ಆಶಾಗಳ ಬದುಕಿಗೆ ಭದ್ರತೆ ಯಾವಾಗ? ನ್ಯಾಯಯುತ ಬೇಡಿಕೆಗಳಿಗೆ ಸರಕಾರ ಸ್ಪಂದಿಸಲಿ

0
18

ಸಮಾಜದ ಆರೋಗ್ಯದ ಕಾಳಜಿಯಿಂದ ಮನೆಮನೆಗೆ ತೆರಳಿ ಆರೋಗ್ಯ ಸೇವೆ ಹಾಗೂ ಸರಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಆಶಾ ಕಾರ್ಯಕರ್ತೆಯರ ಬದುಕಿನ ಭದ್ರತೆಯೇ ಇಂದು ಪ್ರಶ್ನೆಯಾಗಿದೆ.

ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಅಹೋರಾತ್ರಿ ಧರಣಿ ಕೇವಲ ಗೌರವಧನ ಹೆಚ್ಚಳದ ಹೋರಾಟವಲ್ಲ. ಇದು ಶ್ರಮಕ್ಕೆ ತಕ್ಕ ಪ್ರತಿಫಲ, ಕುಟುಂಬದ ಭದ್ರತೆ ಹಾಗೂ ಗೌರವಯುತ ಬದುಕಿಗಾಗಿ ನಡೆಯುತ್ತಿರುವ ನ್ಯಾಯಯುತ ಹೋರಾಟವಾಗಿದೆ.

ವಿಶೇಷವಾಗಿ ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಸೋಂಕಿನ ಬಗ್ಗೆ ಜಾಗೃತಿ ಮೂಡಿಸುವುದು, ಮನೆಮನೆಗೆ ತೆರಳಿ ಆರೋಗ್ಯ ಮಾಹಿತಿ ಸಂಗ್ರಹಿಸುವುದು ಸೇರಿದಂತೆ ಮುಂಚೂಣಿಯಲ್ಲಿ ನಿಂತು ಸೇವೆ ಸಲ್ಲಿಸಿದವರು ಆಶಾ ಕಾರ್ಯಕರ್ತೆಯರು. ಗರ್ಭಿಣಿಯರ ಆರೋಗ್ಯ ಮೇಲ್ವಿಚಾರಣೆ, ಮಕ್ಕಳ ಲಸಿಕೆ, ತಾಯಿ ಮತ್ತು ಶಿಶು ಮರಣ ಪ್ರಮಾಣ ತಗ್ಗಿಸುವ ಪ್ರಯತ್ನ ಸೇರಿದಂತೆ ಆರೋಗ್ಯ ಇಲಾಖೆಯ ಹಲವು ಕಾರ್ಯಕ್ರಮಗಳ ಯಶಸ್ಸಿನಲ್ಲೂ ಇವರ ಪಾತ್ರ ಮಹತ್ವದ್ದು.

ಪ್ರಸ್ತುತ ದೊರೆಯುತ್ತಿರುವ ಸುಮಾರು 8 ಸಾವಿರ ರೂಪಾಯಿ ಗೌರವಧನದಲ್ಲಿ ಬೆಲೆ ಏರಿಕೆಯ ದಿನಗಳಲ್ಲಿ ಕುಟುಂಬ ನಿರ್ವಹಣೆ ಕಷ್ಟಕರವಾಗಿದೆ. ಕನಿಷ್ಠ 15 ಸಾವಿರ ರೂಪಾಯಿ ಗೌರವಧನ, ನಿವೃತ್ತಿ ಪಿಂಚಣಿ, ವೈದ್ಯಕೀಯ ನೆರವು ಹಾಗೂ ಉದ್ಯೋಗ ಭದ್ರತೆ ಇವರ ಪ್ರಮುಖ ಬೇಡಿಕೆಗಳಾಗಿವೆ.

ಆಶಾ ಕಾರ್ಯಕರ್ತೆಯರು ಆರೋಗ್ಯ ಇಲಾಖೆಯ ಬೆನ್ನೆಲುಬು ಮಾತ್ರವಲ್ಲ, ಜನರು ಮತ್ತು ಸರಕಾರದ ನಡುವಿನ ಪ್ರಮುಖ ಕೊಂಡಿಗಳು. ಸಮಾಜದ ಆರೋಗ್ಯಕ್ಕಾಗಿ ದುಡಿಯುವ ಇವರ ಬದುಕಿನ ಭದ್ರತೆಯೂ ಸರಕಾರದ ಆದ್ಯತೆಯಾಗಬೇಕು. ಅವರ ನ್ಯಾಯಯುತ ಬೇಡಿಕೆಗಳಿಗೆ ಸರಕಾರ ತಕ್ಷಣ ಸ್ಪಂದಿಸಿ ಗೌರವಯುತ ಬದುಕಿಗೆ ಅವಕಾಶ ಕಲ್ಪಿಸಬೇಕಿದೆ.

ವರದಿ : ಆದರ್ಶ್ ಶೆಟ್ಟಿ ಉಪ್ಪಿನಂಗಡಿ