ಮುಂಬಯಿ ವಿವಿ ಕನ್ನಡ ವಿಭಾಗ ಮತ್ತು ಗೋರೆಗಾಂವ್ ಕರ್ನಾಟಕ ಸಂಘದ ಸಹಯೋಗದಲ್ಲಿ ಶ್ರೀನಿವಾಸ ಜೋಕಟ್ಟೆ ಮತ್ತು ಅನಿತಾ ತಾಕೊಡೆಯವರ ಕೃತಿ ಬಿಡುಗಡೆ

0
152

ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗ ಮತ್ತು ಗೋರೆಗಾಂವ್ ಕರ್ನಾಟಕ ಸಂಘ ಸಂಯುಕ್ತ ಆಶ್ರಯದಲ್ಲಿ ಶನಿವಾರ ಸಂಜೆ ಸಾಂತಾಕ್ರೂಜ್ ಪೂರ್ವದ ಕಲೀನಾ ಇಲ್ಲಿನ ವಿದ್ಯಾನಗರಿಯ ಜೆ.ಪಿ ನಾಯಕ್ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪತ್ರಕರ್ತ ಶ್ರೀನಿವಾಸ ಜೋಕಟ್ಟೆ ಅವರ ಮೂರು ಕೃತಿಗಳು ಹಾಗೂ ಕವಯತ್ರಿ ಅನಿತಾ ಪಿ.ತಾಕೊಡೆ ಅವರ ಒಂದು ಕೃತಿ ಸೇರಿದಂತೆ ಒಟ್ಟು ನಾಲ್ಕು ಕೃತಿಗಳ ಬಿಡುಗಡೆ ಕಾರ್ಯಕ್ರಮ ನಡೆಯಿತು. ಇದರ ಮುಖಾಂತರ ಇತ್ತೀಚೆಗೆ ನಮ್ಮನ್ನು ಅಗಲಿದ ಜಯಲಕ್ಷ್ಮಿ ಜೋಕಟ್ಟೆಯವರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಜಿ.ಎನ್.ಉಪಾಧ್ಯ ಅವರು, ಜೋಕಟ್ಟೆಯವರು ಬರೆದು ಜೀವಿಸಬಹುದು ಎಂದು ತೋರಿಸಿಕೊಟ್ಟವರು. ಪತ್ರಕರ್ತರು ಮತ್ತು ಲೇಖಕರಾಗಿ ಎರಡೂ ಕ್ಷೇತ್ರಗಳಲ್ಲಿ ಇವರ ಕೊಡುಗೆ ಅಪಾರ. ಕನ್ನಡ ವಿಭಾಗದ ವಿದ್ಯಾರ್ಥಿಗಳಿಗೂ ಇವರ ಮಾರ್ಗದರ್ಶನ ಒದಗಿ ಬಂದಿದೆ. ಕತೆಗಾರರಾಗಿ ವಿಭಿನ್ನ ಮಾದರಿಯ ಕತೆಗಳನ್ನು ಬರೆದಿದ್ದಾರೆ. ಇಡೀ ಕರ್ನಾಟಕದಲ್ಲಿ ಜೋಕಟ್ಟೆಯವರ ಲೇಖನಗಳು ಪ್ರಕಟವಾಗದ ಪತ್ರಿಕೆಗಳೇ ಇಲ್ಲವೆನ್ನಬಹುದು. ಕನ್ನಡ ವಿಭಾಗದ ಪ್ರತಿಭಾವಂತ ವಿದ್ಯಾರ್ಥಿನಿ ಅನಿತಾ ಅವರದು ಕಾವ್ಯವೇ ಪ್ರಮುಖ ಮಾಧ್ಯಮ. ಕಾವ್ಯವನ್ನು ನವಿರಾಗಿ ಕಟ್ಟುವ, ಪ್ರತಿಮೆಯನ್ನು ಬಳಸಿಕೊಂಡು ಮಾತನ್ನು ಕಾವ್ಯವಾಗಿಸುವ ಕಲೆ ಇವರಿಗೆ ಒಲಿದಿದೆ. ಇವರದ್ದು ಸ್ತ್ರೀವಾದಿ ಕವಿತೆಗಳಲ್ಲ. ಆಶಾವಾದವನ್ನು ಹುಟ್ಟಿಸುವ ಜೀವನೋತ್ಸಾಹವನ್ನು ತುಂಬುವ ಕವಿತೆಗಳಾಗಿವೆ. ಈವರೆಗೆ ನಾಲ್ಕು ಕವನ ಸಂಕಲನವನ್ನು ಪ್ರಕಟಿಸಿದ ಇವರು ಕಾವ್ಯ ಕ್ಷೇತ್ರದಲ್ಲಿ ಶಾಶ್ವತವಾಗಿ ಉಳಿಯಬಲ್ಲ ಕವಿತೆಗಳನ್ನು ಬರೆಯುವಲ್ಲಿ ಯಶಸ್ವಿಯಾಗಿದ್ದಾರೆ. ಎಂದು ನುಡಿದರು.

