ್ಲಿ ಯುವಕನೋರ್ವ ಕೈಯಲ್ಲಿ ಕತ್ತಿ ಹಿಡಿದು ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಸಿದ ಘಟನೆ ಶನಿವಾರ ಸಂಜೆ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಪೆರಿಂಜೆ ಮೂಲದ ಯುವಕನೆಂದು ಗುರುತಿಸಲಾದ ಆತ, ಬಸ್ ನಿಲ್ದಾಣದಲ್ಲಿ ರಾಜಾರೋಷವಾಗಿ ಕೈಯಲ್ಲಿ ಕತ್ತಿ ಹಿಡಿದು ಸಂಚರಿಸಿದ್ದಾನೆ. ಬಳಿಕ ಸಮೀಪದ ಮೊಬೈಲ್ ಅಂಗಡಿಗೆ ತೆರಳಿ ಅಲ್ಲಿದ್ದ ಯುವಕರಿಗೆ ಮೊಬೈಲ್ ನೀಡುವಂತೆ ಬೆದರಿಕೆ ಹಾಕಿದ್ದಾನೆ ಎಂದು ತಿಳಿದುಬಂದಿದೆ.

ನಂತರ ಅಂಗಡಿಯಿಂದ ಹೊರಬಂದ ಆತ, ಕತ್ತಿಯನ್ನು ಬೆನ್ನಿನ ಭಾಗದಲ್ಲಿ ಇರಿಸಿಕೊಂಡು ಬಸ್ ನಿಲ್ದಾಣದ ಬಳಿ ಕುಳಿತುಕೊಂಡಿದ್ದ. ಇದರಿಂದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಘಟನೆಯ ಮಾಹಿತಿ ತಿಳಿದ ತಕ್ಷಣ ಮೂಡುಬಿದಿರೆ ಪೊಲೀಸರು ಸ್ಥಳಕ್ಕಾಗಮಿಸಿ ಯುವಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಾಗಿದೆ.