ಕೆಟಿಪಿಪಿ ಕಾಯ್ದೆಯ ಕಲಂ 4(ಜಿ) ದುರುಪಯೋಗ : ಮುಖ್ಯಕಾರ್ಯದರ್ಶಿ ಅವರಿಗೆ ದೂರು – ತನಿಖೆಗೆ ಗುತ್ತಿಗೆದಾರರ ಸಂಘ ಒತ್ತಾಯ..!

0
16

ಬೆಂಗಳೂರು : ಲೋಕೋಪಯೋಗಿ ಇಲಾಖೆಯ ಕಟ್ಟಡಗಳ ವಿಭಾಗ–1 ಮತ್ತು ವಿಭಾಗ–2 ರ ಕಾಮಗಾರಿಗಳಲ್ಲಿ ಕೆಟಿಪಿಪಿ ಕಾಯ್ದೆಯ ಕಲಂ 4(ಜಿ) ದುರುಪಯೋಗವಾಗುತ್ತಿದ್ದು, ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಕರ್ನಾಟಕ ರಾಜ್ಯ ಮಾದಿಗ ಗುತ್ತಿಗೆದಾರರ ಸಂಘ ಒತ್ತಾಯಿಸಿದೆ.

ಈ ಸಂಬಂಧ ಮುಖ್ಯಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರಿಗೆ ದೂರು ನೀಡಿದ್ದು ಈ ಕಾಮಗಾರಿಗಳನ್ನು ಪರಿಶೀಲನೆಗೆ ಒಳಪಡಿಸಬೇಕು. ಕರ್ನಾಟಕ ಸಾರ್ವಜನಿಕ ಖರೀದಿಗಳಲ್ಲಿ ಪಾರದರ್ಶಕತೆ ಕಾಯ್ದೆ, 1999 ರ ಕಲಂ 4(ಜಿ) ಯನ್ನು ಅತ್ಯಂತ ಅಗತ್ಯ ಹಾಗೂ ತುರ್ತು ಸಂದರ್ಭಗಳಲ್ಲಿ ಮಾತ್ರ ಬಳಸಬೇಕಾಗಿದೆ.

ಆದರೆ ಇತ್ತೀಚಿನ ದಿನಗಳಲ್ಲಿ ವಿಶೇಷವಾಗಿ ಲೋಕೋಪಯೋಗಿ ಇಲಾಖೆಯ ಕೆಲವು ವಿಭಾಗಗಳಲ್ಲಿ, ಈ ವಿಧಿಯನ್ನು ಸಾಮಾನ್ಯ ನಿಯಮದಂತೆ ಬಳಸಿಕೊಂಡು ಟೆಂಡರ್ ಪ್ರಕ್ರಿಯೆಗೆ ವಿನಾಯಿತಿ ನೀಡಿ ಕಾಮಗಾರಿಗಳನ್ನು ಹಂಚಿಕೆ ಮಾಡಲಾಗುತ್ತಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಡಾ ಎಸ್. ಸಂಗಮೇಶ್ ದೂರಿದ್ದಾರೆ.

ಸರ್ಕಾರಿ ಕಾಮಗಾರಿಗಳ ಹಂಚಿಕೆಯಲ್ಲಿ ಪಾರದರ್ಶಕತೆ, ಸ್ಪರ್ಧಾತ್ಮಕತೆ ಹಾಗೂ ಸಮಾನ ಅವಕಾಶವನ್ನು ಖಚಿತಪಡಿಸುವ ಉದ್ದೇಶದಿಂದ ಜಾರಿಗೊಂಡಿರುವ ಕೆಟಿಪಿಪಿ ಕಾಯ್ದೆಯ ಮೂಲ ಆಶಯಕ್ಕೆ ಇಂತಹ ಕ್ರಮಗಳು ವಿರುದ್ಧವಾಗಿವೆ. ಸಾರ್ವಜನಿಕ ಹಣದ ಸಮರ್ಪಕ ಬಳಕೆ ಹಾಗೂ ಸಾಮಾಜಿಕ ನ್ಯಾಯದ ತತ್ವಗಳಿಗೆ ಧಕ್ಕೆ ಉಂಟುಮಾಡುವ ಸಾಧ್ಯತೆ ಇದೆ. ಎಲ್ಲಾ ಇಲಾಖೆಗಳಿಗೆ ಕಲಂ 4(ಜಿ) ಬಳಕೆ ಕುರಿತು ಸ್ಪಷ್ಟ ಹಾಗೂ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಹೊರಡಿಸಬೇಕು ಎಂದು ಅವರು ಮುಖ್ಯಕಾರ್ಯದರ್ಶಿ ಅವರನ್ನು ಒತ್ತಾಯಿಸಿದ್ದಾರೆ.

