ಉತ್ಥಾನ ಕಲಾ ಭವನದಲ್ಲಿ ಅರ್ಥಪೂರ್ಣ ರಕ್ಷಾ ಬಂಧನ ಆಚರಣೆ

0
19

ಭಟ್ಕಳ : ನಿನಾದ ಕಲ್ಚರಲ್ ಅಕಾಡೆಮಿ ಸಹಯೋಗದಲ್ಲಿ ಮಂಗಳವಾರ ಸಂಜೆ ಮುಂಡಳ್ಳಿಯ ಉತ್ಥಾನ ಕಲಾ ಭವನದಲ್ಲಿ ರಕ್ಷಾ ಬಂಧನ ಕಾರ್ಯಕ್ರಮವನ್ನು ಸರಳವಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಮುಂಡಳ್ಳಿ ಭಾಗದ ವಿದ್ಯಾರ್ಥಿಗಳಿಗಾಗಿ ಉಮೇಶ ಮುಂಡಳ್ಳಿ ಹಾಗೂ ರೇಷ್ಮಾ ಉಮೇಶ ದಂಪತಿಗಳು ಕಾರ್ಯಕ್ರಮವನ್ನು ಆಯೋಜಿಸಿದ್ದರು. ವಿದ್ಯಾರ್ಥಿಗಳು ಪರಸ್ಪರ ರಕ್ಷೆ ಕಟ್ಟಿಕೊಂಡು, ಸಿಹಿ ಹಂಚಿಕೊಳ್ಳುವ ಮೂಲಕ ರಕ್ಷಾ ಬಂಧನದ ಸಂಭ್ರಮವನ್ನು ಆಚರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಉಮೇಶ ಮುಂಡಳ್ಳಿ ಅವರು, ರಕ್ಷಾ ಬಂಧನದ ಹುಟ್ಟು, ಅದರ ಮಹತ್ವ ಹಾಗೂ ಪೌರಾಣಿಕ ಹಿನ್ನೆಲೆಯನ್ನು ವಿದ್ಯಾರ್ಥಿಗಳಿಗೆ ಎಳೆಎಳೆಯಾಗಿ ವಿವರಿಸಿ, ಸಹೋದರತ್ವ, ಪ್ರೀತಿ, ಪರಸ್ಪರ ಗೌರವ ಹಾಗೂ ರಕ್ಷಣೆಯ ಭಾವನೆಗಳನ್ನು ಬೆಳೆಸುವಲ್ಲಿ ಈ ಹಬ್ಬದ ಮಹತ್ವವನ್ನು ತಿಳಿಸಿದರು.

ನಿನಾದ ಕಲ್ಚರಲ್ ಅಕಾಡೆಮಿಯ ಪ್ರಧಾನ ಸಂಚಾಲಕಿ ರೇಷ್ಮಾ ಉಮೇಶ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಮಾರಿ ವಿಜೇತ ನಾಯ್ಕ ವಂದಿಸಿದರು. ಕುಮಾರಿ ನಿನಾದ ದೇಶಭಕ್ತಿಗೀತೆಯನ್ನು ಹಾಡಿದರು.

ವಿದ್ಯಾರ್ಥಿಗಳಲ್ಲಿ ಸಹೋದರತ್ವ ಮತ್ತು ಪರಸ್ಪರ ಬಾಂಧವ್ಯದ ಭಾವನೆ ಮೂಡಿಸುವ ಮೂಲಕ ಕಾರ್ಯಕ್ರಮವು ಅರ್ಥಪೂರ್ಣವಾಗಿ ನಡೆಯಿತು.