ಎಸ್‌ ಸಿ ಎಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ

0
10

ಮಂಗಳೂರು : ಎಸ್‌ ಸಿ ಎಸ್ ಪ್ರಥಮ ದರ್ಜೆ ಕಾಲೇಜಿನ ಕ್ರೀಡಾ ಮತ್ತು ಕ್ರೀಡಾಕೂಟ ಸಂಘದ ವತಿಯಿಂದ ರಾಷ್ಟ್ರೀಯ ಕ್ರೀಡಾ ದಿನಾಚರಣೆನ್ನು ಅಗಸ್ಟ್ 31, 2026 ರಂದು ಕಾಲೇಜಿನಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು. ಹಾಕಿ ದಿಗ್ಗಜ ಮೇಜರ್ ಧ್ಯಾನ್ ಚಂದ್ ಅವರ ಜನ್ಮದಿನದ ಸ್ಮರಣಾರ್ಥ ಆಯೋಜಿಸಲಾದ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಕ್ರೀಡೆ, ದೈಹಿಕ ಕ್ಷಮತೆ, ಶಿಸ್ತು, ತಂಡ ಮನೋಭಾವ ಹಾಗೂ ಆರೋಗ್ಯಕರ ಜೀವನಶೈಲಿಯ ಮಹತ್ವವನ್ನು ಮೂಡಿಸುವ ಉದ್ದೇಶವನ್ನು ಹೊಂದಿತ್ತು.

ಬೆಳಗ್ಗೆ 11.45ಕ್ಕೆ ಔಪಚಾರಿಕ ಕಾರ್ಯಕ್ರಮ ನಡೆಯಿತು. ಸಂಸ್ಥೆಯ ಗೀತೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಎಸ್.ಡಿ.ಎಂ. ಕಾಲೇಜ್ ಆಫ್ ಬಿಸಿನೆಸ್ ಮ್ಯಾನೇಜ್‌ ಮೆಂಟ್, ಮಂಗಳೂರಿನ ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಭರತ್ ಕುಮಾರ್ ಜೈನ್ ಅವರು ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಕ್ರೀಡೆ ಮತ್ತು ದೈಹಿಕ ಕ್ಷಮತೆಯ ಮಹತ್ವವನ್ನು ವಿವರಿಸಿದರು.

ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದ ಅವರು, ಕ್ರೀಡೆಯು ಶಿಸ್ತು, ಆತ್ಮವಿಶ್ವಾಸ, ತಂಡ ಮನೋಭಾವ ಹಾಗೂ ಆರೋಗ್ಯಕರ ಜೀವನಶೈಲಿಯನ್ನು ಬೆಳೆಸಲು ಸಹಕಾರಿಯಾಗಿದೆ ಎಂದು ತಿಳಿಸಿದರು.ಕಾಲೇಜಿನ ಪ್ರಾಂಶುಪಾಲರು ಹಾರ್ದಿಕ್ ಪಿ. ಚೌಹಾಣ್ ಅಧ್ಯಕ್ಷೀಯ ಭಾಷಣ ಮಾಡಿದರು. ಶೈಕ್ಷಣಿಕ ಚಟುವಟಿಕೆಗಳ ಜೊತೆಗೆ ದೈಹಿಕ ಚಟುವಟಿಕೆಗಳಿಗೂ ಸಮಾನ ಆದ್ಯತೆ ನೀಡುವ ಮೂಲಕ ವಿದ್ಯಾರ್ಥಿಗಳು ಸಮತೋಲನದ ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ಹಿಂದಿ ವಿಭಾಗದ ಸಹಾಯಕ ಪ್ರಾಧ್ಯಾಪಕರು ಹಾಗೂ ಕ್ರೀಡಾ ಮತ್ತು ಕ್ರೀಡಾಕೂಟ ಸಂಘದ ಸಹ ಸಂಚಾಲಕ ದೀಕ್ಷಿತ್ ಅವರು ರಾಷ್ಟ್ರೀಯ ಕ್ರೀಡಾ ದಿನದ ಮಹತ್ವ ಹಾಗೂ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಕ್ರೀಡೆ ಮತ್ತು ದೈಹಿಕ ಚಟುವಟಿಕೆಗಳ ಪಾತ್ರದ ಕುರಿತು ಪ್ರಾಸ್ತಾವಿಕ ಭಾಷಣ ಮಾತನಾಡಿದರು.

