ವರದಿ ರಾಯಿ ರಾಜ ಕುಮಾರ್
ಮೂಡುಬಿದಿರೆ ಸಮಾಜ ಮಂದಿರದಲ್ಲಿ ಪೂಜಿಸಲ್ಪಡುತ್ತಿರುವ 63ನೇ ವರ್ಷದ ಗಣನಾಯಕನಿಗೆ ಸಮಿತಿಯ ವತಿಯಿಂದ ಚಿನ್ನದ ಜನಿವಾರ, ಬೆಳ್ಳಿಯ ಪರಿಕರಗಳನ್ನು ಸಮರ್ಪಿಸಲಾಯಿತು. ಐದು ದಿನಗಳ ಕಾಲ ಸಮಾಜ ಮಂದಿರದಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯುವ ಗಣೇಶ ಉತ್ಸವಕ್ಕೆ ಅಲಂಗಾರು ಬಡಗು ಮಹಾಲಿಂಗೇಶ್ವರ ದೇವಾಲಯದ ಸುಬ್ರಹ್ಮಣ್ಯ ಭಟ್ ಪ್ರತಿಷ್ಠಾಪೂಜೆ ಹಾಗೂ ಗಣ ಹೋಮವನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ದೀಪ ಬೆಳಗಿ ಸಾರ್ವಜನಿಕರ ಬೇಡಿಕೆಯನ್ನು ಈಡೇರಿಸುವ ಸಿದ್ಧಿ ವಿನಾಯಕನ ಈ ಸ್ಥಳ ಪವಿತ್ರವಾಗಿದೆ ಎಂದರು. ವೇದಿಕೆಯಲ್ಲಿ ಮಾಜಿ ಸಚಿವ ಸಮಾಜ ಮಂದಿರದ ಅಧ್ಯಕ್ಷ ಅಭಯ ಚಂದ್ರ ಜೈನ್, ಗಣೇಶೋತ್ಸವ ಟ್ರಸ್ಟಿಗಳಾದ ಅರಮನೆ ಕುಲದೀಪ್ ಎಂ, ಮಾಜಿ ಅಧ್ಯಕ್ಷ ಶ್ರೀಪತಿ ಭಟ್, ಜಯಶ್ರೀ ಶೆಟ್ಟಿ, ಹಾಜರಿದ್ದರು.
ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಎಂ ಎಲ್ಲರನ್ನು ಸ್ವಾಗತಿಸಿ ಕಾರ್ಯಕರ್ತರ ಶ್ರಮವನ್ನು ಕೊಂಡಾಡಿದರು. ಅಧ್ಯಕ್ಷ ನಾರಾಯಣ ಪಿ ಎಂ ಪ್ರಸ್ತಾವಿಕ ಮಾತಿನೊಂದಿಗೆ ಉತ್ಸವದ ವಿಚಾರಗಳನ್ನು ಸಭೆಗೆ ತಿಳಿಸಿದರು. ಉಪಾಧ್ಯಕ್ಷ ರಾಜಾರಾಮ್ ನಾಗರಕಟ್ಟೆ ಕಾರ್ಯಕ್ರಮ ನಿರೂಪಿಸಿದರು. ಖಜಾಂಚಿ ಚೇತನ್ ಕುಮಾರ್ ಶೆಟ್ಟಿ ವಂದಿಸಿದರು.

