ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಮೂಲಕ ಮಹಾಯೋಜನೆ ( ಮಾಸ್ಟರ್ ಪ್ಲಾನ್) ತಯಾರಿಕೆ ಕರಡು ಹಂತಕ್ಕೆ ಬಂದಿದ್ದು, ವಾಸ್ತವ ಮತ್ತು ಕಾರ್ಯ ಸಾಧುವಾದ ಯೋಜನೆ ರಚಿಸುವ ನಿಟ್ಟಿನಲ್ಲಿ ಶಾಸಕ ಯಶ್ ಪಾಲ್ ಸುವರ್ಣ ಅಧ್ಯಕ್ಷತೆಯಲ್ಲಿ ನಗರಸಭೆ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಹಾಗೂ ಉಡುಪಿ ನಗರದ ಇಂಜಿನಿಯರ್ ಹಾಗೂ ಕ್ರೆಡೈ ಸಂಸ್ಥೆಗಳ ಪ್ರತಿನಿಧಿಗಳ ಸಭೆ ನಡೆಸಿದರು.
ಈ ಹಿಂದೆ 2008 ನೇ ಇಸವಿಯಲ್ಲಿ ಮಾಸ್ಟರ್ ಪ್ಲ್ಯಾನ್ ತಯಾರಿಸಲಾಗಿದ್ದು, ಕಳೆದ 18 ವರ್ಷಗಳಲ್ಲಿ ಉಡುಪಿ ನಗರವು ಗಮನಾರ್ಹ ಬೆಳವಣಿಗೆ ಹೊಂದಿದ್ದು, ಜಿಲ್ಲೆಯ ಕೇಂದ್ರ ಸ್ಥಾನವಾಗಿ ಮುಂದಿನ ವರ್ಷಗಳಲ್ಲಿ ಯೋಜನಾ ಬದ್ಧ ಬೆಳವಣಿಗೆಗೆ ಮತ್ತು ಅಭಿವೃದ್ಧಿ ಪೂರಕ ಮಾಸ್ಟರ್ ಪ್ಲಾನ್ ಅತ್ಯಗತ್ಯವಾಗಿದೆ. ಉಡುಪಿ ನಗರವು ಸುವ್ಯವಸ್ಥಿತ ಮೂಲ ಸೌಕರ್ಯ ಹಾಗೂ ಸುಂದರ ನಗರವಾಗಿ ಅಭಿವೃದ್ಧಿ ಹೊಂದಲು ಸಮಗ್ರ ಮಾಸ್ಟರ್ ಪ್ಲಾನ್ ರಚನೆ ಪ್ರಮುಖವಾಗಿದೆ.

ಕರಡು ಮಾಸ್ಟರ್ ಪ್ಲಾನ್ ಅನ್ನು ನಗರದ 35 ವಾರ್ಡ್ ಗಳು ಮತ್ತು ಒಂಬತ್ತು ಗ್ರಾಮ ಪಂಚಾಯಿತಿಗಳ ಸಾರ್ವಜನಿಕರಿಗೆ ಪರಿಶೀಲಿಸಿ ಮಾಹಿತಿ ಪಡೆಯಲು ಅವಕಾಶ ಕಲ್ಪಿಸಿ, ಆಕ್ಷೇಪಗಳನ್ನು ಸ್ವೀಕರಿಸಿ ಕೂಲಂಕುಶವಾಗಿ ಪರಿಗಣಿಸಿ, ಅಂತಿಮಗೊಳಿಸಬೇಕಾಗಿದೆ. ಅಲ್ಲದೆ ಈ ಬಗ್ಗೆ ಸ್ಥಳೀಯ ತಜ್ಞರ ಸಲಹೆ ಪಡೆದು, ಯೋಜನೆ ರೂಪಿಸಿದಲ್ಲಿ ಅನುಕೂಲವಾಗಲಿದೆ.
ಈ ಹಿಂದಿನ ಮಾಸ್ಟರ್ ಪ್ಲ್ಯಾನ್ ನಲ್ಲಿನ ಅವೈಜ್ಞಾನಿಕ ವಲಯಗಳು ಪ್ರಸ್ತಾವಿತ ರಸ್ತೆಗಳು ಮೊದಲಾದ ದೋಷಗಳನ್ನು ಸರಿಪಡಿಸಿಕೊಳ್ಳುವುದರೊಂದಿಗೆ ಆಧುನಿಕತೆಗೆ ಪೂರಕವಾಗಿ ಮಹಾಯೋಜನೆ ರಚನೆ ಆಗಬೇಕಾಗಿದೆ. ಈ ಬಗ್ಗೆ ತ್ವರಿತವಾಗಿ ಕಾರ್ಯಯೋನ್ಮುಖ ರಾಗುವಂತೆ ಶಾಸಕರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಹಾಯೋಜನೆಯಲ್ಲಿ ಅಳವಡಿಸಿಕೊಳ್ಳಬೇಕಾದ ವಿಷಯಗಳ ಕುರಿತು ಸಭೆಯಲ್ಲಿ ಸಮಗ್ರವಾಗಿ ಚರ್ಚಿಸಲಾಯಿತು.
ಸಭೆಯಲ್ಲಿ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು, ಉಡುಪಿ ನಗರಸಭೆಯ ಪೌರಾಯುಕ್ತರು, ನಗರಸಭೆಯ ಇಂಜಿನಿಯರ್ಗಳು, ಇಂಜಿನಿಯರ್ಸ್ ಮತ್ತು ಆರ್ಕಿಟೆಕ್ಟ್ ಸಂಸ್ಥೆ ಹಾಗೂ ಕ್ರೆಡೈ ಸಂಸ್ಥೆಯ ಪ್ರತಿನಿಧಿಗಳು ಉಪಸ್ಥಿತರಿದ್ದರು.