ತಾಕೊಡೆ ಎಂಟರ್ಪ್ರೈಸಸ್ ಪ್ರಕಟಿತ “ಮೇಣಕ್ಕಂಟಿದ ಬತ್ತಿ” ಕವನ ಸಂಕಲನವನ್ನು ಬಿಡುಗಡೆ ಮಾಡಿದ ಸೂರ್ಯಕಾಂತ್ ಸುವರ್ಣರು, ಅನಿತಾ ಅವರ ಆಳವಾದ ಅಧ್ಯಯನದ ಫಲಿತಾಂಶವನ್ನು ಅವರ ಬರವಣಿಗೆಯಲ್ಲಿರುವ ಕಲಾತ್ಮಕತೆಯನ್ನು ಸುವರ್ಣಯುಗ ಕೃತಿಯಲ್ಲಿ ಕಂಡರಿತಿದ್ದೇನೆ. ಅವರು ಕವಿ ಮಾತ್ರವಲ್ಲ, ಭಾವ ಅನುಭಾವಗಳನ್ನು ಬರವಣಿಗೆಯ ಮೂಲಕ ಚಿತ್ರಿಸುವ ಕಲಾವಿದರೂ ಹೌದು. ಕನ್ನಡ ವಿಭಾಗದ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ ಡಾ.ಜಿ.ಎನ್ ಉಪಾಧ್ಯರು ಒದಗಿದ್ದು ಸಾಹಿತ್ಯಲೋಕದ ಭಾಗ್ಯ ಎಂದರು.

