ಹೆಬ್ರಿ : ದೇವರ ಹುಂಡಿಯಿಂದ ಹಣ ಕಳವುಗೈದ ಕಳ್ಳನೊಬ್ಬ ಪೊಲೀಸರ ಕೈಗೆ ಸಿಕ್ಕಿಬಿದ್ದ ಘಟನೆ ಮುದ್ರಾಡಿ ಗ್ರಾಮದಲ್ಲಿ ಸಂಭವಿಸಿದೆ. ಮುದ್ರಾಡಿ ಅಭಯಹಸ್ತೆ ಆದಿಶಕ್ತಿ ದೇವಸ್ಥಾನದಲ್ಲಿ ದೇವರ ಹುಂಡಿ ಹಾಗೂ ಕಲ್ಕುಡ ಕಲ್ಲುರ್ಟಿಯ ಕಾಣಿಕೆ ಡಬ್ಬಿಯಿಂದ ಮೇ 25ರಂದು ರಾತ್ರಿ ಕಳವಾಗಿತ್ತು. ಜೂ. 2ರ ಮಧ್ಯರಾತ್ರಿ ಕಳ್ಳ ಮತ್ತೊಮ್ಮೆ ಕಳ್ಳತನಕ್ಕಾಗಿ ದೇವಸ್ಥಾನಕ್ಕೆ ಬಂದಿದ್ದು, ಕದಿಯಲು ಪ್ರಯತ್ನಿಸುತ್ತಿರುವಾಗ ಕಾರೊಂದರಲ್ಲಿ ಹೋಗುತ್ತಿದ್ದವರು ನೋಡಿದ್ದು ಕೂಡಲೇ ಕಾರನ್ನು ನಿಲ್ಲಿಸಿ ಹಿಂದಕ್ಕೆ ಬಂದಾಗ ಆತ ಗೋಡೆ ಹಾರಿ ಬೈಕಿನಲ್ಲಿ ಪರಾರಿಯಾಗಿದ್ದ ಕಾರಿನವರು ದೇವಸ್ಥಾನದ ಸಮೀಪವಿರುವ ಕ್ಷೇತ್ರದ ಧರ್ಮಾಧಿಕಾರಿಯವರ ಮನೆಯವರಿಗೆ ವಿಷಯ ತಿಳಿಸಿ ಅವರ ಜತೆಗೂಡಿ ಕಳ್ಳನನ್ನು ಬೆನ್ನಟ್ಟಿದರು.
ಇದೇ ವೇಳೆ ಸೋಮೇಶ್ವರ ಮತ್ತು ಆಗುಂಬೆ ಚೆಕ್‌ಪೋಸ್ಟ್‌ಗೆ ಮಾಹಿತಿ ನೀಡಿದರು. ಕಳ್ಳ ಆಗುಂಬೆ ತಲುಪಿದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದನು. ವಿಚಾರಿಸಿದಾಗ ದಾವಣಗೆರೆ ಹರಿಹರದ ಸಲ್ಮಾನ್ ಎಂದು ಹೇಳಿ ಕೊಂಡಿದ್ದಾನೆ. ಹೆಬ್ರಿ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಹುಂಡಿಯಿಂದ ಕಳವಾದ ಬಗ್ಗೆ ಕ್ಷೇತ್ರದ ಧರ್ಮಾಧಿಕಾರಿ ಸುಕುಮಾರ್ ಮೋಹನ್ ಅವರು ಮೇ 30ರಂದು ಕ್ಷೇತ್ರದಲ್ಲಿ ನಡೆದ ನೇಮದಲ್ಲಿ ಕಲ್ಕುಡ ಕಲ್ಲುರ್ಟಿ ಮತ್ತು ಕೊರಗಜ್ಜ ದೈವಕ್ಕೆ ದೂರು ನೀಡಿದ್ದರು. 9 ದಿನದೊಳಗೆ ಆತನನ್ನು ತರಿಸಿಕೊಡುತ್ತೇನೆ ಎಂದು ದೈವ ಅಭಯ ನುಡಿದಿತ್ತು. ಆ ಬಳಿಕ ಕೇವಲ 3 ದಿನದ ಒಳಗೆ ಅದೇ ಕಳ್ಳ ಮತ್ತೆ ದೇವಸ್ಥಾನದ ಗುಡಿಗೆ ಕಳ್ಳತನಕ್ಕೆ ಬಂದು ಸಿಕ್ಕಿಬಿದ್ದಿರುವುದು ದೈವದ ಕಾರಣಿಕ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.