ಲೋಕೋಪಯೋಗಿ ಇಲಾಖೆಯ ಕಟ್ಟಡಗಳ ವಿಭಾಗ–1 ಮತ್ತು ವಿಭಾಗ–2 ರಲ್ಲಿ ಕಳೆದ ಐದು ವರ್ಷಗಳಲ್ಲಿ ಕಲಂ 4(ಜಿ) ಅಡಿಯಲ್ಲಿ ಮಂಜೂರಾಗಿರುವ ಕಾಮಗಾರಿಗಳ ಕುರಿತು ಸಮಗ್ರ ಹಾಗೂ ಸ್ವತಂತ್ರ ತನಿಖೆ ನಡೆಸಬೇಕು. ಪ್ರತಿಯೊಂದು ಪ್ರಕರಣಕ್ಕೆ ಸಂಬಂಧಿಸಿದ ಕಡತದ ಟಿಪ್ಪಣಿಗಳು, ತುರ್ತು ಪರಿಸ್ಥಿತಿಯನ್ನು ಸಮರ್ಥಿಸುವ ದಾಖಲೆಗಳು ಹಾಗೂ ಸಮರ್ಥ ಪ್ರಾಧಿಕಾರದ ಲಿಖಿತ ಅನುಮೋದನೆಗಳನ್ನು ಪರಿಶೀಲಿಸಿ, ನಿಯಮ ಉಲ್ಲಂಘನೆ ಕಂಡುಬಂದಲ್ಲಿ, ಸಂಬಂಧಿತ ಪ್ರಕರಣಗಳ ಕುರಿತು ಇಲಾಖಾ ತನಿಖೆ ನಡೆಸಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಇಲಾಖಾ ಹಾಗೂ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.

ರಾಜ್ಯದ ಇತರೆ ಭಾಗಗಳಲ್ಲಿ ಅಪರೂಪವಾಗಿ ಕಂಡುಬರುವ ಈ ರೀತಿಯ ಕ್ರಮಗಳು ಬೆಂಗಳೂರು ನಗರದಲ್ಲಿ ವ್ಯಾಪಕವಾಗಿವೆ. ಕಲಂ 4(ಜಿ) ಅಡಿ ಮಂಜೂರಾದ ಕಾಮಗಾರಿಗಳ ಸಂಪೂರ್ಣ ವಿವರಗಳನ್ನು ಸಾರ್ವಜನಿಕ ವಲಯದಲ್ಲಿ ಪ್ರಕಟಿಸುವ ವ್ಯವಸ್ಥೆ ಜಾರಿಗೆ ತರಬೇಕು. ಮಂಜೂರಾಗಿರುವ ಕಾಮಗಾರಿಗಳ ಕುರಿತು ವಿಶೇಷ ಲೆಕ್ಕಪರಿಶೋಧನೆ ನಡೆಸಬೇಕು. ಸರ್ಕಾರದ ಆರ್ಥಿಕ ಹಿತಾಸಕ್ತಿಯನ್ನು ಸಂರಕ್ಷಿಸುವ ಉದ್ದೇಶದಿಂದ ಸಮಾನ ಸ್ವರೂಪದ ಇತ್ತೀಚಿನ ಟೆಂಡರ್ಗಳ ಕನಿಷ್ಠ ದರಗಳನ್ನು ಮಾನದಂಡವಾಗಿ ಪರಿಗಣಿಸುವ ಕಡ್ಡಾಯ ಮಾರ್ಗಸೂಚಿಗಳನ್ನು ರೂಪಿಸಬೇಕು ಎಂದು ಡಾ. ಎಸ್. ಸಂಗಮೇಶ್ ಒತ್ತಾಯಿಸಿದ್ದಾರೆ.

ಕಲಂ 4(ಜಿ) ಯು ಅಪವಾದಾತ್ಮಕ ವಿಧಿಯಾಗಿದ್ದು, ಅದನ್ನು ಸಾಮಾನ್ಯ ಆಡಳಿತಾತ್ಮಕ ಅನುಕೂಲಕ್ಕಾಗಿ ಬಳಸುವುದನ್ನು ನಿರ್ಬಂಧಿಸಿ, ಅತ್ಯಂತ ಅಗತ್ಯ ಹಾಗೂ ಕಾನೂನುಬದ್ಧ ತುರ್ತು ಸಂದರ್ಭಗಳಲ್ಲಿ ಮಾತ್ರ ಅದರ ಬಳಕೆಯನ್ನು ಸೀಮಿತಗೊಳಿಸುವ ಕುರಿತು ಎಲ್ಲಾ ಇಲಾಖೆಗಳಿಗೆ ಸಮಗ್ರ ನಿರ್ದೇಶನ ನೀಡಬೇಕು. ಸಾರ್ವಜನಿಕ ಹಣದ ಸಂರಕ್ಷಣೆ, ಪಾರದರ್ಶಕತೆ, ಸಮಾನ ಅವಕಾಶ ಹಾಗೂ ಸಾಮಾಜಿಕ ನ್ಯಾಯ ಕಾಪಾಡುವುದು ಸರ್ಕಾರದ ಸಾಂವಿಧಾನಿಕ ಮತ್ತು ಕಾನೂನುಬದ್ಧ ಜವಾಬ್ದಾರಿಯಾಗಿದೆ. ಆದ್ದರಿಂದ, ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಅಗತ್ಯ ಕ್ರಮಗಳನ್ನು ಕೈಗೊಂಡು ಸಾರ್ವಜನಿಕ ಖರೀದಿ ವ್ಯವಸ್ಥೆಯ ಮೇಲಿನ ಜನರ ವಿಶ್ವಾಸವನ್ನು ಉಳಿಸಬೇಕು ಎಂದು ಒತ್ತಾಯಿಸಿದ್ದಾರೆ.

ದೂರಿಗೆ ಸಂಘದ ಪದಾಧಿಕಾರಿಗಳಾದ ಜಿ. ಎಂ. ಬಬಲಾದ್, ನಿಂಗರಾಜ್ ಗುಳೆ, ಮಂಜುನಾಥ್ ಬಿ, ಪ್ರವೀಣ ಬಿ, ಸುರೇಶ್ ಕಟ್ಟಿಮನಿ ಮತ್ತು ವಕೀಲರಾದ ಮೈಲಾರಪ್ಪ ಸಹಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here