ಶ್ರೀನಿವಾಸ ಜೋಕಟ್ಟೆ ಅವರ ಸಾಹಿತ್ಯ ಸುಗ್ಗಿ ಪ್ರಕಾಶನ ಬೆಂಗಳೂರು ಪ್ರಕಾಶಿತ “ಅದೆಲ್ಲಾ ಬಿಟ್ಟು” ಕಥಾ ಸಂಕಲನವನ್ನು ಬಿಡುಗಡೆ ಮಾಡಿದ ಪ್ರಶಸ್ತಿ ಪುರಸ್ಕೃತ ಕತೆಗಾರ್ತಿ, ಮಿತ್ರಾ ವೆಂಕಟ್ರಾಜ್ ಅವರು, ಲೇಖಕರ ಸ್ವಭಾವ, ಮನೋಬಲ, ನಿರ್ಧಾರ, ಯೋಜನೆಗಳು ಒಂದೇ ರೀತಿಯಿದ್ದು, ಕಾದಂಬರಿಯಾಗಿ ಓದಿದ ಅನುಭವ ನೀಡುತ್ತದೆ. ನಮ್ಮೂರು ಮತ್ತು ಮುಂಬಯಿ ಇವೆರಡರ ಬದುಕು ಕಟ್ಟಿಕೊಳ್ಳುತ್ತಾ ಅಲ್ಲಿನ ಬಡಗು, ಸಂಘರ್ಷ, ದ್ವಂದಗಳನ್ನು ಉದ್ವೇಗವಿಲ್ಲದೆ ತಾಳ್ಮೆಯಿಂದ ಪ್ರಸ್ತುತಪಡಿಸುವ ಸಾಮರ್ಥ್ಯ ಜೋಕಟ್ಟೆ ಅವರಿಗಿದೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಶ್ರೀರಾಮ ಪ್ರಕಾಶನ, ಮಂಡ್ಯ ಪ್ರಕಾಶಿತ ಪ್ರಚಂಡ ಮತ್ತು ಮಹಾಕಾಲ” ಲೇಖನಗಳ ಕೃತಿ ಮತ್ತು ‘ಬದುಕು ಬತ್ತದ ಭರವಸೆ’ ಲೇಖನಗಳ ” ಕೃತಿಯನ್ನು ಇಂಟರ್‌ನ್ಯಾಶನಲ್ ಇನ್‌ಸ್ಟಿಟ್ಯೂಟ್ ಟ್ರೇನಿಂಗ್ ಸೆಂಟರ್ (ಐಐಟಿಸಿ) ಸಂಸ್ಥೆಯ ನಿರ್ದೇಶಕರಾದ ವಿಕ್ರಾಂತ್ ಉರ್ವಾಳ್ ಬಿಡುಗಡೆಗೊಳಿಸಿ ಮಾತನಾಡುತ್ತ, ತನ್ನ ತಂದೆ, ಸ್ನೇಹಿತೆ ಮತ್ತು ಶಿಕ್ಷಕಿಯಾಗಿದ್ದ ತಾಯಿಯನ್ನು ಸ್ಮರಿಸಿಕೊಂಡರು. ಶ್ರೀನಿವಾಸ ಜೋಕಟ್ಟೆಯವರು ಸ್ವಂತ ಅನುಭವವನ್ನು ಇಟ್ಟುಕೊಂಡು ಕಥೆಗಳನ್ನು ಲೇಖನಗಳನ್ನು ಬರೆಯುತ್ತಾರೆ ಎಂದರು.

ಗೋರೆಗಾಂವ್ ಕರ್ನಾಟಕ ಸಂಘದ ಉಪಾಧ್ಯಕ್ಷರಾದ ಸರಿತಾ ನಾಯಕ್ ಅವರು ಪ್ರಾಸ್ತವಿಕವಾಗಿ ಮಾತನಾಡಿದರು. ಪತ್ರಕರ್ತ ಡಾ| ದಿನೇಶ್ ಶೆಟ್ಟಿ ರೆಂಜಾಳ ಮತ್ತು ಸಾಹಿತಿ ನ್ಯಾಯವಾದಿ ಅಮಿತಾ ಭಾಗ್ವತ್ ಕೃತಿಗಳನ್ನು ಪರಿಚಯಿಸಿದರು. ಇತ್ತೀಚೆಗೆ ಸ್ವರ್ಗಿಯರಾದ ಶ್ರೀನಿವಾಸ ಜೋಕಟ್ಟೆ ಅವರ ಧರ್ಮಪತ್ನಿ ಜಯಲಕ್ಷ್ಮೀ ಎಸ್.ಜೋಕಟ್ಟೆ ನಿಧನಕ್ಕೆ ಸಂತಾಪ ಸೂಚಿಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು. ಕನ್ನಡ ವಿಭಾಗದ ಸಹ ಪ್ರಾಧ್ಯಾಪಕಿ ಡಾ| ಪೂರ್ಣಿಮಾ ಎಸ್.ಶೆಟ್ಟಿ ಅವರು ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ಸಾಹಿತ್ಯಾಸಕ್ತರು, ಕನ್ನಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here