ರಾಜಸ್ಥಾನ: ಭಿಲ್ವಾರಾ ಜಿಲ್ಲೆಯ ಕರೇಡಾ ಪಟ್ಟಣದಲ್ಲಿ ನಡೆದ ವಿಚಿತ್ರ ಕಳ್ಳತನದ ಘಟನೆ ಪೊಲೀಸರು ಹಾಗೂ ಸ್ಥಳೀಯರನ್ನು ಅಚ್ಚರಿಗೆ ಗುರಿಮಾಡಿದೆ. ಮೊಬೈಲ್ ಅಂಗಡಿಯ ಛಾವಣಿಯ ಮೂಲಕ ಒಳನುಗ್ಗಿದ ಕಳ್ಳರು ಸುಮಾರು ₹4ರಿಂದ ₹5 ಲಕ್ಷ ಮೌಲ್ಯದ 35ರಿಂದ 40 ಸ್ಮಾರ್ಟ್‌ಫೋನ್‌ಗಳನ್ನು ಕಳವು ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಅಂಗಡಿಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದ ದೃಶ್ಯಾವಳಿಗಳನ್ನು ಪರಿಶೀಲಿಸಿದ ವೇಳೆ, ಆರೋಪಿಗಳಲ್ಲಿ ಒಬ್ಬ ತನ್ನ ಗುರುತನ್ನು ಮರೆಮಾಡುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿಯವರನ್ನು ಹೋಲುವ ಮುಖವಾಡ ಧರಿಸಿರುವುದು ಕಂಡುಬಂದಿದೆ. ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿಯೂ ವ್ಯಾಪಕವಾಗಿ ಹರಿದಾಡುತ್ತಿವೆ.
ಕಳ್ಳರು ಅಂಗಡಿಯ ಛಾವಣಿಯನ್ನು ಒಡೆದು ಒಳನುಗ್ಗಿ ಮೊಬೈಲ್‌ಗಳನ್ನು ಕಳವು ಮಾಡಿ ಪರಾರಿಯಾಗಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಿಸಿಟಿವಿ ದೃಶ್ಯಗಳು ಹಾಗೂ ಇತರ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

