ಕರಾವಳಿಗೆ ಹೈಕೋರ್ಟ್ ಪೀಠದ ಬೇಡಿಕೆ : ಆ.22ರಂದು ಉಡುಪಿಯಲ್ಲಿ ಬೃಹತ್ ಜನಾಂದೋಲನ

0
14

ಉಡುಪಿ :ಕರಾವಳಿ ಭಾಗದ ಜನರಿಗೆ ನ್ಯಾಯಾಂಗ ಸೇವೆಗಳನ್ನು ಇನ್ನಷ್ಟು ಸಮೀಪಗೊಳಿಸುವ ಉದ್ದೇಶದಿಂದ ಕರಾವಳಿಗೆ ಪ್ರತ್ಯೇಕ ಹೈಕೋರ್ಟ್ ಪೀಠ ಸ್ಥಾಪಿಸಬೇಕೆಂಬ ಬೇಡಿಕೆ ಮತ್ತೊಮ್ಮೆ ಬಲ ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ Team U-ACT – Udupi Advocacy of Consumers & Citizens ನೇತೃತ್ವದಲ್ಲಿ ಆ.22ರಂದು ಉಡುಪಿಯಲ್ಲಿ ಬೃಹತ್ ಜನಾಂದೋಲನ ಆಯೋಜಿಸಲಾಗಿದೆ.

ಆ.22ರಂದು ಶನಿವಾರ ಮಧ್ಯಾಹ್ನ 3ರಿಂದ 5ರವರೆಗೆ ಉಡುಪಿಯ MGM ಕಾಲೇಜಿನ ರವೀಂದ್ರ ಮಂಟಪದಲ್ಲಿ ಹೋರಾಟ ನಡೆಯಲಿದೆ. ಸಾರ್ವಜನಿಕರು, ವಕೀಲರು, ವಿದ್ಯಾರ್ಥಿಗಳು ಹಾಗೂ ವಿವಿಧ ಸಾಮಾಜಿಕ ಸಂಘಟನೆಗಳ ಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ U-ACT ಮನವಿ ಮಾಡಿದೆ.

ಕರಾವಳಿ ಭಾಗದ ಜನರು ಹೈಕೋರ್ಟ್‌ಗೆ ಸಂಬಂಧಿಸಿದ ಹಲವು ವಿಚಾರಗಳಿಗಾಗಿ ದೂರದ ಬೆಂಗಳೂರಿಗೆ ತೆರಳಬೇಕಾಗುತ್ತಿದ್ದು, ಇದರಿಂದ ಸಮಯ, ಹಣ ಹಾಗೂ ಮಾನಸಿಕ ಒತ್ತಡ ಹೆಚ್ಚುತ್ತಿದೆ ಎಂದು ಸಂಘಟನೆ ತಿಳಿಸಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಜನರಿಗೆ ಅನುಕೂಲವಾಗುವಂತೆ ಕರಾವಳಿ ಭಾಗದಲ್ಲೇ ಹೈಕೋರ್ಟ್ ಪೀಠ ಸ್ಥಾಪನೆಯಾಗಬೇಕು ಎಂಬುದು ಹೋರಾಟದ ಪ್ರಮುಖ ಬೇಡಿಕೆಯಾಗಿದೆ.

ಹೈಕೋರ್ಟ್ ಪೀಠ ಕರಾವಳಿಯಲ್ಲಿ ಸ್ಥಾಪನೆಯಾದರೆ ದೂರದ ಪ್ರಯಾಣದ ಸಮಸ್ಯೆ ಕಡಿಮೆಯಾಗುವುದರ ಜೊತೆಗೆ ಪ್ರಯಾಣ, ವಸತಿ, ವಕೀಲರ ಶುಲ್ಕ ಸೇರಿದಂತೆ ನ್ಯಾಯಕ್ಕಾಗಿ ಜನರು ಮಾಡಬೇಕಾಗುವ ಹೆಚ್ಚುವರಿ ವೆಚ್ಚವೂ ಇಳಿಕೆಯಾಗಲಿದೆ. ವಿಶೇಷವಾಗಿ ಬಡವರು, ಮಧ್ಯಮ ವರ್ಗದವರು, ಹಿರಿಯ ನಾಗರಿಕರು ಹಾಗೂ ಮಹಿಳೆಯರಿಗೆ ಇದು ಹೆಚ್ಚಿನ ಅನುಕೂಲ ಕಲ್ಪಿಸಲಿದೆ ಎಂದು U-ACT ಅಭಿಪ್ರಾಯಪಟ್ಟಿದೆ.

ಇದಲ್ಲದೆ ಕರಾವಳಿ ಭಾಗಕ್ಕೆ ಸಂಬಂಧಿಸಿದ CRZ ನಿಯಮಗಳು, ಮೀನುಗಾರಿಕೆ, ಬಂದರು, ಭೂಮಿ ಹಾಗೂ ಪರಿಸರಕ್ಕೆ ಸಂಬಂಧಿಸಿದ ವಿಶೇಷ ಪ್ರಕರಣಗಳ ವಿಚಾರಣೆಗೆ ಸ್ಥಳೀಯವಾಗಿ ನ್ಯಾಯ ದೊರೆಯುವ ಸಾಧ್ಯತೆ ಹೆಚ್ಚಲಿದೆ. ಹೈಕೋರ್ಟ್ ಪೀಠ ಸ್ಥಾಪನೆಯಿಂದ ಅಧೀನ ನ್ಯಾಯಾಲಯಗಳ ಮೇಲಿನ ಒತ್ತಡವೂ ಕಡಿಮೆಯಾಗಿ ನ್ಯಾಯಾಂಗ ವ್ಯವಸ್ಥೆ ಮತ್ತಷ್ಟು ಚುರುಕುಗೊಳ್ಳಲಿದೆ ಎಂದು ಸಂಘಟನೆ ಹೇಳಿದೆ.

ಕಳೆದ ಹಲವು ವರ್ಷಗಳಿಂದ ಕರಾವಳಿ ಭಾಗದಲ್ಲಿ ಹೈಕೋರ್ಟ್ ಪೀಠದ ಬೇಡಿಕೆ ಕೇಳಿಬರುತ್ತಿದ್ದು, ಇದೀಗ ಜನಾಂದೋಲನದ ಮೂಲಕ ಈ ಬೇಡಿಕೆಯನ್ನು ಸರ್ಕಾರದ ಗಮನಕ್ಕೆ ಪರಿಣಾಮಕಾರಿಯಾಗಿ ತರುವ ಪ್ರಯತ್ನ ನಡೆಯುತ್ತಿದೆ. ‘ನ್ಯಾಯ ಎಲ್ಲರಿಗೂ ಸಮೀಪದಲ್ಲಿ ಸಿಗಬೇಕು’ ಎಂಬ ಆಶಯದೊಂದಿಗೆ ನಡೆಯುತ್ತಿರುವ ಈ ಹೋರಾಟಕ್ಕೆ ಸಾರ್ವಜನಿಕರು ಕೈಜೋಡಿಸಬೇಕು ಎಂದು U-ACT ಕರೆ ನೀಡಿದೆ.

ವರದಿ: ವಿನೋದ್ ಶೆಟ್ಟಿ, ಉಡುಪಿ