ಮುಲ್ಕಿ:ಕಿಲ್ಪಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮದಕ ಬಳಿ ಕಳೆದ ಎರಡು ದಿನದ ಹಿಂದೆ ಮಹಿಳೆಯೊಬ್ಬರಿಗೆ ಚಿರತೆ ಕಾಣಸಿಕ್ಕಿದ್ದು ಸ್ಥಳೀಯರು ಆತಂಕಗೊಂಡಿದ್ದಾರೆ
ಕಿಲ್ಪಾಡಿ ಮದಕ ಬಳಿಯ ಗುಲಾಬಿ ಎಂಬವರ ಮನೆಯ ನಾಯಿಯನ್ನು ಶನಿವಾರ ಬೆಳಗ್ಗೆ 3 ಗಂಟೆ ಸುಮಾರಿಗೆ ಚಿರತೆಯೊಂದು ಎಳೆದೊಯ್ಯುವ ಪ್ರಯತ್ನದಲ್ಲಿದ್ದಾಗ ನಾಯಿ ಬೊಬ್ಬೆ ಹಾಕಿದ್ದು ಕೂಡಲೆ ಮನೆಯವರು ಎಚ್ಚೆತ್ತು ಸ್ಥಳಕ್ಕೆ ಧಾವಿಸಿದಾಗ ಚಿರತೆ ಸ್ಥಳದಿಂದ ಪರಾರಿಯಾಗಿದೆ.
ಈ ಬಗ್ಗೆ ಗುಲಾಬಿಯವರು ಕಿಲ್ಪಾಡಿ ಪಂಚಾಯಿತಿಗೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದಾರೆ
ಸ್ಥಳಕ್ಕೆ ಕಿಲ್ಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ವಿಕಾಸ್ ಶೆಟ್ಟಿ, ಸದಸ್ಯ ಗೋಪಿನಾಥ ಪಡಂಗ, ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ, ಅರಣ್ಯ ಇಲಾಖೆ ಅಧಿಕಾರಿಗಳಾದ ನಾಗೇಶ್ ಬಿಲ್ಲವ, ಶಂಕರ್ ಭೇಟಿ ನೀಡಿ ಪರಿಶೀಲಿಸಿದ್ದು ಚಿರತೆ ಸೆರೆಗೆ ಬೋನ್ ಇರಿಸಲಾಗಿದೆ.
ಮುಲ್ಕಿ ತಾಲೂಕು ವ್ಯಾಪ್ತಿಯ ಕೊಲ್ಲೂರು ಪದವು, ಕಿನ್ನಿಗೋಳಿ ಪರಿಸರ ಹಾಗೂ ಮುಲ್ಕಿ ನಗರ ಪಂಚಾಯತ್ ಪರಿಸರದಲ್ಲಿ ಕೆಲ ತಿಂಗಳ ಹಿಂದೆ ಇದ್ದ ಚಿರತೆ ನಾಪತ್ತೆಯಾಗಿದ್ದು ಇದೀಗ ಮುಲ್ಕಿ ಪರಿಸರದಲ್ಲಿ ಮತ್ತೆ ಕಾಣಿಸಿಕೊಂಡಿದ್ದು ಸ್ಥಳೀಯರು ಭಯಭೀತರಾಗಿದ್ದಾರೆ