ವ್ಯವಹಾರ ಆಡಳಿತ ವಿಭಾಗದ ಮುಖ್ಯಸ್ಥರು ಹಾಗೂ ವಿದ್ಯಾರ್ಥಿ ಕಲ್ಯಾಣ ಮಾರ್ಗದರ್ಶಕರಾದ ತಿಲಕ್ ಗೌಡ ಅವರು ರಾಷ್ಟ್ರೀಯ ಕ್ರೀಡಾ ದಿನ ಹಾಗೂ ‘ಫಿಟ್ ಇಂಡಿಯಾ’ ಪ್ರತಿಜ್ಞಾವಿಧಿ ಬೋಧಿಸಿದರು. ತೃತೀಯ ಬಿ.ಸಿ.ಎ. ವಿದ್ಯಾರ್ಥಿನಿ ರೀಶಲ್ ಡಿಸೋಜಾ ಅವರು “ನಿಮ್ಮ ಕ್ರೀಡಾ ದಿಗ್ಗಜನನ್ನು ಅರಿಯಿರಿ – ಮೇಜರ್ ಧ್ಯಾನ್ ಚಂದ್: ಕ್ರೀಡಾ ಗೌರವ ನಮನ” ಎಂಬ ವಿಷಯದ ಮೂಲಕ ಮೇಜರ್ ಧ್ಯಾನ್ ಚಂದ್ ಅವರ ಕ್ರೀಡಾ ಸಾಧನೆ ಹಾಗೂ ಭಾರತೀಯ ಕ್ರೀಡಾಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿದರು.ವಿದ್ಯಾರ್ಥಿ ಕಲ್ಯಾಣ ಪರಿಷತ್ತಿನ ಅಧ್ಯಕ್ಷೆ ಸಾನ್ವಿ ಎಂ. ಎಸ್ ಸ್ವಾಗತಿಸಿದರು. ತೃತೀಯ ಬಿ.ಎಸ್ಸಿ ವಿದ್ಯಾರ್ಥಿನಿ ಶ್ರಾವ್ಯ ಜೆ. ಎಸ್. ನಿರೂಪಿಸಿದರು.

ತೃತೀಯ ಬಿ.ಸಿ.ಎ ವಿದ್ಯಾರ್ಥಿ ಸುಶಾಂತ್ ಎ. ಸುವರ್ಣ ವಂದನಾರ್ಪಣೆ ಸಲ್ಲಿಸಿದರು. ರಾಷ್ಟ್ರಗೀತೆ ಯೊಂದಿಗೆ ಔಪಚಾರಿಕ ಕಾರ್ಯಕ್ರಮ ಮುಕ್ತಾಯಗೊಂಡಿತು.
ಮಧ್ಯಾಹ್ನ 2.30ಕ್ಕೆ ಕಾಲೇಜಿನ ಕ್ರೀಡಾಂಗಣದಲ್ಲಿ “ಏಕ್ ಘಂಟಾ ಖೇಲ್ ಕೆ ಮೈದಾನ್ ಮೇ – ಒಂದು ಗಂಟೆ ಕ್ರೀಡಾಂಗಣದಲ್ಲಿ” ಎಂಬ ಆಶಯ ದಡಿ ಕಾರ್ಯಕ್ರಮದ ಎರಡನೇ ಹಂತ ನಡೆಯಿತು.

ಸಾಮೂಹಿಕ ಓಟ ಹಾಗೂ ದೇಹವನ್ನು ಸಿದ್ಧಗೊಳಿಸುವ ವ್ಯಾಯಾಮ, ಸಾಮೂಹಿಕ ದೈಹಿಕ ವ್ಯಾಯಾಮ ಮತ್ತು ಸಾಮೂಹಿಕ ಏರೋಬಿಕ್ಸ್‌ಗಳಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡರು. ಜೊತೆಗೆ ಸಾಂಪ್ರದಾಯಿಕ ಆಟಗಳನ್ನೂ ಆಯೋಜಿಸಲಾಗಿದ್ದು, ವಿದ್ಯಾರ್ಥಿಗಳಲ್ಲಿ ತಂಡ ಮನೋಭಾವ, ಕ್ರೀಡಾಸ್ಫೂರ್ತಿ ಹಾಗೂ ಸಾಮೂಹಿಕ ಭಾಗವಹಿಸುವಿಕೆಯನ್ನು ಉತ್ತೇಜಿಸಲಾಯಿತು.